ಲೇಡಿಹಿಲ್: ಮಹಾನಗರ ಪಾಲಿಕೆಯ ಸನಿಹದಲ್ಲಿರುವ ‘ಇಂದಿರಾ ಪ್ರಿಯದರ್ಶಿನಿ ಪಾರ್ಕ್’ ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಮಂಗಳೂರು ನಗರಾ ಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ನಿರ್ಧರಿಸಿದೆ.
‘ಉದಯವಾಣಿ ಸುದಿನ’ ಜತೆಗೆ ಮಾತನಾಡಿದ ಮೇಯರ್ ಪ್ರೇಮಾನಂದ ಶೆಟ್ಟಿ ಅವರು, “ಇಂದಿರಾ ಪ್ರಿಯದರ್ಶಿನಿ ಪಾರ್ಕ್ ಸುಂದರವಾಗಿದೆ. ಆದರೆ ಅಲ್ಲಿ ಇನ್ನಷ್ಟು ವ್ಯವಸ್ಥೆಗಳನ್ನು ಕಲ್ಪಿಸಬೇಕಾಗಿದೆ. ಅದ ರಲ್ಲಿಯೂ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಅನುಷ್ಠಾನಿಸಬೇಕಿದೆ. ಈ ನಿಟ್ಟಿನಲ್ಲಿ ಮುಡಾ ವತಿಯಿಂದ ಅಭಿವೃದ್ಧಿ ಕೈಗೊಳ್ಳುವ ದೃಷ್ಟಿಯಿಂದ 15 ಲಕ್ಷ ರೂ. ಮೊತ್ತವನ್ನು ಮೀಸಲಿಡಲು ಉದ್ದೇಶಿಸಲಾಗಿದೆ.
ಟೆಂಡರ್ ಪ್ರಕ್ರಿಯೆ ಅನುಮೋದನೆಗಾಗಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಅದಾದ ಬಳಿಕ ಇಲ್ಲಿ ಅಗತ್ಯದ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಇಂದಿರಾ ಪ್ರಿಯದರ್ಶಿನಿ ಪಾರ್ಕ್; ಮೂಲಸೌಕರ್ಯದ ನಿರೀಕ್ಷೆಯಲ್ಲಿರುವ ಪಾರ್ಕ್ ಎಂಬ ಶೀರ್ಷಿಕೆಯಲ್ಲಿ ಮಾ. 10ರಂದು ‘ಉದಯವಾಣಿ ಸುದಿನ’ ವಿಶೇಷ ವರದಿ ಪ್ರಕಟಿಸಿತ್ತು.
ಮಣ್ಣಗುಡ್ಡೆ ವಾರ್ಡ್‌ಗೆ ಸಂಬಂಧಿಸಿರುವ “ಇಂದಿರಾ ಪ್ರಿಯದರ್ಶಿನಿ ಪಾರ್ಕ್’’ ಒಂದೊಮ್ಮೆ ಬಹು ಜನಪ್ರೀತಿ ಗಳಿಸಿತ್ತು. ಇತ್ತೀಚೆಗೆ ಪಾರ್ಕ್ ನ ನಿರ್ವಹಣೆ ಸೂಕ್ತ ರೀತಿಯಲ್ಲಿ ನಡೆಯದೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಸುಂದರ ಪಾರ್ಕ್ ಸದ್ಯ ಮೂಲಸೌಕರ್ಯದ ಬೇಡಿಕೆ ಎದುರಿಸುತ್ತಿದೆ. ಈ ಪಾರ್ಕ್ ಗೆ ಪಾಲಿಕೆಯಿಂದ ಯಾವುದೇ ಕಾರ್ಮಿಕರನ್ನು ನೇಮಿಸಿಲ್ಲ. ಪಾರ್ಕ್ ನಿರ್ವಹಣೆ ಮಾಡಲು ಯಾರೂ ಇಲ್ಲದ ಕಾರಣ ಪಾರ್ಕ್‌ಗೆ ಸಾರ್ವಜನಿಕರ ಭೇಟಿಯೂ ಕಡಿಮೆಯಾಗಿದೆ. ಕಸ ತೆಗೆದು ಸ್ವಚ್ಛ ಮಾಡಲು ಇಲ್ಲಿ ಕಾರ್ಮಿಕರಿಲ್ಲ. ಪಾರ್ಕ್ ಆವರಣದ ಗೋಡೆಗಳು ಕುಸಿದುಬಿದ್ದು ಪಾರ್ಕ್‌ಗೆ ಭದ್ರತೆ ಇಲ್ಲದ ಪರಿಸ್ಥಿತಿಯಿದೆ. ಮಕ್ಕಳು ಆಡುತ್ತಿರುವ ರೌಂಡ್ಸ್‌ನಲ್ಲಿ ಹೊಗೆ ಇಲ್ಲದ ಕಾರಣದಿಂದ ಮಕ್ಕಳು ಕೂಡ ಆಟವಾಡುತ್ತಿಲ್ಲ. ವಿದ್ಯುತ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.