Advertisement

ಪಂಚ ಪ್ರಜ್ಞೆ ಬೆಳೆಸಿಕೊಂಡರೆ ಸಮಾಜ ಅಭಿವೃದ್ಧಿ

05:59 AM Feb 10, 2019 | |

ಹರಿಹರ: ಧರ್ಮ ಪ್ರಜ್ಞೆ, ಕಾಯಕ ಪ್ರಜ್ಞೆ, ಸಮೂಹ ಪ್ರಜ್ಞೆ, ಸಾಕ್ಷರ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆಸಿಕೊಂಡರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಚಿತ್ರದುರ್ಗ ಮುರುಘಾಮಠದ ಡಾ| ಶಿವಮೂರ್ತಿ ಶರಣರು ಪ್ರತಿಪಾದಿಸಿದರು.

Advertisement

ತಾಲೂಕಿನ ರಾಜನಹಳ್ಳಿ ಗುರುಪೀಠದಲ್ಲಿ ಶನಿವಾರ ವಾಲ್ಮೀಕಿ ಜಾತ್ರಾ ಮಹೋತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, ಧರ್ಮ ಎಂದರೆ ಮಂತ್ರ-ತಂತ್ರಗಳ ಸಂಕೀರ್ಣ, ಮೂಢನಂಬಿಕೆ ಅಲ್ಲ. ಸರಳ ಬದುಕಿಗೆ ಅಗತ್ಯವಾದ ನಿರ್ಮಲ ವಿಚಾರಗಳ ಸಂಗಮ. ಮಾನವರನ್ನು ಒಳಿತಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಿ ಎಂದರು. ದುಶ್ಚಟಗಳನ್ನು ತೊರೆದು ದೈಹಿಕ-ಮಾನಸಿಕ ಆರೋಗ್ಯದಿಂದ ದುಡಿಯುವ ಕಾಯಕ ಪ್ರಜ್ಞೆ, ಚದುರಿರುವ ಸಮಾಜ ಒಂದುಗೂಡಿಸುವ ಸಮೂಹ ಪ್ರಜ್ಞೆ, ವಿದ್ಯಾವಂತರಾಗಿ ಜಾಗೃತಿ ಹೊಂದುವ ಸಾಕ್ಷರ ಪ್ರಜ್ಞೆ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಾವೆಲ್ಲ ಒಂದು ಎಂಬ ರಾಷ್ಟ್ರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ವಾಲ್ಮೀಕಿ ಜಾತ್ರೆ ಜನಜಾತ್ರೆಯಾಗಿದೆ. ರಾಮ, ಕೃಷ್ಣರಿಗೆ ಸಮಾನವಾಗಿ ನಿಲ್ಲಬಲ್ಲ ವ್ಯಕ್ತಿತ್ವ ವಾಲ್ಮೀಕಿಯದು. ದಲಿತರು, ಹಿಂದುಳಿದವರೂ ಸಹ ಅತ್ಯುತ್ತಮ ಸಾಹಿತ್ಯ ರಚಿಸಬಲ್ಲರು, ಎಲ್ಲಾ ಜನಾಂಗದವರಲ್ಲೂ ದಕ್ಷತೆ, ಯೋಗ್ಯತೆಯಿರುತ್ತದೆ ಎಂಬುದಕ್ಕೆ ವಾಲ್ಮೀಕಿಯೇ ಸಾಕ್ಷಿ ಎಂದರು.

ಸಮುದಾಯ ಭವನ ಉದ್ಘಾಟಿಸಿದ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್‌ ಮಾತನಾಡಿ, ವಾಲ್ಮೀಕಿ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದ್ದು, ಗುರುಪೀಠದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಚಂದ್ರಶೇಖರ್‌ ಪ್ರಧಾನಿಯಾಗಿದ್ದಾಗ ವಾಲ್ಮೀಕಿ ಸಮುದಾಯದವರಿಗೆ ರಾಷ್ಟ್ರಮಟ್ಟದಲ್ಲಿ ಮೀಸಲಾತಿ ಕಲ್ಪಿಸಿದರು. ವೃತ್ತಿ ಆಧಾರಿತ ನಾಯಕ, ಕುರುಬ, ಮಾದಿಗ ಸಮಾಜಗಳ ನಡುವೆ ಸಂಶಯಗಳು ಬೇಡ, ಒಗ್ಗಟ್ಟಾಗಿರಬೇಕು ಎಂದರು.

ಗಣ್ಯರ ಭಾವಚಿತ್ರ ಅನಾವರಣಗೊಳಿಸಿದ ಸಂಸದ ಪ್ರತಾಪ್‌ ಸಿಂಹ, ವಾಲ್ಮೀಕಿ ಜನಾಂಗಕ್ಕೆ ಸೇರಿದ ಪರಿವಾರ, ತಳವಾರ ಸಮುದಾಯಗಳಿಗೂ ಎಸ್ಟಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಟಿ.ಪಿ.ಪರಮೇಶ್ವರ ನಾಯ್ಕ, 2ನೇ ಸಲ ತಾವು ಚುನಾವಣೆಗೆ ಸ್ಪರ್ಧಿಸಿದ್ದಾಗ ಎಲ್ಲರೂ ಕೈ ಬಿಟ್ಟರು. ಆದರೆ ಲಿಂ| ಪುಣ್ಯಾನಂದಪುರಿ ಶ್ರೀಗಳ ಬೆಂಬಲ, ಆಶೀರ್ವಾದದಿಂದ ತಾವು ಗೆದ್ದು, ರಾಜಕೀಯದಲ್ಲಿ ಬೆಳೆಯಲು ಅವಕಾಶವಾಯಿತು ಎಂದರು.

ವಾಲ್ಮೀಕಿ ಮಹಾದ್ವಾರ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ಸುತ್ತೂರು ಜಾತ್ರೆ, ತರಳುಬಾಳು ಹುಣ್ಣೆಮೆಯನ್ನೂ ಮೀರಿಸುವಂತೆ ವಾಲ್ಮೀಕಿ ಜಾತ್ರೆ ನಡೆಯುತ್ತಿದೆ ಎಂದರು.

ಕಲ್ಯಾಣ ಮಂಟಪ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್‌, ವಾಲ್ಮೀಕಿ, ಅಂಬೇಡ್ಕರ್‌ ಹೆಸರಿನಲ್ಲಿ ವಾಜಪೇಯಿ ಬಡವರಿಗೆ ವಸತಿ ಕಲ್ಪಿಸಿದರು. ಬಿಎಸ್‌ವೈ ಸಿಎಂ ಆಗಿದ್ದಾಗ ವಾಲ್ಮೀಕಿ ಜಯಂತಿ ಸರ್ಕಾರಿ ಆಚರಣೆಯಾಗಿ ಮಾಡಿದ್ದು ಹಾಗೂ ಪೀಠಕ್ಕೆ 8 ಕೋ.ರೂ. ನೀಡಿದ್ದನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸತೀಶ್‌ ಜಾರಕಿಹೊಳಿ, ಹಿಂದೆ ಬೇಡರ ಕಣ್ಣಪ್ಪ ಕಣ್ಣು ಕೊಟ್ಟ. ಏಕಲವ್ಯ ಹೆಬ್ಬೆರಳು ಕೊಟ್ಟ. ಕೊಡುವುದಿನ್ನು ಸಾಕು, ಪಡೆಯುವ ಕಾಲ ಬಂದಿದೆ. ಶೆ.7.5ರ ಮೀಸಲಾತಿ ಪಡೆಯುವುದು ನಮ್ಮ ಗುರಿಯಾಗಿದೆ ಎಂದರು.

ಜಾತ್ರಾ ಸಮಿತಿ ಉಪಾಧ್ಯಕ್ಷ ಶ್ರೀರಾಮುಲು, ನಮಗೆ ಸಮಾಜ ಮುಖ್ಯವೇ ಹೊರತು ಪಕ್ಷವಲ್ಲ. ಅಸ್ಪೃಶ್ಯತೆಯ ನೋವಿನಿಂದ ಸಮಾಜವನ್ನು ಹೊರತರಬೇಕಾಗಿದೆ ಎಂದರು.

ಪ್ರಸನ್ನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಡಾ| ಎರಾಂ, ಮಾಜಿ ಸಂಸದ ಭಗವಂತ ನಾಯಕ, ಶಾಸಕರಾದ ಎಸ್‌.ರಾಮಪ್ಪ, ರಾಮಚಂದ್ರಪ್ಪ, ಎನ್‌.ವೈ. ಗೋಪಾಲಕೃಷ್ಣ, ರೇಣುಕಾಚಾರ್ಯ, ರಾಜಾ ವೆಂಕಟಪ್ಪ ನಾಯಕ, ಶಿವನಗೌಡ ನಾಯಕ, ಬಸವನಗೌಡ ದದ್ದಲ, ಅನಿಲ್‌ ಚಿಕ್ಕಮಾದು, ಮಾಜಿ ಶಾಸಕರಾದ ಎಚ್.ಎಸ್‌. ಶಿವಶಂಕರ್‌, ಬಿ.ಪಿ. ಹರೀಶ್‌, ಶಾಂತನಗೌಡ, ಧರ್ಮದರ್ಶಿ ಕೆ.ಬಿ.ಮಂಜಣ್ಣ, ಓಬಳಪ್ಪ ಮತ್ತಿತರರಿದ್ದರು.

ರಾಮಾಯಣ ಬೇಕು, ಆದರೆ ವಾಲ್ಮೀಕಿ ಬೇಡ

ಹರಿಹರ: ರಾಮಾಯಣ ಮಹಾಕೃತಿ ರಚಿಸಿದ ವಾಲ್ಮೀಕಿ ಮಹರ್ಷಿಗಳನ್ನು ಮೂಲೆಗೆ ತಳ್ಳಿ ರಾಮಮಂದಿರ ಕಟ್ಟಲು ಮುಂದಾಗುತ್ತಿದ್ದಾರೆ ಎಂದು ಮಾಜಿ ಸಚಿವ ಡಾ|ಎಚ್.ಸಿ. ಮಹದೇವಪ್ಪ ಟೀಕಿಸಿದರು. ತಾಲೂಕಿನ ರಾಜನಹಳ್ಳಿಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರಿಗೆ ರಾಮಾಯಣ ಮಾತ್ರ ಮುಖ್ಯ. ಆದರೆ ಅದರ ಕರ್ತೃ ವಾಲ್ಮೀಕಿ ಮುಖ್ಯವಲ್ಲ. ಏಕೆಂದರೆ ಅವರು ಹಿಂದುಳಿದ ಸಮಾಜಕ್ಕೆ ಸೇರಿದವರು ಎಂದರು. ರಾಮಾಯಣದ ಮೂಲಕ ಸುಖೀ ರಾಜ್ಯದ ಪರಿಕಲ್ಪನೆ ನೀಡಿದ ವಾಲ್ಮೀಕಿ, ದ್ರಾವಿಡ ಚಳವಳಿಯ ಮೂಲಕ ಸಮಾನತೆ, ಮೂಲಭೂತ ಹಕ್ಕುಗಳಿಗೆ ಹೋರಾಡಿದ ರಾಮಸ್ವಾಮಿ ಪೆರಿಯಾರ್‌, ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್‌ ಇವರೆಲ್ಲಾ ಹಿಂದುಳಿದ ಜನಾಂಗಕ್ಕೆ ಸೇರಿರುವುದು ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂದರು. ಮಾಜಿ ಸಂಸದ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್‌ ಮಾತನಾಡಿ, ದೇಶ-ವಿದೇಶಗಳಲ್ಲೂ ರಾಮಾಯಣ ಪ್ರಸಿಧಿಯಾಯ್ತೆ ವಿನಃ ವಾಲ್ಮೀಕಿ ಕಡೆಗಣಿಸಲ್ಪಟ್ಟರು. ವಾಲ್ಮೀಕಿ, ಬುದ್ಧ, ಬಸವ, ಕನಕ, ಅಂಬೇಡ್ಕರ್‌, ಗಾಂಧಿಧೀಜಿ ಬಗ್ಗೆಯೆ ಕೆಲವರು ಅಸಮಾಧಾನ ಹೊಂದಿರುವುದು ಅಕ್ಷಮ್ಯವಾಗಿದೆ ಎಂದರು.

ಸತೀಶ್‌, ಶ್ರೀರಾಮುಲು ಸಿಎಂ ಆಗಲಿ
ರಾಜ್ಯದ ರಾಜಕೀಯ ವ್ಯವಸ್ಥೆ ಸರಿಯಿಲ್ಲ. ಹಿಂದೆ ಶ್ರೀರಾಮುಲು, ನಂತರ ಸತೀಶ್‌ ಜಾರಕಿಹೊಳಿ ಹಾಗೂ ಈಗ ರಮೇಶ್‌ ಜಾರಕಿಹೊಳಿ ಅವರನ್ನು ತುಳಿಯಲಾಗುತ್ತಿದೆ. ಸತೀಶ್‌ ಮತ್ತು ಶ್ರೀರಾಮುಲು ಈ ರಾಜ್ಯದ ಸಿಎಂ ಆಗಬೇಕು ಎಂದು ಶಾಸಕ ರಾಜುಗೌಡ ಹೇಳಿದರು.

ವಾಲ್ಮೀಕಿ ಸಮಾಜದ 2 ರತ್ನಗಳು
ಅಮವಾಸ್ಯೆಯಂದು ಸ್ಮಶಾನದಲ್ಲಿ ಉಂಡು, ಮಲಗುವ ಮೂಲಕ ಮೌಡ್ಯತೆಯ ವಿರುದ್ಧ ಸಮರ ಸಾರಿರುವ ಸತೀಶ್‌ ಜಾರಕಿಹೊಳಿ ಮತ್ತು ವಾಲ್ಮೀಕಿಯಂತೆಯೆ ಜಟಾಧಾರಿ(ಗಡ್ಡಧಾರಿ) ಆಗಿರುವ ಶ್ರೀರಾಮುಲು ವಾಲ್ಮೀಕಿ ಸಮಾಜದ 2 ರತ್ನಗಳಾಗಿದ್ದು, ಇವರೂ ಸಿಎಂ ಆಗಿ ವಾಲ್ಮೀಕಿ ಜನಾಂಗ ಸೇರಿದಂತೆ ರಾಜ್ಯದ ಎಲ್ಲ ಜನರ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದು ಚಿತ್ರದುರ್ಗದ ಶಿವಮೂರ್ತಿ ಶರಣರು ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next