Advertisement

ಹಿಂದುಳಿದ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ

05:10 PM Apr 07, 2018 | |

ಮೊಳಕಾಲ್ಮೂರು: ರೇಷ್ಮೆ ಸೀರೆಯಿಂದ ವಿಶ್ವದಲ್ಲೇ ಹೆಸರು ಪಡೆದ ಕ್ಷೇತ್ರ ಮೊಳಕಾಲ್ಮೂರು. ದೇಶ, ರಾಜ್ಯ ಮಟ್ಟದಲ್ಲಿ ಹೆಸರು ಇದೆ. ಆದರೆ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಅನ್ನೋದು ಮಾತ್ರ ಇಂದಿಗೂ ಮರೀಚಿಕೆಯಾಗಿದೆ. ಪ್ರತಿವರ್ಷ ಬರ ಎದುರಿಸುವ ಈ ಕ್ಷೇತ್ರದ ಜನ ಸಮಸ್ಯೆಗಳ ಮಧ್ಯೆಯೇ ಬದುಕು ಸವೆಸುತ್ತಿದ್ದಾರೆ.

Advertisement

ನೆರೆಯ ಬಳ್ಳಾರಿ ಜಿಲ್ಲೆ, ಹಾಗೂ ಪಕ್ಕದ ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಕ್ಷೇತ್ರದಲ್ಲಿ ಅನಕ್ಷರತೆ, ಬಡತನ ತಾಂಡವವಾಡುತ್ತಿದೆ. ನೇಕಾರಿಕೆ, ಕೃಷಿ ಇಲ್ಲಿಯ ಜನರ ಜೀವಾನಾಧಾರವಾಗಿದ್ದರೂ ಸದ್ಯದ ಸ್ಥಿತಿಯಲ್ಲಿ ಇವೆರಡಕ್ಕೂ ಗ್ರಹಣ ಹಿಡಿದಿದೆ. ಹೀಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಜನ ಗುಳೆ ಹೋಗುವುದು ಸಾಮಾನ್ಯವಾಗಿದೆ.

ಹಾಗಂತ ರಾಜಕೀಯವಾಗಿಯೂ ಈ ಕ್ಷೇತ್ರ ಬಹಳ ಹೆಸರು ಗಳಿಸಿದೆ. 1957 ರ ಚುನಾವಣೆಯಲ್ಲಿ ಎಸ್‌. ನಿಜಲಿಂಗಪ್ಪ ಮೊಳಕಾಲ್ಮೂರು ಕ್ಷೇತ್ರದಿಂದ ಜಯಶೀಲರಾದರು. ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡರು. ಇವರಲ್ಲದೆ ಎ. ಭೀಮಪ್ಪ
ನಾಯಕ, ಪಟೇಲ್‌ ಪಾಪನಾಯ್ಕ, ಎನ್‌.ಜಿ. ನಾಯಕ, ಪುರ್ಲಮುತ್ತಪ್ಪ, ಎನ್‌.ವೈ. ಗೋಪಾಲಕೃಷ್ಣ ಹಲವಾರು ನಾಯಕರು ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಕ್ಷೇತ್ರದಿಂದ ಗೆದ್ದವರು ತಮ್ಮ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಂಡರು ವಿನಃ ಅಭಿವೃದ್ಧಿಯತ್ತ ಗಮನ ಹರಿಸಲೇ ಇಲ್ಲ. ಹೀಗಾಗಿ ಕ್ಷೇತ್ರ ಇಂದಿಗೂ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ.

ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯದವರು ಹೆಚ್ಚಿದ್ದು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ಇವರದ್ದೇ. 14 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿರುವ ಕ್ಷೇತ್ರದಲ್ಲಿ ಮತದಾರರು ಮೂರು ಬಾರಿ ಮಾತ್ರ ಸಾಮಾನ್ಯ ವರ್ಗದವರನ್ನು ಗೆಲ್ಲಿಸಿದ್ದರೆ ಉಳಿದ 11 ಅವಧಿಗಳಲ್ಲಿ ನಾಯಕ ಸಮುದಾಯದವರನ್ನೇ ಆಯ್ಕೆ ಮಾಡಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಪರಿಶಿಷ್ಠ ವರ್ಗ(ಎಸ್ಟಿ) ಮೀಸಲು ಕ್ಷೇತ್ರವಾಗಿದೆ. 11 ಬಾರಿ ಕಾಂಗ್ರೆಸ್‌ ಪಕ್ಷ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದೆ. ಎರಡು ಸಲ ಜನತಾ ಪರಿವಾರ, ಒಮ್ಮೆ ಬಿಎಸ್‌ಆರ್‌ಸಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅತಿ ಹೆಚ್ಚು ಎಸ್ಸಿ, ಎಸ್‌.ಟಿ. ಇತರೆ ಬುಡಕಟ್ಟು ಜನಾಂಗದ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲೂ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿತರ ಪಟ್ಟಿ ದೊಡ್ಡದಿದೆ. ಕುಡಿಯುವ ನೀರು, ಕೃಷಿಗೆ ನೀರು, ಬಳಕೆ ನೀರು, ಶಿಕ್ಷಕರ ಕೊರತೆ, ಆರೋಗ್ಯ ಸೇವೆ, ಎಪಿಎಂಸಿ ಕೊರತೆ, ಉನ್ನತ ಶಿಕ್ಷಣ, ಗುಳೆ, ಸಾರಿಗೆ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳು ತಾಲೂಕನ್ನು ಬಾಧಿಸುತ್ತಿವೆ. ಇಲ್ಲಿಯ ಮತದಾರರು ಈ ಬಾರಿ ಯಾರನ್ನು ಆರಿಸುತ್ತಾರೆ ಎಂಬ ಕುತೂಹಲ ಮೂಡಿದೆ. 

ಕ್ಷೇತ್ರದ ಬೆಸ್ಟ್‌ ಏನು?
ಪಟ್ಟಣದ ಹಾನಗಲ್‌ ರಸ್ತೆಯಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ, ಉತ್ತಮ ಶಾಲಾ ಕಟ್ಟಡ ನಿರ್ಮಾಣ, ರಸ್ತೆ, ಚರಂಡಿ ನಿರ್ಮಾಣ, ಮೂಲ ಸೌಕರ್ಯ ಒದಗಿಸಲಾಗಿದೆ. 5 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದು ಶೈಕ್ಷಣಿಕವಾಗಿ ಅನುಕೂಲ ಕಲ್ಪಿಸಿರುವುದು, ಅಂತರ್ಜಲ ವೃದ್ಧಿಗಾಗಿ ಚೆಕ್‌ ಡ್ಯಾಂಗಳ ನಿರ್ಮಾಣ, ಜನಿಗಿ ಹಳ್ಳಕ್ಕೆ 6 ಬ್ಯಾರೇಜ್‌ ನಿರ್ಮಾಣ ಸೇರಿದಂತೆ ರಸ್ತೆ ಸೌಕರ್ಯಕ್ಕೆ ಒತ್ತು ನೀಡಲಾಗಿದೆ.

Advertisement

ಕ್ಷೇತ್ರದ ದೊಡ್ಡ  ಸಮಸ್ಯೆ?
ಅತ್ಯಂತ ಹಿಂದುಳಿದಿರುವ ಮೊಳಕಾಲ್ಮುರು ತಾಲೂಕು ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟು ಹೋಗಿದೆ. 134 ಜನವಸತಿ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಶೇ. 60ಕ್ಕೂ ಹೆಚ್ಚಿನ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನ ಇದ್ದಾರೆ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದು, ಜೀವನ ಕಟ್ಟಿಕೊಳ್ಳಲು ನಿತ್ಯ ಬಳ್ಳಾರಿ, ಆಂಧ್ರದ ರಾಯದುರ್ಗ, ರಾಜಧಾನಿ ಕಡೆ ಗುಳೆ ಹೋಗುತ್ತಾರೆ. ನಿರುದ್ಯೋಗ, ಬಡತನ, ಕುಡಿಯುವ ನೀರಿಗೂ ತತ್ವಾರವಿದೆ.

ಶಾಸಕರು ಏನಂತಾರೆ?
ಮೊಳಕಾಲ್ಮೂರು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಮತ್ತು ತುಂಗಾ ಹಿನ್ನೀರು ಯೋಜನೆ ಜಾರಿಗೆ ಶ್ರಮಿಸಿದ್ದೇನೆ. 9 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ, ವಾಲ್ಮೀಕಿ ಭವನ, 5 ಮೊರಾರ್ಜಿ ವಸತಿ ಶಾಲೆ, ಕುಡಿಯವ ನೀರು, ರಸ್ತೆ, ಚರಂಡಿ ನಿರ್ಮಿಸಿದ್ದೇನೆ. ಕ್ಷೇತ್ರದಲ್ಲಿ 125 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. 

ಕ್ಷೇತ್ರ ಮಹಿಮೆ
ಮೊಳಕಾಲ್ಮೂರಿನ ರೇಷ್ಮೆ ಸೀರೆಗಳು ಪ್ರಸಿದ್ಧಿ ಪಡೆದಿವೆ. ಐತಿಹಾಸಿಕ ನುಂಕಪ್ಪ(ನುಂಕಿ ಸಿದ್ದೇಶ್ವರ)ನ ಪ್ರಸಿದ್ಧ ಬೆಟ್ಟ, ಜಟ್ಟಂಗಿ ರಾಮೇಶ್ವರದಲ್ಲಿ ಅಶೋಕ ಚಕ್ರವರ್ತಿಯ ಕಾಲದ ಶಾಸನಗಳು ಇಲ್ಲಿವೆ. ಪುರಾತನ ಪ್ರದೇಶಗಳಾದ ಬ್ರಹ್ಮಗಿರಿ, ರಾಮದುರ್ಗ, ಸಿದ್ದಾಪುರ ಮತ್ತಿತರ ಗ್ರಾಮಗಳಲ್ಲಿ ಶಾಸನಗಳು ಸಿಕ್ಕಿವೆ. ಇಲ್ಲಿನ ಜನರ ಮೂಲ ಕಸುಬು ಕೃಷಿ. ರೇಷ್ಮೆ, ನೆಲಗಡಲೆ (ಕಡಲೆ ಕಾಯಿ), ಜೋಳ, ರಾಗಿ, ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ.

ಇಡೀ ಜಿಲ್ಲೆಯ ತಾಲೂಕುಗಳಿಗೆ ಹೋಲಿಸಿದರೆ ಮೊಳಕಾಲ್ಮೂರು ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಜನ ಪ್ರತಿನಿಧಿಗಳು ಜನರ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಆಸಕ್ತಿ ವಹಿಸಬೇಕು. ನೆರೆಯ ಚಳ್ಳಕೆರೆಯ ಅಭಿವೃದ್ಧಿಯ ಮಾದರಿಯನ್ನಾಗಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು.
ವಿ.ಎಸ್‌. ಅನ್ನಪೂರ್ಣ, ನಾಯಕನಹಟ್ಟಿ

ಚುನಾವಣೆಯಲ್ಲಿ ಜನ ಅಧಿಕಾರಕ್ಕೆ ಬರುವ ಪಕ್ಷದ ವಿರುದ್ಧದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅಂತರ್ಜಲ ಮಟ್ಟ ಕುಸಿತವಾಗಿ ಕೃಷಿ ಕ್ಷೇತ್ರದ ಸಮಸ್ಯೆ ಉಲ್ಬಣಿಸಿದೆ. ಭದ್ರಾ ಮೇಲ್ದಂಡೆ ಜಾರಿಯಾಗದೇ ಹೋದರೆ ಇಡೀ ಪ್ರದೇಶ ಮರುಭೂಮಿಯಂತಾಗಲಿದೆ. ದೂರದೃಷ್ಟಿ ಹೊಂದಿದ ನಾಯಕತ್ವದ ಹುಡುಕಾಟದಲ್ಲಿ ಕ್ಷೇತ್ರದ ಜನರಿದ್ದಾರೆ.
ಕೆ. ತಿಪ್ಪೇಸ್ವಾಮಿ, ನಾಯಕನಹಟಿ

ನಿರೀಕ್ಷೆಯಷ್ಟು ಅಭಿವೃದ್ಧಿ ಸಾಧ್ಯವಾಗಿಲ್ಲ. ಮಳೆ ಕೊರತೆಯಿಂದ ಉದ್ಯೋಗ ದೊರೆಯುತ್ತಿಲ್ಲ. ಉದ್ಯೋಗ ಸೃಷ್ಟಿಸುವ ಕಾರ್ಯಗಳನ್ನು ಕೈಗೊಳ್ಳಬೇಕು. ಎಲ್ಲ ಕೆರೆ, ಕಟ್ಟೆ ತುಂಬಿಸುವ ಯೋಜನೆ ಜಾರಿಯಾಗಬೇಕು.
ಎಚ್‌.ಎ. ವಿಶ್ವನಾಥ್‌, ಬೋಸೇದೇವರಹಟ್ಟಿ.

ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಮೊರಾರ್ಜಿ, ಆದರ್ಶ ಹಾಗೂ ಕೇಂದ್ರೀಯ ವಿದ್ಯಾಲಯಗಳ ಆರಂಭ ಅಗತ್ಯವಿದೆ.
ಪಿ.ಎಂ. ಸುಗುಣ, ಮೊಳಕಾಲ್ಮೂರು ಕ್ಷೇತ್ರ.

ಹರಿಯಬ್ಬೆ ಹೆಂಜಾರಪ 

Advertisement

Udayavani is now on Telegram. Click here to join our channel and stay updated with the latest news.

Next