ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯಲ್ಲಿ ಹಲವು ಕೆರೆಗಳಿದ್ದು, ಕೆಲವುಗಳಿಗೆ ಮಾತ್ರ ಸರಕಾರ ಅಭಿವೃದ್ಧಿಗಾಗಿ ಆಗಾಗ ಕೋಟಿ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಆದರೆ ಕೆಲ ಕೆರೆಗಳ ಜೀರ್ಣೋದ್ಧಾರ ಮರೆತಿದೆ ಎನ್ನುವ ಕೂಗು ಬಹಳ ವರ್ಷಗಳಿಂದ ಸ್ಥಳೀಯರದ್ದಾಗಿದೆ. ಇದೀಗ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಂತಹ ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ಮುಂದಾಗಿದೆ.
ಮಹಾನಗರ ವ್ಯಾಪ್ತಿಯ ಉಣಕಲ್ಲ ಕೆರೆ, ಸಾಧನಕೆರೆ ಪಿಕ್ನಿಕ್ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಒಂದಲ್ಲಾ ಒಂದು ಯೋಜನೆಯಡಿ ಇವುಗಳ ಅಭಿವೃದ್ಧಿ, ದುರಸ್ತಿ ಕಾರ್ಯಗಳು ನಡೆಯುತ್ತಿವೆ. ಆದರೆ ಸೂಕ್ತ ಅನುದಾನ, ನಿರ್ವಹಣೆ ಕೊರತೆಯಿಂದಾಗಿ ಕೆಲ ಕೆರೆಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಒಳಚರಂಡಿ ನೀರು, ಗಟಾರ ನೀರು ನಿಲ್ಲುವ ಹೊಂಡಗಳಾಗಿ ಮಾರ್ಪಟ್ಟಿವೆ. ಮೂಲಸ್ವರೂಪ ಕಳೆದುಕೊಂಡಿವೆ. ಇಂತಹ ನಾಲ್ಕು ಕೆರೆಗಳನ್ನು ಗುರುತಿಸಿರುವ ಹುಡಾ ಒಟ್ಟು 18 ಕೋಟಿ ರೂ. ವೆಚ್ಚದಲ್ಲಿ ಅವುಗಳ ಅಭಿವೃದ್ಧಿಗೆ ಚಿಂತನೆ ನಡೆಸಿದೆ.
ಯಾವ್ಯಾವ ಕೆರೆಗಳು?: ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪ ಕೆರೆ, ಕೆಂಪಗೇರಿ ಕೆರೆ, ಧಾರವಾಡದ ಸಾಧನಕೇರಿ ಕೆರೆ, ನುಗ್ಗಿಕೆರೆ ಅಭಿವೃದ್ಧಿಗಾಗಿ ಗುರುತಿಸಲಾಗಿದೆ. ಈ ಹಿಂದೆ ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಗಶೆಟ್ಟಿಕೊಪ್ಪ ಕೆರೆಯಲ್ಲಿ ಹೂಳು, ಕಸ ತೆಗೆಸಿ ಸ್ವತ್ಛಗೊಳಿಸಿ ಕೆರೆ ರೂಪ ನೀಡಿದ್ದರು. ಆದರೆ ಕೆರೆಗೆ ಸೇರುತ್ತಿದ್ದ ಶೌಚಾಲಯ, ಗಟಾರ ನೀರನ್ನು ತಡೆಯುವ ಕೆಲಸ ಆಗಲಿಲ್ಲ. ಹೀಗಾಗಿ ಪುನಃ ಮೊದಲಿನ ಸ್ಥಿತಿಗೆ ತಲುಪಿದೆ. ಇನ್ನೂ ಕೆಂಪಗೇರಿ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಗತ್ಯವಿರುವ ಇನ್ನಷ್ಟು ಅನುದಾನ ನೀಡಿ ಪೂರ್ಣಗೊಳಿಸುವ ಉದ್ದೇಶವಿದೆ. ಇನ್ನೂ ಸಾಧನಕೇರಿ ಕೆರೆ ಹಾಗೂ ಹೆಚ್ಚು ಅಭಿವೃದ್ಧಿಯಾಗಬೇಕಾದ ನುಗ್ಗಿಕೆರೆಗೆ ಹೆಚ್ಚಿನ ಅನುದಾನ ನೀಡಲು ನಿರ್ಧರಿಸಲಾಗಿದೆ. ಕೆರೆಗಳ ಅಯ್ಕೆಯಲ್ಲಿ ಮಹಾನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ.
ಅಭಿವೃದ್ಧಿ ಕಾರ್ಯಗಳೇನು?: ಪ್ರಮುಖವಾಗಿ ಹೂಳು ಎತ್ತುವುದು, ಕಸ ತೆಗೆಯುವುದಕ್ಕೆ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಕೆರೆ ಸುತ್ತಲೂ ವಾಕಿಂಗ್ ಪಾಥ್ ವೇ, ಆಸನದ ವ್ಯವಸ್ಥೆ, ಲೈಟಿಂಗ್ ಹೀಗೆ ಹಲವು ಕಾಮಗಾರಿ ಕೈಗೊಳ್ಳಲಿದ್ದಾರೆ. ಆಯ್ಕೆ ಮಾಡಿರುವ ಕೆರೆಗಳಿಗೆ ಯಾವ ಕಾರ್ಯಗಳು ಅಗತ್ಯ ಎನ್ನುವುದರ ಕುರಿತು ಸಮೀಕ್ಷೆ ಸೂಚಿಸಲಾಗಿದೆ. ನಾಗಶೆಟ್ಟಿಕೊಪ್ಪ ಕೆರೆ ಅಭಿವೃದ್ಧಿ-4 ಕೋಟಿ ರೂ. ಕೆಂಪಗೇರಿ ಕೆರೆ-3 ಕೋಟಿ ರೂ., ಸಾಧನಕೇರಿ ಕೆರೆ-3 ಕೋಟಿ, ನುಗ್ಗಿಕೆರೆ-8 ಕೋಟಿ ರೂ. ವ್ಯಯಿಸಲು ಯೋಜನೆ ಸಿದ್ಧಪಡಿಸಿದ್ದಾರೆ. ಸಮೀಕ್ಷೆ ವರದಿ ಸಿದ್ಧವಾದ ನಂತರ ಯೋಜನೆ ಕಾರ್ಯಗತಗೊಳ್ಳಲಿದೆ.
ನಿರ್ವಹಣೆಗೆ ಸಮಿತಿ ಅಗತ್ಯ: ಹಿಂದೆ ಹತ್ತಾರೂ ಕೋಟಿ ರೂ. ವ್ಯಯಿಸಿ ಅಭಿವೃದ್ಧಿ ಮಾಡಿದ ಕೆರೆಗಳಿಗೆ ಪುನಃ ಕಾಯಕಲ್ಪಕ್ಕೆ ಮುಂದಾಗಿದ್ದು, ನಿರ್ವಹಣೆ ಕೊರತೆಯಿಂದಲೇ ಅಧೋಗತಿಗೆ ತಲುಪಿವೆ. ಈಗಲಾದರೂ ಅಭಿವೃದ್ಧಿ ಕಾರ್ಯಗಳನ್ನು ಸುದೀರ್ಘವಾಗಿ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಅಭಿವೃದ್ಧಿ ನಂತರ ಪಾಲಿಕೆಗೆ ನೀಡುವುದರಿಂದ ಅವುಗಳ ಮೇಲುಸ್ತುವಾರಿ ಪರಿಣಾಮಕಾರಿ ಸಾಧ್ಯವಿಲ್ಲ. ಹೀಗಾಗಿ ಹುಡಾ ಮೂಲಕ ಅಭಿವೃದ್ಧಿಯಾಗುವ ಕೆರೆಗಳನ್ನು ಸ್ಥಳೀಯವಾಗಿ ನಾಗರಿಕರನ್ನು ಒಳಗೊಂಡ ಸಮಿತಿ ರಚಿಸಿ ಅವರಿಗೆ ನಿರ್ವಹಣೆಯ ಹೊಣೆಗಾರಿಕೆ ನೀಡಿದರೆ ಅಭಿವೃದ್ಧಿ ಕಾರ್ಯ ಸುಸ್ಥಿತಿಯಲ್ಲಿ ಉಳಿಯಲಿವೆ ಎಂಬುವುದು ಜನರು ಒತ್ತಾಯವಾಗಿದೆ.
ಅನುದಾನ ಹೊಂದಾಣಿಕೆ ಎಲ್ಲಿಂದ? ಹೊಸ ನಿವೇಶನಗಳಿಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಕೆರೆಗಳ ಅಭಿವೃದ್ಧಿಗೆ ಶುಲ್ಕ ಸಂಗ್ರಹಿಸಲಾಗುತ್ತದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈ ಹಣ ಕೆರೆಗಳ ಅಭಿವೃದ್ಧಿಗೆ ಬಳಕೆಗಾಗಿರಲಿಲ್ಲ. ಹೀಗಾಗಿ ಸದ್ಯ 18 ಕೋಟಿ ರೂ. ಸಂಗ್ರಹವಾಗಿದ್ದು, ಈ ನಿಧಿಯನ್ನು ಸದ್ಬಳಕೆ ಮಾಡಲು ಹಿಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದೀಗ ಸಮೀಕ್ಷೆ ಕಾರ್ಯ ಪೂರ್ಣಗೊಂಡು ವರದಿ ನೀಡಿದ ನಂತರ ಸರಕಾರಕ್ಕೆ ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದ ನಂತರ ನಾಲ್ಕು ಕೆರೆಗಳ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ.
ಅಭಿವೃದ್ಧಿ ಮಾಡಲೇಬೇಕಾದ ಅಗತ್ಯ ಇರುವ ಕೆರೆಗಳನ್ನು ಗುರುತಿಸಲಾಗಿದೆ. ಜಲಮೂಲ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ನಾಲ್ಕು ಕೆರೆಗಳಿಗೆ ಅಗತ್ಯವಿರುವ ಕಾಮಗಾರಿ ಕುರಿತು ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಕೆರೆ ಅಭಿವೃದ್ಧಿ ನಿಧಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.
–ನಾಗೇಶ ಕಲಬುರ್ಗಿ, ಅಧ್ಯಕ್ಷ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ
ಹೊಸ ನಿವೇಶನಗಳಿಗೆ ಅನುಮತಿ ನೀಡುವಾಗ ಕೆರೆ ಅಭಿವೃದ್ಧಿಗಾಗಿ ಸಂಗ್ರಹಿಸಿದ ಶುಲ್ಕ 18 ಕೋಟಿ ರೂ. ಕಳೆದ ನಾಲ್ಕೈದು ವರ್ಷಗಳಿಂದ ಸದ್ಬಳಕೆ ಮಾಡಿಕೊಂಡಿಲ್ಲ. ಹೀಗಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಾಲ್ಕು ಕೆರೆಗಳನ್ನು ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ. ಮಹಾನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದ್ದು, ವಿಸ್ತೃತ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗುವುದು. –
ಎಂ.ರಾಜಶೇಖರ, ಇಇ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ
-ಹೇಮರಡ್ಡಿ ಸೈದಾಪುರ