ಗದಗ: ಅಡವಿ ಸೋಮಾಪುರ ಗ್ರಾಮದಲ್ಲಿ ರಸ್ತೆ, ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ 4.75 ಕೋಟಿ ರೂ. ಅನುದಾನ ಒದಗಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಮಾತನಾಡುವುದೇ ಸಾಧನೆ ಆಗದೇ, ಅಭಿವೃದ್ಧಿ ಕಾಮಗಾರಿಗಳ ಮೂಲಕ ಸಾಧನೆಯೇ ಮಾತನಾಡುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಸುಭದ್ರ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಅಭಿವೃದ್ಧಿಯತ್ತ ಚಿಂತಿಸುವ ಮೂಲಕ ಅನುಷ್ಠಾನಗೊಳಿಸೋಣ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪ್ರವಾಹ ಬಂದೊದಗಿತು. ಅದನ್ನು ಸಮರ್ಥವಾಗಿ ನಿಭಾಯಿಸುವ ಹೊತ್ತಿಗೆ ಜಗತ್ತೇ ತಲ್ಲಣಗೊಳಿಸುವ ಕೋವಿಡ್ ಮಹಾಮಾರಿ ಆವರಿಸಿತು. ಈ ವೇಳೆ ಬಿ.ಎಸ್. ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪರಿಸ್ಥಿತಿ ವೀಕ್ಷಿಸಿ ಕೋವಿಡ್ ಹತೋಟಿಗೆ ಹರಸಾಹಸ ಪಟ್ಟಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಹಲವಾರು ಕ್ರಮಗಳನ್ನು ಹಾಗೂ ಕಠಿಣ ನಿರ್ಧಾರಗಳನ್ನು ಕೈಗೊಂಡು ಜನರ ಜೀವ ರಕ್ಷಣೆಗಾಗಿ ಸರ್ಕಾರ ಹಗಲಿರುಳು ಶ್ರಮಿಸಿದೆ ಎಂದು ಹೇಳಿದರು.
ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಮೂಲಕ ದೇಶದಲ್ಲಿಯೇ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಥಮ ಯೋಜನೆ ಜಾರಿಗೊಳಿಸಲಾಯಿತು. ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ, ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳಿಗಾಗಿ ಅಂದಾಜು 16 ಸಾವಿರ ಕೋಟಿ ರೂ. ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ವಿನಿಯೋಗಿಸಲಾಗಿದೆ. ವಿರೋಧಿ ಗಳ ಟೀಕೆ-ಟಿಪ್ಪಣಿಗಳಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಪ್ರತ್ಯುತ್ತರ ನೀಡೋಣ ಎಂದರು.
ಗ್ರಾಪಂ ಅಧ್ಯಕ್ಷ ಶ್ಯಾಮಸುಂದರ ಡಂಬಳ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಸಚಿವರು ಸ್ಪಂದಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟಿಗೂ ಅಧಿಕ ಅನುದಾನ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿ ಪರ್ವ ಅವರಿಂದ ಹೀಗೆಯೇ ನಿರಂತರವಾಗಿ ಮುಂದುವರೆಯಲಿ ಎಂದರು.