ವಾಡಿ: ಅವಸಾನದ ಅಂಚಿನೆಡೆಗೆ ಸಾಗುತ್ತಿರುವ ದೇಸಿ ತಳಿ ಹಸುಗಳ ಅಭಿವೃದ್ಧಿ ದೃಷ್ಟಿಕೋನದಿಂದ ಮಹರ್ಷಿ ಸವಿತಾ ಪೀಠದಿಂದ ಜಿಲ್ಲೆಯಲ್ಲಿ ಹಾಲು ಖರೀದಿ ಕೇಂದ್ರಗಳು ಸೇರಿದಂತೆ ಕೊಂಚೂರಿನಲ್ಲಿ ಹಾಲಿನ ಉತ್ಪನ್ನ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಪೀಠಾಧ್ಯಕ್ಷ ಶ್ರೀ ಸವಿತಾನಂದ ಸ್ವಾಮೀಜಿ ಪ್ರಕಟಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸವಿತಾ ಪೀಠದಿಂದ ಪಕ್ಕಾ ದೇಸಿ ಹಸುಗಳ ಹಾಲು, ಮೊಸರು, ತುಪ್ಪ ತಯಾರಿಸಿ ಪ್ಯಾಕೇಟ್ ರೂಪದಲ್ಲಿ ಗ್ರಾಹಕರಿಗೆ ತಲುಪಿಸುವ ಹಾಗೂ ರೈತರಿಗೆ ಉದ್ಯೋಗ ಒದಗಿಸಿ ಸ್ವಾವಲಂಬಿಗಳನ್ನಾಗಿಸುವ ತಮ್ಮ ಕನಸಿನ ಯೋಜನೆಯನ್ನು ತೆರೆದಿಟ್ಟರು. ಕಲಬುರಗಿ ಡಿಸಿಸಿ ಬ್ಯಾಂಕ್ ಕಾಮಧೇನು ಎನ್ನುವ ಯೋಜನೆ ಜಾರಿಗೆ ತಂದಿದೆ. ಆಸಕ್ತ ಪ್ರತಿಯೊಬ್ಬ ರೈತನಿಗೆ ಎರಡು ಹಸುಗಳನ್ನು ಖರೀದಿಸಲು 2ಲಕ್ಷ ರೂ. ಸಾಲ ಸೌಲಭ್ಯ ನೀಡುತ್ತಿದೆ. ಇದನ್ನು ಬಳಸಿಕೊಂಡು ಸವಿತಾ ಪೀಠ ರಾಜಸ್ಥಾನದಿಂದ ರಾಟಿ ಹಸು ತಳಿಗಳನ್ನು ತಂದು ರೈತರಿಗೆ ನೀಡಲು ಮುಂದಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ಹಾಗೂ ಅಧಿಕಾರಿಗಳು ಸವಿತಾ ಪೀಠಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.
ಆರಂಭದಲ್ಲಿ ಈ ಯೋಜನೆಯನ್ನು ಚಿತ್ತಾಪುರ ತಾಲೂಕಿನಿಂದ ಶುರು ಮಾಡಲಾಗುತ್ತಿದೆ. ಈಗಾಗಲೇ 200 ರೈತರಿಂದ ಅರ್ಜಿಗಳು ಬಂದಿವೆ. ಸದ್ಯ ಹಳಕರ್ಟಿ, ಕಮರವಾಡಿ, ಕರದಾಳ ಗ್ರಾಪಂ ವ್ಯಾಪ್ತಿಯ ರೈತರಿಗೆ ಒಂದು ವಾರದೊಳಗಾಗಿ ಹಸುಗಳನ್ನು ವಿತರಿಸಲಾಗುತ್ತಿದೆ. ಪ್ರತಿ ಐವತ್ತು ರೈತರಿರುವ ಹಳ್ಳಿಗಳಲ್ಲಿ ಹಾಲು ಸಂಗ್ರಹ ಕೇಂದ್ರ ತೆರೆಯಲು ಸವಿತಾ ಪೀಠ ಈಗಾಗಲೇ ಯೋಜನೆ ರೂಪಿಸಿದೆ. ತಿಂಗಳಲ್ಲಿ ಕೇಂದ್ರಗಳು ಹಾಲು ಖರೀದಿಗೆ ಸಿದ್ಧವಿರಲಿವೆ. ಎಮ್ಮೆ ಮತ್ತು ವಿದೇಶಿ ಜರ್ಸಿ ಹಸುಗಳನ್ನು ಹೊರತುಪಡಿಸಿ ದೇಸಿ ಹಸುಗಳನ್ನು ಸಾಕುವ ರೈತರಿಂದ ಮಾತ್ರ ಲೀಟರ್ ಹಾಲಿಗೆ 50ರೂ., ಕೆಜಿ ಸೆಗಣಿಗೆ 2ರೂ., ಲೀಟರ್ ಗೋಮೂತ್ರಕ್ಕೆ 10ರೂ. ದರ ನೀಡಿ ಖರೀದಿಸುತ್ತೇವೆ. ಹಾಲಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿದರೆ, ಗೋಮಯ ಮತ್ತು ಗೋಮೂತ್ರದಿಂದ ಪಂಚಗವ್ಯ ಗಥ ತಯಾರಿಸಿ ಕೃಷಿ ಬಳಕೆಗಾಗಿ ಮರಳಿ ರೈತರಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.
ಪ್ರತಿಯೊಬ್ಬ ರೈತನ ಮನೆ ಎದುರು ದೇಸಿ ತಳಿ ಗೋವುಗಳು ಕಾಣಬೇಕು. ರಾಜಸ್ಥಾನದಲ್ಲಿ ಕಂಡು ಬರುವ ರಾಟಿ ತಳಿ ಹಸುಗಳು ದಿನಕ್ಕೆ 14ರಿಂದ 20 ಲೀಟರ್ ಹಾಲು ಕೊಡುತ್ತವೆ. ಅಲ್ಲದೇ ಕಲಬುರಗಿಯ ಬಿಸಿಲ ತಾಪದಲ್ಲೂ ಆರೋಗ್ಯವಾಗಿ ಇರುತ್ತವೆ. ಹೀಗಾಗಿ ರಾಟಿ ತಳಿ ಹಸುವನ್ನು ರೈತರಿಗೆ ನೀಡಲು ಆಯ್ಕೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕೃಷಿ ಚೇತರಿಕೆ, ಆರೋಗ್ಯ ದೃಷ್ಟಿಯಿಂದ ಹಸುವಿನ ಗೋಮೂತ್ರ, ಗೋವಿನ ಸೆಗಣಿಗೆ ಭಾರಿ ಬೇಡಿಕೆ ಬರುವಂತೆ ಸವಿತಾ ಪೀಠ ಮಾಡಲಿದೆ.
–ಶ್ರೀ ಸವಿತಾನಂದ ಸ್ವಾಮೀಜಿ