Advertisement

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ: ಮೂಲಸೌಕರ್ಯಕ್ಕೆ ಅಗತ್ಯ ಕ್ರಮ: ಜಿಲ್ಲಾಡಳಿತ ತೀರ್ಮಾನ

01:37 AM Oct 22, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ವಿಶೇಷ ಆದ್ಯತೆ ನೀಡಲು ನಿರ್ಧರಿಸಿದೆ.

Advertisement

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯ ಆಶಯದೊಂದಿಗೆ “ಉದಯವಾಣಿ’ ಪ್ರಕಟಿಸಿದ “ನೋಡ ಬನ್ನಿ ನಮ್ಮ ಕೈಗಾರಿಕಾ ಪ್ರದೇಶ’ ಎಂಬ ಸರಣಿ ಲೇಖನಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರಂತೆ ಕೈಗಾರಿಕಾ ಪ್ರದೇಶದ ಮೂಲಸೌಕರ್ಯ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಕೈಗಾರಿಕಾ ಸ್ಪಂದನ ಸಭೆಯನ್ನು ಆದ್ಯತೆ ಮೇರೆಗೆ ನಡೆಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಸರಕಾರದ ಅನುದಾನವೇ ಬೇಕು!
ಮೂಲ ಸೌಕರ್ಯಗಳೊಂದಿಗೆ ಕೈಗಾರಿಕೆಗಳಿಗೆ ಕೆಐಎಡಿಬಿ ವತಿಯಿಂದ ಭೂಮಿ ನೀಡಲಾಗುತ್ತದೆ. ಅದರಂತೆ ಮೊದಲ 20 ವರ್ಷ ಲೀಸ್‌ ಆಧಾರದಲ್ಲಿರುತ್ತದೆ. ಬಳಿಕ ಸೇಲ್‌ ಡೀಡ್‌ ಮಾಡಿ ಸಂಬಂಧಪಟ್ಟ ಕೈಗಾರಿಕೆಯವರಿಗೆ ನೀಡಲಾಗುತ್ತದೆ. ನಿಯಮಗಳ ಪ್ರಕಾರ, ಕೆಐಎಡಿಬಿ ವತಿಯಿಂದ ಯಾವುದೇ ಅನುದಾನ ಬಳಸಿ ಕಾಮಗಾರಿ ಕೈಗೊಂಡರೆ ಆ ಹಣವನ್ನು ಕೈಗಾರಿಕೆಯವರಿಂದ ವಾಪಸ್‌ ಪಡೆಯಬೇಕು. ಆದರೆ ಸೇಲ್‌ ಡೀಡ್‌ ಆದ ಬಳಿಕ ಕೈಗಾರಿಕೆಯವರಿಂದ ಹಣ ವಾಪಸ್‌ ಪಡೆಯಲು ಕೆಐಎಡಿಬಿಗೆ ಅವಕಾಶವಿಲ್ಲ. ಹೀಗಾಗಿ ಕೆಐಎಡಿಬಿ ಅನುದಾನ ವಿನಿಯೋಗಿಸಲು ನಿರಾಕರಿಸುತ್ತಿದೆ. ಹೀಗಾಗಿ ಸರಕಾರದ ಅನುದಾನಕ್ಕೆ ಕಾಯಲಾಗುತ್ತಿದೆ.

ಕೈಗಾರಿಕಾ ಪ್ರದೇಶ ಅಭಿವೃದ್ಧಿ ಸಂಗತಿಯನ್ನು ಸ್ಥಳೀಯ ಸಂಸ್ಥೆಗಳೂ ಪರಿಣಾಮಕಾರಿಯಾಗಿ ಪರಿಗಣಿಸುತ್ತಿಲ್ಲ. ಕೈಗಾರಿಕೆಗಳು ತೆರಿಗೆ ನೀಡಿದರೂ ಅದು ಅಲ್ಲಿನ ಮೂಲಸೌಲಭ್ಯಕ್ಕೆ ಬಳಸುತ್ತಿಲ್ಲ ಎಂಬುದು ಕೈಗಾರಿಕೆಯವರ ಅಭಿಪ್ರಾಯ. ಆದರೆ ವಿದ್ಯುತ್‌ ಬಿಲ್‌ ಸಹಿತ ವಿವಿಧ ನಿರ್ವಹಣೆ ಖರ್ಚು ಇರುವ ಕಾರಣದಿಂದ ಕೈಗಾರಿಕೆಯವರ ಎಲ್ಲ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ. ಹೀಗಾಗಿ ಇಲ್ಲಿ ಸಮನ್ವಯ ಮೂಡಿಸುವ ಮಹತ್ವದ ಹೊಣೆಯನ್ನು ಜಿಲ್ಲಾಡಳಿತ ಹಾಗೂ ಸರಕಾರ ನಿರ್ವಹಿಸಬೇಕಾಗಿದೆ.

ಭಾರತೀಯ ಕೈಗಾರಿಕಾ ಒಕ್ಕೂಟದ ಮಂಗಳೂರು ಅಧ್ಯಕ್ಷ ಗೌರವ್‌ ಹೆಗ್ಡೆ “ಉದಯವಾಣಿ’ ಜತೆಗೆ ಮಾತನಾಡಿ, “ಕೈಗಾರಿಕಾ ಪ್ರದೇಶದ ಅಭಿವೃದ್ಧಿ ನೆಲೆಯಲ್ಲಿ ಉದಯವಾಣಿ ಕೈಗೊಂಡ ಅಭಿಯಾನ ಶ್ಲಾಘನೀಯ. ಜಿಲ್ಲೆಯ ಒಟ್ಟು ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ ವರದಿಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

Advertisement

ಕಾಂಕ್ರಿಟ್‌ ರಸ್ತೆ 35 ಕೋ.ರೂ. ಪ್ರಸ್ತಾವನೆ
ಬೈಕಂಪಾಡಿ, ಕಾರ್ನಾಡು ಕೈಗಾರಿಕಾ ಪ್ರದೇಶಗಳು 1970ರ ಸುಮಾರಿಗೆ ಆದ ಕಾರಣ ಅಲ್ಲಿ ಆಗ ಕಲ್ಪಿಸಿದ ಮೂಲ ಸೌಕರ್ಯಗಳು ಈಗಿನ ಒತ್ತಡಕ್ಕೆ ಸಾಕಾಗದು. ರಸ್ತೆ, ಪೈಪ್‌, ಚರಂಡಿ ಎಲ್ಲವೂ ಹಳೆಯದಾಗಿವೆ. ಹೀಗಾಗಿ ಬೈಕಂಪಾಡಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಒಟ್ಟು 20 ಕೋ.ರೂ.ಗಳ ಪ್ರಸ್ತಾವನೆಯನ್ನು ಕೆಐಎಡಿಬಿ ಸರಕಾರಕ್ಕೆ ಸಲ್ಲಿಸಿದೆ. ಇಲ್ಲಿ ಒಟ್ಟು 17 ಕಿ.ಮೀ. ರಸ್ತೆಯ ಪೈಕಿ 7 ಕಿ.ಮೀ. ಕಾಂಕ್ರೀಟ್‌ ಆಗಿದ್ದು ಉಳಿದ ರಸ್ತೆ ಕಾಮಗಾರಿ ನಡೆಯಬೇಕಿದೆ. ಕಾರ್ನಾಡು ಪ್ರದೇಶದ ರಸ್ತೆ ಕಾಂಕ್ರೀಟ್‌ ಮಾಡಲು 15 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇಲ್ಲಿ ಸುಮಾರು 8 ಕಿ.ಮೀ. ರಸ್ತೆಯ ಪೈಕಿ 1.7 ಕಿ.ಮೀ. ಮಾತ್ರ ಈಗ ಕಾಂಕ್ರೀಟ್‌ ಆಗಿದೆ.

ಮೂಲ ವ್ಯವಸ್ಥೆಗೆ ಆದ್ಯತೆ
ಜಿಲ್ಲಾಡಳಿತದ ನೇತೃತ್ವದಲ್ಲಿ “ಕೈಗಾರಿಕಾ ಸ್ಪಂದನ’ ಕಾರ್ಯಕ್ರಮವನ್ನು ಆದ್ಯತೆ ಮೇರೆಗೆ ನಡೆಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಈಡೇರಿಸಬಹುದಾದ ಕೆಲವು ಸಂಗತಿಗಳನ್ನು ಇಲ್ಲಿ ಚರ್ಚಿಸಿ ಪರಿಹರಿಸಲಾಗುವುದು.
ಯುಜಿಡಿ ಸಹಿತ ಟ್ರೀಟ್‌ಮೆಂಟ್‌ ಪ್ಲಾಂಟ್‌ ಅನುಷ್ಠಾನವನ್ನು ಕೆಐಎಡಿಬಿ ನಡೆಸುತ್ತದೆ.ಹೆಚ್ಚಿನ ಬಂಡವಾಳ ಅಗತ್ಯವಿರುವ ಕೆಲಸಗಳನ್ನು ರಾಜ್ಯ ಸರಕಾರ/ಕೆಐಎಡಿಬಿ ಗಮನಕ್ಕೆ ತರಲಾಗುವುದು.
-ಡಾ| ರಾಜೇಂದ್ರ ಕೆ.ವಿ.,
ಜಿಲ್ಲಾಧಿಕಾರಿ ದ.ಕ.

ಜಿಲ್ಲೆಯ ವಿವಿಧ ಕೈಗಾರಿಕಾ ಪ್ರದೇಶಗಳು ಹಳೆಯದಾಗಿದ್ದು, ಈಗಿನ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಮೂಲಸೌಕರ್ಯ ಸುಧಾರಣೆ ನಿಟ್ಟಿನಲ್ಲಿ ಉದಯವಾಣಿಯು ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದೆ. ಒಟ್ಟು ಅಭಿವೃದ್ಧಿ ಆಶಯದಿಂದ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ದತ್ತಾತ್ರೇಯ,
ಅಭಿವೃದ್ಧಿ ಅಧಿಕಾರಿ, ಕೆಐಎಡಿಬಿ ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next