ವಾಡಿ: ಸಾಮ್ರಾಟ್ ಅಶೋಕನ ಕಾಲದ್ದು ಎನ್ನಲಾದ ಸನ್ನತಿ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಅಭಿವೃದ್ಧಿ ಹೊಂದುವಲ್ಲಿ ಹಿನ್ನೆಡೆಯುಂಟಾಗಿದೆ. ಇದು ಇಲ್ಲಿನ ಜನಪ್ರತಿನಿಧಿ ಗಳು ಹಾಗೂ ಪ್ರಾಚ್ಯವಸ್ತು ಇಲಾಖೆ ಎಸಗಿರುವ ಅಕ್ಷಮ್ಯ ಅಪರಾಧ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎನ್. ಸ್ವಾಮಿ ದೂರಿದ್ದಾರೆ.
ಸೋಮವಾರ ಸನ್ನತಿ ಬೌದ್ಧ ಸ್ತೂಪ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬುದ್ಧನ ಮೂರ್ತಿಗಳ ದುಸ್ಥಿತಿ ಹಾಗೂ ಅಸುರಕ್ಷತೆಯ ಬೌದ್ಧ ಸ್ತೂಪ ಸ್ಥಳ ವೀಕ್ಷಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸ ತಜ್ಞರ ಪ್ರಕಾರ ಸಾಮ್ರಾಟ್ ಅಶೋಕನ ಪ್ರತಿಮೆ ಪತ್ತೆಯಾಗಿರುವುದು ಸನ್ನತಿಯಲ್ಲಿ ಮಾತ್ರ. ಬುದ್ಧ ಮತ್ತು ಅಶೋಕನ ಇತಿಹಾಸ ನೆನಪಿಸುವ ಅಪರೂಪದ ಶಿಲ್ಪ ಕಲಾಕೃತಿಗಳನ್ನು ಸರಕಾರ ಅನಾಥ ಶವಗಳಂತೆ ಬಯಲಿಗಿಟ್ಟಿದೆ.ಶವಗಳ ಶೆಡ್‌ಗಿಂತಲೂ ಕನಿಷ್ಟವಾದ ಪತ್ರಾಸಗಳ ಆಸರೆಯಲ್ಲಿಟ್ಟಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಸ್ತು ಸಂಗ್ರಹಾಲಯ ಉದ್ಘಾಟನೆಗೊಂಡು ಮೂರ್ತಿಗಳ ಸಂರಕ್ಷಣೆಗೆ ಮುಂದಾಗಬೇಕು. ಸನ್ನತಿ ಸ್ಥಳದ ಪ್ರಾಮುಖ್ಯತೆ ಜನರಿಗೆ ತಿಳಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಒತ್ತಾಯಿಸಿದರು. ಸನ್ನತಿ ಬೌದ್ಧ ನೆಲೆಯು ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲಗಟ್ಟದ ಇತಿಹಾಸ ಹೇಳುವ ಜತೆಗೆ ಕ್ರಿ.ಪೂ. 3ನೇ ಶತಮಾನದ ಅಮೂಲ್ಯವಾದ ಶಿಲ್ಪಕಲಾ ಪರಂಪರೆ ತಿಳಿಸುತ್ತದೆ. ಸನ್ನತಿಯ ಬೌದ್ಧ ಸ್ಥಳ ಉತ್ಖನನ ನಡೆದು ಎರಡು ದಶಕಗಳು ಕಳೆದಿವೆ. ಇನ್ನೂ ಈ ಸ್ಥಳ ಅಭಿವೃದ್ಧಿಯಾಗಿಲ್ಲ ಎಂದರೆ ಈ ಭಾಗದಲ್ಲಿ ಇತಿಹಾಸದ ಪ್ರಜ್ಞೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಜಿ, ಪುಟ್ಟರಾಜ ಲಿಂಗಶೆಟ್ಟಿ, ಕೆ.ಬಸವರಾಜ, ಎ.ಅಶ್ವಿನಿ, ಲಿಂಗಣ್ಣ ಜಂಬಗಿ, ಮಲ್ಲಿನಾಥ ಹುಂಡೇಕಲ, ಜಿ.ರಾಧಾ ಇದ್ದರು.
ಶಿಲಾ ಮೂರ್ತಿಗಳಿಗೆ ಹಾವು-ಚೇಳು ಕಾವಲು! : ಸುಮಾರು 24 ಎಕರೆ ಭೂಮಿಯಲ್ಲಿ ಹರಡಿಕೊಂಡಿರುವ ಸನ್ನತಿ ಬೌದ್ಧ ಅವಶೇಷಗಳ ಪರಿಸರದಲ್ಲಿ ವಿಷ ಜಂತುಗಳ ಉಪಟಳ ಹೆಚ್ಚಾಗಿದೆ. ಶಿಲಾ ಮೂರ್ತಿಗಳ ವೀಕ್ಷಣೆಗೆ ಬರುವ ನೂರಾರು ಜನ ಪ್ರವಾಸಿಗರು ಭಯಪಡುವಂತಾಗಿದೆ. ಸಾಮ್ರಾಟ್ ಅಶೋಕನ ಕಾಲಘಟ್ಟದ ಕಥೆ ಹೇಳುವ ಸಾವಿರಾರು ಶಿಲ್ಪಕಲೆಗಳು ಟೀನ್ ಶೆಡ್ಡಿನಲ್ಲಿ ಶೇಖರಣೆಯಾಗಿವೆ. ಇವುಗಳ ಕೆಳಗೆ ಹಾವು, ಚೇಳು, ಹಲ್ಲಿ, ಉಡು ಸೇರಿದಂತೆ ಇನ್ನಿತರ ವಿಷಕಾರಿ ಜೀವಜಂತುಗಳು ಆಶ್ರಯ ಪಡೆದಿರುವುದು ಆವಿಷ್ಕಾರ ತಂಡದ ಸದಸ್ಯರು ಭೇಟಿ ನೀಡಿದ ವೇಳೆ ಬೆಳಕಿಗೆ ಬಂದಿದೆ. ಶಿಲ್ಪಕಲೆಗಳನ್ನು ಮತ್ತು ಭಗ್ನಗೊಂಡ ಬುದ್ಧನ ಮೂರ್ತಿಗಳ ಕುರಿತು ವಿಚಾರ ವಿನಿಮಿಯ ನಡೆಯುತ್ತಿದ್ದ ವೇಳೆ ಪ್ರತ್ಯಕ್ಷಗೊಂಡ ಹಾವು ಎಲ್ಲರನ್ನು ಬೆಚ್ಚಿಬೀಳಿಸಿತು. ಬುದ್ಧನ ಮೂರ್ತಿ ಅವಶೇಷಗಳ ಮಧ್ಯೆ ಸಂಚರಿಸಲು ವೀಕ್ಷಕರು ಹಿಂದೇಟು ಹಾಕಬೇಕಾದ ಪ್ರಸಂಗ ಎದುರಾಯಿತು.