ಹೊಳಲ್ಕೆರೆ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ 1500 ಕೋಟಿ ರೂ. ಅನುದಾನ ತಂದಿದ್ದು, ಎಲ್ಲಾ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಸುಮಾರು 200 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ತಾಲೂಕಿನ ಸಿರಾಪನಹಳ್ಳಿ ಗ್ರಾಮದಲ್ಲಿ 4 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾರಿಕಣಿವೆಯಿಂದತಾಲೂಕಿನ ಎಲ್ಲಾ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 350ಕೋಟಿ ರೂ. ನೀಡಲಾಗಿದೆ. 200 ಕೋಟಿ ರೂ. ಅನುದಾನದಲ್ಲಿ ಎಲ್ಲಾ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಹಳ್ಳೇಹಳ್ಳಿ-ಗೊಲ್ಲರಹಳ್ಳಿ ಗ್ರಾಮದ ಅಭಿವೃದ್ಧಿಗೆ 15 ಲಕ್ಷ, ದಾಸಯ್ಯನ ಹಟ್ಟಿಗೆ 15 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ 5 ಲಕ್ಷ, ಮದ್ದೇರು ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಲು 100 ಲಕ್ಷ ರೂ. ನೀಡಲಾಗಿದೆ. ತಾಳ್ಯದಲ್ಲಿ 20 ಲಕ್ಷದ ಸಿಸಿ ರಸ್ತೆ, ಗಟ್ಟಿಹೊಸಹಳ್ಳಿಯಲ್ಲಿ ಶಾಲಾ ಕೊಠಡಿ, ಗೋಕಟ್ಟೆ ನಿರ್ಮಾಣಕ್ಕೆ 20 ಲಕ್ಷ, ನೇಲಕಟ್ಟೆಗೆ 10 ಲಕ್ಷದ ಸಿಸಿ ರಸ್ತೆ, ವೆಂಕಟೇಶಪುರಕ್ಕೆ 15 ಲಕ್ಷದಲ್ಲಿ ಸಿಸಿ ರಸ್ತೆ, 1 ಅಂಗನವಾಡಿ ಕಟ್ಟಡ, 1 ಶುದ್ಧ ನೀರಿನ ಘಟಕ, ಹುಲಿಕೆರೆ ಗ್ರಾಮಕ್ಕೆ 1 ಶಾಲಾ ಕಟ್ಟಡ, ಪಾಪೇನಹಳ್ಳಿಗೆ 1ಶಾಲಾ ಕಟ್ಟಡ, ಮಲ್ಲಸಿಂಗಹಳ್ಳಿಗೆ 1 ಶಾಲಾ ಕೊಠಡಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಸೋಮವಾರ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಕೋಟೆಹಾಳ್ ಹತ್ತಿರ 250 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಿ ಚಿತ್ರಹಳ್ಳಿ, ಎಚ್.ಡಿ. ಪುರ, ಮಲ್ಲಾಡಿಹಳ್ಳಿ, ಚಿಕ್ಕಜಾಜೂರು, ಸಾಸಲು ಭಾಗದಲ್ಲಿರುವ ವಿದ್ಯುತ್ ಘಟಕಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಈ ಮೂಲಕ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಂತೆ ಮಾಡಲಾಗುತ್ತದೆ. ಇದರಿಂದ ಕೃಷಿ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದರು.
ಪ್ರಥಮದರ್ಜೆ ಗುತ್ತಿಗೆದಾರ ಚಿಕ್ಕಕಂದವಾಡಿ ರಾಜಣ್ಣ, ಗ್ರಾಮದ ಹಿರಿಯ ಮುಖಂಡ ಹನುಮಂತಪ್ಪ, ಎಪಿಎಂಸಿ ಉಪಾಧ್ಯಕ್ಷ ರಮೇಶ್, ಸುರೇಶ್, ಚಿತ್ರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್ ಮತ್ತಿತರರು ಇದ್ದರು.