ಸಾಗರ: ಮುಂದಿನ ಐದು ವರ್ಷದಲ್ಲಿ ಮಹಾಗಣಪತಿ ದೇವಸ್ಥಾನವನ್ನು 5 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಮಾದರಿಯಾಗಿ ರೂಪಿಸುವ ನೀಲನಕ್ಷೆ ಸಿದ್ದಪಡಿಸಲಾಗಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏ. 5ರಿಂದ ನಡೆಯುವ ಇತಿಹಾಸ ಪ್ರಸಿದ್ಧವಾದ ಮಹಾಗಣಪತಿ ಜಾತ್ರೋತ್ಸವ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಗರಕ್ಕೆ ಬಂದವರು ಒಮ್ಮೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ವಿಶೇಷತೆಯನ್ನು ಗಮನಿಸುವಂತಹ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.
ಗಣಪತಿ ದೇವಸ್ಥಾನ ಅಭಿವೃದ್ಧಿಗೆ ಸದ್ಯಕ್ಕೆ 50 ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಜಾತ್ರೆ ಮುಗಿದ ನಂತರ ತುರ್ತು ಅಗತ್ಯತೆಗೆ ಅದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. 2010ರಲ್ಲಿ ಗಣಪತಿ ದೇವಸ್ಥಾನ ಚಂದ್ರಶಾಲೆ ನಿರ್ಮಾಣಕ್ಕೆ 20 ಲಕ್ಷ ರೂ. ಮಂಜೂರಾಗಿತ್ತು. ಆ ಹಣ ಎಲ್ಲಿದೆ ಎನ್ನುವುದು ಗೊತ್ತಿಲ್ಲ. ಹಣ ಎಲ್ಲಿ ಹೋಗಿದೆ ಎಂದು ತನಿಖೆ ನಡೆಸಲಾಗುತ್ತಿದೆ. ಗಣಪತಿ ಜಾತ್ರೆ ನಮ್ಮೂರಿನ ಹೆಮ್ಮೆಯ ಜಾತ್ರೆಯಲ್ಲಿ ಒಂದಾಗಿದ್ದು ಎಲ್ಲರೂ ಒಟ್ಟಾಗಿ ಸೇರಿ ಧಾರ್ಮಿಕ ಆಚರಣೆಗೆ ಧಕ್ಕೆಯಾಗದಂತೆ ನಡೆಸಿಕೊಂಡು ಹೋಗೋಣ ಎಂದು ಹೇಳಿದರು.
ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್. ಮಾತನಾಡಿ, ಏ. 2ರಿಂದ ಏ. 8ರವರೆಗೆ ಮಹಾಗಣಪತಿ ಜಾತ್ರೋತ್ಸವ ನಡೆಯಲಿದೆ. ಏ. 5ರಂದು ಬೆಳಿಗ್ಗೆ 7-30ರಿಂದ ರಥೋತ್ಸವ ನಡೆಯಲಿದೆ. ಗಣಪತಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಜಾತ್ರೆಯ ಯಶಸ್ಸಿಗೆ ಸರ್ವರೂ ಸಹಕಾರ ನೀಡಬೇಕು. ಜಾತ್ರೆಯ ಯಶಸ್ಸಿಗೆ ಸಮಿತಿಗಳ ಜೊತೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಪೌರಾಯುಕ್ತ ರಾಜು ಡಿ. ಬಣಕಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಪ್ರಮುಖರಾದ ವಿ.ಟಿ.ಸ್ವಾಮಿ, ಎಸ್.ವಿ.ಹಿತಕರ ಜೈನ್, ಜಯರಾಮ್, ಐ.ವಿ.ಹೆಗಡೆ, ಕುಸುಮಾ ಸುಬ್ಬಣ್ಣ, ಟಿ.ಪರಮೇಶ್ವರ, ಪುರುಷೋತ್ತಮ್, ಬಿ.ಎಚ್.ಲಿಂಗರಾಜ್, ರಾಘವೇಂದ್ರ ಭಟ್, ನವೀನ್ ಜೋಯ್ಸ್ ಇನ್ನಿತರರು ಹಾಜರಿದ್ದರು.