Advertisement

ಆರ್ಯ ಈಡಿಗ ಸಮಾಜ ಅಭಿವೃದ್ಧಿಪಡಿಸಿ

02:50 PM Sep 07, 2017 | |

ದಾವಣಗೆರೆ: ಆರ್ಯ ಈಡಿಗ ಸಮಾಜವನ್ನ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಜೊತೆಗೆ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ಒತ್ತಾಯಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಆರ್ಯ ಈಡಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಈಡಿಗರ ಸಂಘದ ವಿದ್ಯಾರ್ಥಿ ನಿಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು,  ಆರ್ಯ ಈಡಿಗ ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಡವರಿದ್ದಾರೆ. ಆದರೆ, ಆರ್ಯ ಈಡಿಗರು ಸಾಮಾಜಿಕ, ಶೈಕ್ಷಣಿಕ, ಚಲನಚಿತ್ರ, ಪತ್ರಿಕೋದ್ಯಮ ಇತರೆ ಕ್ಷೇತ್ರದಲ್ಲಿ ನೀಡಿರುವ ಕಾಣಿಕೆ ಅಪಾರ ಎಂದು ಬಣ್ಣಿಸಿದರು.

ಕಾಂಗ್ರೆಸ್‌ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಾಭಿವೃದ್ಧಿಗೆ 10 ಕೋಟಿ ನೀಡಿದೆ. ಆರ್ಯಈಡಿಗ ಸಮಾಜವನ್ನು ಕೆನೆಪದರ, ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಜೊತೆಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಆರ್ಯ ಈಡಿಗ ಸಮಾಜ ಸಾಮಾಜಿಕ, ಶೈಕ್ಷಣಿಕ,
ಆರ್ಥಿಕ, ಔದ್ಯೋಗಿಕ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ದಿ ಸಾಧಿಸಲು ನೆರವು ನೀಡಬೇಕಿದೆ ಎಂದು ಹೇಳಿದರು.

ಆರ್ಯ ಈಡಿಗ ಸಮಾಜದ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ, ಕನ್ನಡದ ವರನಟ ಡಾ| ರಾಜ್‌ ಕುಮಾರ್‌, ಟಿ.ಎ. ನೆಟ್ಟಕಲ್ಲಪ್ಪ, ಗುರುಸ್ವಾಮಿ, ಪಿ. ವೆಂಕಟಸ್ವಾಮಿ, ಗುತ್ತೇದಾರ್‌ ಇತರರು ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಕಾಣಿಕೆ ಸಲ್ಲಿಸಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನ ಇಂದಿಗೂ ಆರ್ಯ ಈಡಿಗ ಸಮಾಜದವರು ಮುಂದುವರೆಸಿದ್ದಾರೆ ಎಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದಾರೆ
ಎಂಬುದಕ್ಕೆ ಕೇರಳದಲ್ಲಿ ಅನೇಕ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಇವೆ. ಸ್ವತಃ ಕುಷ್ಟರೋಗಿಗಳ ಸೇವೆ ಮಾಡಿದ ಗುರುಗಳು ರಸ್ತೆ, ದೇವಸ್ಥಾನ, ಶಾಲೆ ನಿರ್ಮಿಸಿದರು. ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದವರು. ಸತ್ಯಕ್ಕೆ ಎಂದಿಗೂ ಜಯ…. ಎಂಬುದನ್ನು ಸಾಧಿಸಿ, ತೋರಿದಂತಹವರು ಎಂದು ತಿಳಿಸಿದರು.

Advertisement

ಉಪನ್ಯಾಸ ನೀಡಿದ ಸಾಹಿತಿ ನಕ್ಕಿದಪುಣಿ ಗೋಪಾಲಕೃಷ್ಣ, 1854ರ ಸೆ. 18ರಂದು ಕೇರಳದ ರಾಜಧಾನಿ ತಿರುವನಂತಪುರ ಸಮೀಪದ
ಚೆಂಪಜತ್ತಿಯಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತಂದೆ ಮಾಡಲ್‌ ಆಸನ್‌, ತಾಯಿ ಕುಟ್ಟಿಯಮ್ಮ. ಸುಸಂಸ್ಕೃತ ಮನೆತನದ ಗುರುಗಳು
ಆಗ ಕೇರಳದಲ್ಲಿದ್ದ ಅತ್ಯಂತ ಅಮಾನವೀಯ, ಕ್ರೂರ ಪದ್ಧತಿಗಳ ನಿರ್ಮೂಲನೆಗೆ ಶ್ರಮಿಸಿದರು. 

ಶೋಷಿತರ ಅಭಿವೃದ್ಧಿ ಶಿಕ್ಷಣದಿಂದಲೇ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ಅನೇಕ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಶಿಕ್ಷಣ ಸಂಸ್ಥೆಗಳ ಜೊತೆಗೆ ಆಸ್ಪತ್ರೆ ನಿರ್ಮಿಸಿದವರು ಎಂದು ತಿಳಿಸಿದರು.

ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಆರ್‌. ಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಅನಿತಾಬಾಯಿ, ನಗರಸಭೆ ಮಾಜಿ ಉಪಾಧ್ಯಕ್ಷ ಎ.
ನಾಗರಾಜ್‌, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಚುನಾವಣಾ ತಹಶೀಲ್ದಾರ್‌ ಪ್ರಸಾದ್‌ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಗಂಗಾಧರ್‌ ಬಿ.ಎಲ್‌. ನಿಟ್ಟೂರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next