ಕಿಲೆಂಜೂರು: ಹೊಸ ದೈವ, ದೇವಸ್ಥಾನ ನಿರ್ಮಿಸುವುದಕ್ಕಿಂತ ಜೀರ್ಣಾವಸ್ಥೆಯಲ್ಲಿರುವ ಹಳೆಯ ದೈವ,
ದೇವಸ್ಥಾನ ಜೀರ್ಣೋದ್ಧಾರಗೊಳಿಸುವುದು ಉತ್ತಮ ಎಂದು ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು ಹೇಳಿದರು.
ಅತ್ತೂರು ಮಾಗಣೆಯ ಗೋಳಿದಡಿ ಸಮೀಪದಲ್ಲಿ ಜೀರ್ಣಾವಸ್ಥೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂರ್ವಭಾವಿಯಾಗಿ ನಡೆದ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಹಿರಿಯರು ಇಲ್ಲಿ ದೇವಸ್ಥಾನ ಇದೆ ಎಂಬ ಬಗ್ಗೆ ಹೇಳುತ್ತಿದ್ದರು. ಅಲ್ಲದೆ ಮಾಗಣೆಯ ಅನೇಕ ಕಡೆಗಳಲ್ಲಿ ಪ್ರಶ್ನೆಗಳಲ್ಲಿ ಈ ದೇವಸ್ಥಾನ ಇದ್ದ ಬಗ್ಗೆ ತಿಳಿದು ಬಂದಿದೆ. ಸರ್ವರ ಸಹಕಾರದಿಂದ ಈ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಬಹುದು ಎಂದರು.
ಅತ್ತೂರಬೈಲು ನಟರಾಜ ಉಡುಪ ಮಾತನಾಡಿ, ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ, ಇದರಿಂದ ನಮ್ಮ ಮಾಗಣೆಯ ಭಕ್ತರ ಸರ್ವ ದೋಷ ನಿವಾರಣೆಯಾಗಲಿದೆ ಎಂದರು.
ಮುಂದಿನ ಮೇ 27 ಮತ್ತು 28ರಂದು ದೈವಜ್ಞ ಪದ್ಮರಾಮ ಶರ್ಮ ಹಾಗೂ ಮಧೂರು ರಂಗ ಭಟ್ಟರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇಡುವ ಬಗ್ಗೆ ತೀರ್ಮಾನಿಸಲಾಯಿತು. ಪ್ರಸನ್ನ ಶೆಟ್ಟಿ ಅತ್ತೂರಗುತ್ತು, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ಶ್ಯಾಮರಾಯ ಶೆಟ್ಟಿ ಗೋಳಿದಡಿ, ಮಹಾಬಲ ಶೆಟ್ಟಿ ಪಡುಮನೆ, ಸುರೇಶ್ ಶೆಟ್ಟಿ ದೇವಸ್ಯ, ಶ್ರೀಧರ ಶೆಟ್ಟಿ ಬಾಂಜಾಲಗುತ್ತು, ಶಂಕರ ಶೆಟ್ಟಿ ಮೂಡ್ರಗುತ್ತು, ಪ್ರಶಾಂತ್ ಮಾಡರ ಮನೆ ಭಾಗವಹಿಸಿದ್ದರು.