Advertisement

ಅಭಿವೃದ್ಧಿ ವಿಚಾರ: ಸಿದ್ದರಾಮಯ್ಯಗೆ ದೇವೇಗೌಡ ಪಂಥಾಹ್ವಾನ

09:40 AM Dec 31, 2017 | Team Udayavani |

ಬೆಂಗಳೂರು: ಅಭಿವೃದ್ಧಿ ವಿಚಾರದಲ್ಲಿ ತಮ್ಮನ್ನು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಬ್ಬರ ಕಾಲದಲ್ಲೂ ಆಗಿರುವ ಅಭಿವೃದ್ಧಿ ಬಗ್ಗೆ ಮುಖಾಮುಖೀ ಚರ್ಚೆಗೆ ಬರಲಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪಂಥಾಹ್ವಾನ ನೀಡಿದ್ದಾರೆ.

Advertisement

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಜನಪರ ಯೋಜನೆಗಳೇ ಇರಲಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ನಾಲ್ಕು ವರ್ಷಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ. ನನಗೂ ಮಾತನಾಡಲು ಬರುತ್ತದೆ. ತಾಳ್ಮೆಗೂ ಒಂದು ಮಿತಿಯಿದೆ. ಸಹನೆ ಕಟ್ಟೆಯೊಡೆದರೆ ಅದರ ಪರಿಣಾಮ ಬೇರೆಯೇ ಆಗುತ್ತದೆ ಎಂದು ಎಚ್ಚರಿಕೆ ಧಾಟಿಯಲ್ಲಿ ತಿಳಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಪಿಯರ್‌ಲೆಸ್‌ ಸಂಸ್ಥೆಯಿಂದ ಸಾಲ ತೆಗೆದುಕೊಂಡು ನೀರಾವರಿ ಯೋಜನೆಗೆ ಹಣಕೊಟ್ಟಿದ್ದನ್ನು ಆಗ ನನ್ನ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಮರೆತು ಹೋದರೇ ಎಂದು ಪ್ರಶ್ನಿಸಿದರು. ನನ್ನ ಸಂಪುಟದಲ್ಲಿ ಹಣಕಾಸು ಮತ್ತು ಅಬಕಾರಿ ಸಚಿವ, ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಉಪಮುಖ್ಯಮಂತ್ರಿ ಜತೆಗೆ ಹಣಕಾಸು, ಅಬಕಾರಿ ಸಚಿವ ಸ್ಥಾನ ಪಡೆದಿದ್ದ ಸಿದ್ದರಾಮಯ್ಯ, ಧರ್ಮಸಿಂಗ್‌ ಸರ್ಕಾರದಲ್ಲೂ ಉಪ ಮುಖ್ಯಮಂತ್ರಿ ಹಣಕಾಸು ಮತ್ತು ಅಬಕಾರಿ ಸಚಿವರಾಗಿದ್ದರು. ಅಧಿಕಾರದಲ್ಲಿದ್ದಾಗಲೆಲ್ಲ ಹಠ ಹಿಡಿದು ಹಣಕಾಸು, ಅಬಕಾರಿ ಖಾತೆ ಪಡೆದು ಕೊಳ್ಳುತ್ತಿದ್ದುದು ಯಾಕೆ? ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಮಾಡಿರುವ ಸಾಧನೆ ನನಗೆ ಗೊತ್ತಿದೆ, ಹೆಚ್ಚು ಬೆಳೆಸುವುದು ನನಗೆ ಇಷ್ಟವಿಲ್ಲ, ಆದರೆ, ಸಿದ್ದರಾಮಯ್ಯ ಅಹಂ ಬಿಡಲಿ ಎಂದರು.

ಸಿದ್ದರಾಮಯ್ಯ ಅವರು ಸರ್ಕಾರದ ಹಣದಲ್ಲಿ ಸಾಧನಾ ಸಂಭ್ರಮ ಮಾಡಿ ಕತ್ತಿ, ಗುರಾಣಿ, ಕಿರೀಟ, ಗದೆ ಪಡೆದು 
ಇನ್ನೇನು ಅಧಿಕಾರಕ್ಕೆ ಬಂದೇ ಬಿಟ್ಟೆ ಎಂಬಂತೆ ಮಾತನಾಡುತ್ತಿದ್ದಾರೆ. ರಾಹುಲ್‌ಗಾಂಧಿಯವರೇ ಬಂದು ಕಾಂಗ್ರೆಸ್‌ ಸರ್ಕಾರ ಬಂದರೆ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದೂ ಘೋಷಿಸಿ ಚುನಾವಣೆ ಗೆಲ್ಲಲಿ ನೋಡೋಣ ಎಂದು ವ್ಯಂಗ್ಯವಾಡಿದರು. ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರ ಮನೆ ಬಾಗಿಲಿಗೆ ಹಾಲು-ಜೇನು, ತುಪ್ಪ-ಸಕ್ಕರೆ ಹರಿದು ಬಿಟ್ಟಿದೆಯಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ, ಕುಮಾರಸ್ವಾಮಿ ತಿಪ್ಪರಲಾಗ ಹಾಕಿದರೂ ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿದ್ದಾರೆ.ಇವರೇನು ಹಣೆಬರಹ ಬರೆಯುತ್ತಾರಾ? ಬಿಜೆಪಿಯವರ ಬಗ್ಗೆ ಏನಾದರೂ ಮಾತನಾಡಿಕೊಳ್ಳಲಿ. ನಮ್ಮ ತಂಟೆಗೆ ಬರುವುದು ಬೇಡ ಎಂದು ಹೇಳಿದರು.

Advertisement

ನಾನು ಪ್ರಧಾನಿ ಬಗ್ಗೆ ಮೃದು ಧೋರಣೆ ಎಂದು ಟೀಕಿಸುತ್ತಾರೆ. ನಾನು ಮೋದಿಯಷ್ಟೇ ಅಲ್ಲ ರಾಹುಲ್‌ ಗಾಂಧಿ ಬಗ್ಗೆಯೂ ಮಾತನಾಡಲ್ಲ, ಸೋನಿಯಾಗಾಂಧಿ ಬಗ್ಗೆಯೂ ಮಾತನಾಡಲ್ಲ. ನನ್ನ ಕೆಲಸವೇ ಬೇರೆ, ರಾಜ್ಯದ ಅಭಿವೃದ್ಧಿ ನನಗೆ ಮುಖ್ಯ ಅಷ್ಟೇ ಎಂದರು. ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ -ಬಿಜೆಪಿಯವರು ಆರೋಪ- ಪ್ರತ್ಯಾರೋಪ ಮಾಡುವುದರಲ್ಲಿ ಅರ್ಥವಿಲ್ಲ. ಪ್ರಧಾನಿ ಮಧ್ಯಸ್ಥಿಕೆ ವಹಿಸದ ಹೊರತು ಸಮಸ್ಯೆಗೆ ಪರಿಹಾರ ಸಿಗದು. ಪ್ರಧಾನಿಯವರನ್ನು ಮತ್ತೂಮ್ಮೆ ಭೇಟಿಯಾಗಲು ಸಿದ್ಧ ಎಂದು ಹೇಳಿದರು.

ಶಾಸಕ ಸುರೇಶ್‌ಬಾಬು, ವಿಧಾನ ಪರಿಷತ್‌ ಸದಸ್ಯರಾದ ಅಪ್ಪಾಜಿಗೌಡ, ರಮೇಶ್‌ಬಾಬು, ಮುಖಂಡ ಆರ್‌
.ವಿ.ಹರೀಶ್‌ ಉಪಸ್ಥಿತರಿದ್ದರು.

ಜನವರಿ 15ರ ನಂತರ ಪಕ್ಷ ಸಂಘಟನೆಗೆ ನಾನು ಪ್ರವಾಸ ಕೈಗೊಳ್ಳುತ್ತೇನೆ. ಎಚ್‌.ಡಿ.ಕುಮಾರಸ್ವಾಮಿ ಕೈಗೊಳ್ಳುವ ಯಾತ್ರೆಗೆ ಪರ್ಯಾಯವಾಗಿ ಪಿ.ಜಿ.ಆರ್‌.ಸಿಂಧ್ಯ, ಎಚ್‌.ವಿಶ್ವನಾಥ್‌, ಬಸವರಾಜ ಹೊರಟ್ಟಿ ಸಹಿತ
ನಾಯಕರ ಜತೆ ನಾನು ಯಾತ್ರೆ ಹೊರಡುತ್ತೇನೆ. ಅವರೊಂದು ಕಡೆ ಹೋಗ್ತಾರೆ, ನಾನೊಂದು ಕಡೆ ಹೋಗ್ತೀನೆ. ನಮ್ಮಲ್ಲೂ ನಾಯಕರಿದ್ದಾರೆ, ಸಿದ್ದರಾಮಯ್ಯ ಅವರು ಹೋದ ಮೇಲೆ ಪಕ್ಷ ಮುಳುಗೇ ಹೋಯ್ತು ಎಂದು ಹೇಳಿದ್ದರು. ಆದರೆ, ಪಕ್ಷ ಗಟ್ಟಿಯಾಗಿ ನಿಂತಿಲ್ಲವೇ ?

–  ಎಚ್‌.ಡಿ.ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next