Advertisement

ನೀರಿನ ಸಮಸ್ಯೆ ಪರಿಹಾರಕ್ಕೆ ಮಜಲಕೆರೆ ಅಭಿವೃದ್ಧಿ ಅಗತ್ಯ

11:55 PM Dec 09, 2019 | Sriram |

ಬೆಳ್ಮಣ್‌: ಸತ್ಯನಾಪುರದ ಸಿರಿಯ ಕ್ಷೇತ್ರವೆಂಬ ಹೆಗ್ಗಳಿಕೆಯ ಜತೆ ವರಕವಿ ಮುದ್ದಣನ ಹುಟ್ಟೂರೆಂಬ ಖ್ಯಾತಿಗೆ ಪಾತ್ರವಾದ ನಂದಳಿಕೆಯಲ್ಲಿ ರುವ ಮಜಲಕೆರೆ ನಿರಂತರ ನೀರಿನಿಂದ ಕೂಡಿದ್ದರೂ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಈ ಕೆರೆಯ ಅಭಿವೃದ್ಧಿಯಾದಲ್ಲಿ ಇಡೀ ಗ್ರಾಮದ ನೀರಿನ ಸಮಸ್ಯೆಗೆ ಮುಕ್ತಿ ದೊರಕಲಿದೆ.

Advertisement

ಬೇಸಗೆಯಲ್ಲಿ ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಿಲ್ಲ
ಕಳೆದ ಬೇಸಗೆಯ ಸಂದರ್ಭ ನೀರಿನ ಸಮಸ್ಯೆ ಉಂಟಾಗಿದ್ದು ಜನ ಪರದಾಟ ನಡೆಸುವಂತಾಗಿತ್ತು. ನಂದಳಿಕೆ ಗ್ರಾಮ ಪಂಚಾಯತ್‌ ವತಿಯಿಂದ ಪ್ರತಿ ಮನೆಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗಿದ್ದು, ಕುಡಿಯುವ ನೀರಿನ ಬಾವಿಗಳು ಬತ್ತಿ ಹೋಗುವ ಹಂತ ತಲುಪಿದ್ದವು. ಆದರೂ ಈ ಕೆರೆಯನ್ನು ಬಳಸಲು ಮನ ಮಾಡದಿರುವ ಬಗ್ಗೆ ಜನರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

22 ಕೆರೆಗಳಿವೆ
ನಂದಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿದ್ದು ಸರಿಯಾದ ನಿರ್ವಹಣೆಯನ್ನು ಮಾಡಿದಲ್ಲಿ ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆಗೆ ಮುಕ್ತಿ ದೊರೆಯ
ಬಹುದಾಗಿದೆ. ಇಡೀ ಪಂಚಾಯತ್‌ ವ್ಯಾಪ್ತಿಯಲ್ಲಿ ಸರಕಾರಿ, ಖಾಸಗಿ ಜಮೀನು ಒಟ್ಟು ಸೇರಿ ಸುಮಾರು 22 ಕೆರೆಗಳಿವೆ. ಆದರೆ ಎಲ್ಲ ಕೆರೆಗಳು ಸರಿಯಾದ ನಿರ್ವಹಣೆ ಕಾಣದೆ ಈ ಬಾರಿ ಬಹುಬೇಗನೆ ಬತ್ತಿ ಹೋಗುತ್ತಿವೆ. ಇವುಗಳ ಅಭಿವೃದ್ಧಿಯಾದಲ್ಲಿ ನೀರಿನ ಸಮಸ್ಯೆಯಿಂದ ದೂರವಾಗಬಹುದಾಗಿದೆ.

ಗುರುಬೆಟ್ಟು ಕೆರೆ
ನಂದಳಿಕೆ ಗೋಳಿಕಟ್ಟೆಯ ಬಳಿಯಲ್ಲಿ ರುವ ಗುರುಬೆಟ್ಟು ಕೆರೆಯು ಅಭಿವೃದ್ಧಿ ಕಾಣದೆ ಹೂಳು ತುಂಬಿ ಹೋಗಿದೆ. ಅಲ್ಲದೆ ಕೆದಿಂಜೆ ಮುಜಲೊಟ್ಟು ಕೆರೆಯು ಕಳೆದ ಬಾರಿ ಬಹುಬೇಗನೆ ಬತ್ತಿ ಹೋಗಿದ್ದು ಈ ಭಾಗದ ಜನರಲ್ಲಿ ನೀರಿನ ಸಮಸ್ಯೆ ಕಾಡುವ ಬಗ್ಗೆ ಆತಂಕ ಎದುರಾಗಿದೆ. ಇನ್ನು ಉಳಿದಂತೆ ಖಾಸಗಿ ಜಮೀನಿನಲ್ಲಿರುವ ಕೆರೆಗಳು ಕೂಡ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡೆದಲ್ಲಿ ಇಡೀ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ.

ಹೊಸ ಬಾವಿ, ಬೋರ್‌ವೆಲ್‌ ತೋಡಿ ವಿನಾ ಕಾರಣ ಕೈ ಸುಟ್ಟುಕೊಳ್ಳುವುದಕ್ಕಿಂತ ಇದ್ದ ಪುರಾತನ ಕೆರೆಗಳಿಗೆ ಪುನಶ್ಚೇತನ ನೀಡಬೇಕೆಂಬ ಕೂಗು ಇಲ್ಲಿನ ಹಿರಿಯರದ್ದಾಗಿದೆ.

Advertisement

ವಿಸ್ತಾರವಾದ ಕೆರೆ
ಬಹುದೊಡ್ಡ ಕೆರೆಗಳ ಪೈಕಿ ಮಜಲಕೆರೆ ವಿಸ್ತಾರವಾಗಿದ್ದು ನೀರಿನ ಒರತೆಯೂ ಇಲ್ಲಿ ಹೆಚ್ಚಿದೆ. ಸುಮಾರು 10 ವರ್ಷಗಳ ಹಿಂದೆ ಹೂಳೆತ್ತುವ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲಿ ನಡೆದಿಲ್ಲ. ಈಗ ಕೆರೆಯಲ್ಲಿ ಮತ್ತೆ ಹೂಳು ತುಂಬಿದ್ದು ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಈ ಕೆರೆಯಿಂದಾಗಿ ಈ ಭಾಗದ ಹಲವು ಕೃಷಿಕರಿಗೆ ಪ್ರಯೋಜನವಾಗುವುದರ ಜತೆಗೆ ಪರಿಸರದ ಮನೆಯ ಬಾವಿಗಳಲ್ಲಿ ನೀರಿನ ಒರತೆಯೂ ಹೆಚ್ಚಿದೆ. ಈ ಕೆರೆಯನ್ನು ಸಂಬಂ ಧಿಸಿದ ಇಲಾಖೆ ಸರಿಯಾಗಿ ಅಭಿವೃದ್ಧಿಪಡಿಸಿದಲ್ಲಿ ಇಡೀ ನಂದಳಿಕೆ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಇಲ್ಲಿ ಅಳವಡಿಸಬಹುದಾಗಿದೆ.

ಹೂಳು ತೆಗೆಯುವ ಕಾರ್ಯವಾಗಲಿ
ಮಜಲ ಕೆರೆಯಲ್ಲಿ ಸಂಪೂರ್ಣ ಕೆಸರು ಮಣ್ಣು ತುಂಬಿದ್ದು ಹೂಳು ತೆಗೆಯುವ ಕಾರ್ಯ ನಡೆಯಬೇಕಾಗಿದೆ. ನೀರಿನ ಒರತೆ ಹೆಚ್ಚಿರುವ ಕೆರೆಗಳ ಅಭಿವೃದ್ಧಿ ಪ್ರತಿಯೊಂದು ಗ್ರಾಮದಲ್ಲೂ ನಡೆಯಬೇಕಾಗಿದೆ.
-ಸುರೇಶ್‌, ಕೃಷಿಕರು

ನಿರ್ಜೀವ ಕೆರೆಗಳ ಅಭಿವೃದ್ಧಿಯಾಗಲಿ
ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವ ಮೊದಲು ಸಂಬಂ ಧಿಸಿದ ಅಧಿ ಕಾರಿಗಳು ಎಚ್ಚೆತ್ತು ನಿರ್ಜಿàವ ರೂಪದಲ್ಲಿರುವ ಕೆರೆಗಳ ಅಭಿವೃದ್ಧಿ ಮಾಡಬೇಕಾಗಿದೆ.
-ಪ್ರದೀಪ್‌, ಗ್ರಾಮಸ್ಥರು

ಬಾವಿ ನಿರ್ಮಿಸಿ
ಮಜಲಕೆರೆಯ ಅಭಿವೃದ್ಧಿಯಾದಲ್ಲಿ ಇಡೀ ಗ್ರಾಮದ ನೀರಿನ ಸಮಸ್ಯೆ ದೂರವಾಗಲಿದೆ. ಕೆರೆಯ ಸಮೀಪದಲ್ಲೇ ಬಾವಿ ನಿರ್ಮಿಸಿ ಗ್ರಾಮದ ಜನರಿಗೆ ನೀರು ಪೂರೈಕೆ ಮಾಡಬಹುದಾಗಿದೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.
-ಹರಿಪ್ರಸಾದ್‌,
ಸ್ಥಳೀಯರು

ಅಭಿವೃದ್ಧಿಗೆ ಚಿಂತನೆ
ನಂದಳಿಕೆ ಮಜಲಕೆರೆಯ ಸಹಿತ ವಿವಿಧ ಕೆರೆಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ತಜ್ಞರ ಮಾಹಿತಿ ಪಡೆದು ಸಂಬಂಧಪಟ್ಟ ಇಲಾಖೆಗಳಿಂದ ಅನುದಾನ ಪಡೆದು ಕೆರೆಯ ನೀರನ್ನು ಉಳಿಸಿ ಬಳಸುವ ಬಗ್ಗೆ ಚಿಂತನೆ ನಡೆಸಲಾಗುವುದು.
-ಜಯಂತಿ,
ಅಧ್ಯಕ್ಷೆ, ನಂದಳಿಕೆ ಗ್ರಾ.ಪಂ.

-ಶರತ್‌ ಶೆಟ್ಟಿ ಬೆಳ್ಮಣ್‌

Advertisement

Udayavani is now on Telegram. Click here to join our channel and stay updated with the latest news.

Next