ಕೆ.ಆರ್.ಪುರ: ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿರುವ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಎ.ಬಸವರಾಜ ಅವರು ಗುರುವಾರ ಬೆಳಗ್ಗೆ 7 ಗಂಟೆ ವೇಳೆಗಾಗಲೇ ಕ್ಷೇತ್ರದ ವಿಜಿನಾಪುರ ವಾರ್ಡ್‌ಗೆ ತೆರಳಿ ಮತದಾರರನ್ನು ಭೇಟಿ ಮಾಡಿದರು.
ಎಫ್ಸಿಐ ಗೋಡೌನ್, ಮಿನಿ ತಾಜ್‌ಮಹಲ್, ಸುಬ್ರಹ್ಮಣ್ಯ ಬಡಾವಣೆ, ಕೊತ್ತೂರು, ಕುವೆಂಪುನಗರ, ಅಂಬೇಡ್ಕರ್ ನಗರ, ಆರ್.ಆರ್.ಬಡಾವಣೆಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದ ನಂತರ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಜನಪರ ಯೋಜನೆಗಳು ಹಾಗೂ ಐದು ವರ್ಷದ ಅವಧಿಯಲ್ಲಿ ಕೆ.ಆರ್.ಪುರ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ,’ ಎಂದರು.
“ಬಡ ಮತ್ತು ಮಧ್ಯಮ ವರ್ಗದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಕೆ.ಆರ್.ಪುರ ಕ್ಷೇತ್ರ, ಈ ಹಿಂದೆ ಮೂಲ ಸೌಕರ್ಯಗಳಿಂದ ವಂಚಿತವಾಗಿ, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿತ್ತು. ಆದರೆ ನಾನು ಶಾಸಕನಾದ ನಂತರ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಸೌಲಭ್ಯ ಒದಗಿಸಿದ್ದೇನೆ. ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳು, ವಸತಿ ರಹಿತರಿಗೆ ವಸತಿ ಸೌಲಭ್ಯ, ಗುಣಮಟ್ಟದ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ, ಪಾರ್ಕ್, ರೈಲ್ವೆ ಕೆಳಸೇತುವೆಗಳ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ,’ ಎಂದು ತಿಳಿಸಿದರು.
ಇದೇ ವೇಳೆ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಮುಖಂಡ ಶೇಖರ್ ನೇತೃತ್ವದಲ್ಲಿ ಶೌಖತ್ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಶಾಸಕ ಬಿ.ಎ.ಬಸವರಾಜ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನೇಗೌಡ, ಮುಖಂಡರಾದ ಸೈಯ್ಯದ್ ಮಸ್ತಾನ್, ಸುಗುಮಾರ, ಪ್ರದೀಪ್‌ಗೌಡ, ಅಭಿ, ಜುನೈದ್, ಸುವರ್ಣ, ನಾಗೇಶ, ಮಾಲಿಕ್, ಅಮ್ಜದ್, ಮೆಹಬೂಬ್, ಆಸಿಪ್, ಬಾಬು ಸೆಲ್ವಂ, ಸಮಿವುಲ್ಲಾ ಹಾಗೂ ಇತರರಿದ್ದರು.