Advertisement

ನಗರ ಸೌಂದರ್ಯಕ್ಕೆ ಪೂರಕವಾಗಿ ಅಭಿವೃದ್ಧಿ ಕೆಲಸಗಳಾಗಲಿ

08:27 PM Jun 07, 2019 | Team Udayavani |

ಬಂಟ್ವಾಳ: ಮಂಗಳೂರಿನಿಂದ ಬಂಟ್ವಾಳದ ಮೂಲಕ ಸಾಗುವ ಮಂಗಳೂರು – ಬೆಂಗಳೂರು ರೈಲಿಗೆ ಬಿ.ಸಿ. ರೋಡ್‌ ನಗರ ಕೇಂದ್ರದಲ್ಲಿ ರೈಲು ನಿಲ್ದಾಣ ರೈಲ್ವೇ ಕಡತಗಳಲ್ಲಿ ಜೋಡುಮಾರ್ಗ ಎಂದೇ ದಾಖಲಾಗಿದೆ. ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕ ರಿಗೆ ಪೂರಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದೀಗ ಇಲಾಖೆಯಿದ ಅನುದಾನ ಬಿಡುಗಡೆ ಆಗಿದೆ. ಸೌಲಭ್ಯ ಒದಗಿಸುವ ವ್ಯವಸ್ಥೆ ನಗರದ ಅಭಿವೃದ್ಧಿಗೆ ಪೂರಕವಾಗಿರುವಂತೆ ನಡೆಯಬೇಕು ಎಂಬ ಅಪೇಕ್ಷೆ ವ್ಯಕ್ತವಾಗಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಜೂ. 8ರಂದು ಮಧ್ಯಾಹ್ನ 12ಕ್ಕೆೆ ಬಿ.ಸಿ. ರೋಡ್‌ ರೈಲ್ವೇ ಸ್ಟೇಷನ್‌ಗೆ ಭೇಟಿ ನೀಡಿ ಅಲ್ಲಿನ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ. ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರೂ ಜತೆಯಲ್ಲಿರಲಿದ್ದಾರೆ.

Advertisement

5.6 ಕೋ. ರೂ. ಅನುದಾನ
ಭಾರತೀಯ ರೈಲ್ವೇ ಕಿರುನಗರ ಆದರ್ಶ ನಿಲ್ದಾಣ ಪಟ್ಟಿಯಲ್ಲಿ ಇರುವ ಜೋಡು ಮಾರ್ಗ ರೈಲು ನಿಲ್ದಾಣ 5.6 ಕೋ.ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಜ್ಜಾಗಿದೆ. ಈಗಾಗಲೇ ಮಂಜೂರು ಗೊಂಡ 2.5 ಕೋ. ರೂ. ಮಂಜೂರಾತಿ ಆಗಿದೆ. ಆದರೆ ಇಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿ ವರ್ಗಕ್ಕೇ ಮಾಹಿತಿ ಇಲ್ಲ.ಯೋಜಿತ ಕಾಮಗಾರಿ ಆರಂಭವಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಕುಂಟುತ್ತಲೇ ನಡೆಯುತ್ತಿದೆ.

ಆಧುನೀಕರಣ ಬೇಕು
ಕಂಪ್ಯೂಟರೀಕೃತ ಮುಂಗಡ ಸೀಟು ಕಾದಿರಿಸುವಿಕೆ ವ್ಯವಸ್ಥೆ ಇದೆ. ಅದರ ಆಧುನೀಕರಣ ಬೇಕು. ಒಂದನೇ ಪ್ಲಾಟ್‌ ಫಾರ್ಮ್ನಿಂದ 2ನೇ ಪ್ಲಾಟ್‌ ಫಾರ್ಮ್ಗೆ ಪ್ರಯಾಣಿಕರ ಪಾದಚಾರಿ ಮೇಲ್ಸೇತುವೆ ರಚನೆಯಾಗಬೇಕು. 2ನೇ ಪ್ಲಾಟ್‌ ಫಾರ್ಮ್ ನಲ್ಲಿ ಸದ್ಯ ಯಾವುದೇ ರೈಲುಗಳು ನಿಲುಗಡೆ ಇಲ್ಲ. ಪ್ರಯಾಣಿಕ ವಿಶ್ರಾಂತಿ ಶೆಲ್ಟರ್‌ ಇರುವುದಿಲ್ಲ. ಇಲ್ಲಿರುವ ಸಿಬಂದಿಯಲ್ಲಿ ಮಾಹಿತಿ ಕೇಳಿದರೆ, ಬೋರ್ಡ್‌ ನೋಡಿ ಎನ್ನುತ್ತಾರೆ.

ತತ್ಕಾಲ್‌ ಬುಕ್ಕಿಂಗ್‌ ಸಂದರ್ಭ ಮಧ್ಯವರ್ತಿಗಳು ಆಕ್ರಮಿಸಿ ಕೊಳ್ಳುತ್ತಾರೆ. ರಾತ್ರಿ, ಹಗಲೆನ್ನದೆ ಅಪರಿಚಿತರು, ಅಲೆಮಾರಿಗಳು ನಿಲ್ದಾಣ ಮತ್ತು ಸುತ್ತಮುತ್ತಲೂ ಅಲೆದಾಡುತ್ತಿರುತ್ತಾರೆ. ಬೆಂಚುಗಳಲ್ಲಿ ಮಲಗುತ್ತಿರುತ್ತಾರೆ.ಸ್ಥಳೀಯ ಭಾಷೆ ತಿಳಿಯದ ಅಧಿಕಾರಿ ವರ್ಗ ಇಲ್ಲಿಗೆ ಬರುತ್ತಾರೆ-ಹೋಗುತ್ತಾರೆ ಎಂಬಂತಾಗಿದೆ ಜೋಡುಮಾರ್ಗ ರೈಲು ನಿಲ್ದಾಣದ ಅವ್ಯವಸ್ಥೆ.

ಪ್ರಸ್ತುತ ಮಂಜೂರಾಗಿರುವ ಅನುದಾನದಲ್ಲಿ ರೈಲ್ವೇ ನಿಲ್ದಾಣದ ಎರಡು ಪ್ಲಾಟ್‌ಫಾರ್ಮ್ಗಳ ಅಭಿವೃದ್ಧಿª ಕೆಲಸ ಆಗುವುದು. ಇದರೊಂದಿಗೆ ಪ್ಲಾಟ್‌ ಫಾರ್ಮ್ಗೆ ಮೇಲ್ಛಾವಣಿ, ವಿದ್ಯುದ್ದೀಪ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ದೀಕರಿಸಿದ ಕುಡಿಯುವ ನೀರು, ವಿಶೇಷಚೇತನರಿಗೆ ವಿಶೇಷ ಶೌಚಗೃಹ, ಹೊಸ ಶೌಚಾಲಯ ಕಾಂಪ್ಲೆಕ್ಸ್‌ ರಚನೆಯಾಗಲಿದೆ. ಪ್ರತಿಯೊಂದು ಪ್ಲಾಟ್‌ ಫಾರ್ಮ್ ಕೂಡ 600 ಮೀ. ಉದ್ದವಿರುವಂತೆ ವಿಸ್ತರಣೆ ಕಾರ್ಯ ನಡೆಯುತ್ತಿವೆ. ಅಂದರೆ ಸುಮಾರು 26 ಬೋಗಿಗಳ ರೈಲು ಬಂದು ನಿಂತರೆ ಪ್ಲಾಟ್‌ ಫಾರ್ಮ್ ಪಕ್ಕದಲ್ಲೇ ಎಲ್ಲ ಬೋಗಿಗಳೂ ನಿಲ್ಲಲು ಸಾಧ್ಯವಾಗುವಂತೆ ವ್ಯವಸ್ಥೆ ಸಜ್ಜಾಗಬೇಕು.
ರೈಲು ನಿಲ್ದಾಣದ ಹತ್ತಿರ ಕೈಕುಂಜೆ ಬಡಾವಣೆ ಇದೆ. ಇಲ್ಲಿಂದ ಬಿ.ಸಿ. ರೋಡ್‌ ನಗರಕ್ಕೆ ಕೇವಲ 800 ಮೀ. ದೂರ. ಇಲ್ಲಿ ರಸ್ತೆ ಅಭಿವೃದ್ಧಿ, ಮೇಲ್ಸೇತುವೆ ರಚನೆ, ಪ್ಲಾಟ್‌ಫಾರ್ಮ್ ನಿರ್ಮಾಣವಾಗಿ ಪ್ರಯಾಣಿಕರಿಗೆ ರೈಲಿನಿಂದ ಇಳಿಯುವ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಬಲವಾಗಿದೆ.

Advertisement

ಅಪಾಯಕಾರಿ ಸೇತುವೆ
ನೇತ್ರಾವತಿ ನದಿಗೆ ಬಿ.ಸಿ. ರೋಡ್‌-ನಂದಾವರದ ನಡುವೆ ಇರುವಂತಹ ರೈಲ್ವೇ ಸೇತುವೆಯಲ್ಲಿ ಬ್ರಾಡ್‌ಗೆàಜ್‌ ನಿರ್ಮಾಣವಾಗುವ ಸಂದರ್ಭ ಪಾದಚಾರಿ ಫುಟ್‌ಪಾತ್‌ ನಿರ್ಮಿಸಲಾಗಿದ್ದು, ನಿರ್ದಿಷ್ಟ ಉದ್ದ-ಅಗಲದ ಕಬ್ಬಿಣದ ಪ್ಲೇಟ್‌ಗಳನ್ನು ಬಳಸಲಾಗಿತ್ತು. ಆದರೆ ಸುದೀರ್ಘ‌ ಒಂದು ದಶಕದ ಹಿಂದಿನ ಈ ಪ್ಲೇಟ್‌ಗಳು ದುರ್ಬಲವಾಗಿ ಒಂದು ಕಡೆ ಕಾಣೆಯಾಗಿದ್ದು, ನದಿ ತಳ ಕಾಣುತ್ತದೆ. ಇನ್ನೊಂದು ಕಡೆಯಲ್ಲಿ ಕಾಲಿಟ್ಟಾಗ ಬಾಯ್ದೆರೆದು ನುಂಗಲು ಸಿದ್ಧವಾಗಿದ್ದು, ಪ್ರಾಣಕ್ಕೆ ಎರವಾಗುವಂತಿದೆ.

 ಮೇಲ್ಸೇತುವೆ
ಬೆಂಗಳೂರಿನಿಂದ ಬೆಳಗ್ಗೆ 4.30ಕ್ಕೆ ರೈಲು ಬಂದರೆ ಇಳಿಯುವ ಪ್ರಯಾಣಿಕರು ಬಿ.ಸಿ. ರೋಡ್‌ ಕಡೆಗೆ ಲಯನ್ಸ್‌ ಸೇವಾ ಮಂದಿರದ ಎದುರು ಇರುವ ಹಳೆ ಹೆದ್ದಾರಿ ರಸ್ತೆಯಲ್ಲಿ ಸಾಗಿ ಬಿ.ಸಿ. ರೋಡ್‌ ತಲುಪುವ ಜಾಗ ನಿರ್ಜನ ಪ್ರದೇಶ. ಯಾವುದೇ ಕ್ಷಣ ಅಪಾಯ ಎದುರಿಸುವ ಸನ್ನಿವೇಶವಿದೆ. ಇದರ ಬದಲು ಎರಡನೇ ಪ್ಲಾಟ್‌ ಫಾರ್ಮ್ ಪಕ್ಕದಿಂದ ಮೇಲ್ಸೇತುವೆ ಆಗಬೇಕು. ಕೆಳಗಿಳಿದರೆ ಸಿಗುವ ಬಿ.ಸಿ. ರೋಡ್‌ ಕೈಕುಂಜೆ ರಸ್ತೆಯುದ್ದಕ್ಕೂ ಜನವಸತಿ ಇದ್ದು, ಬೆಳಗ್ಗೆ 5ಕ್ಕೆ ವೇಳೆಗಾಗಲೇ ಜನಸಂಚಾರ ಆರಂಭಗೊಳ್ಳುತ್ತದೆ. ಕೇವಲ 800 ಮೀ. ಉದ್ದದ ಈ ರಸ್ತೆಯಲ್ಲಿ ನಡೆದುಕೊಂಡು ಹೋದರೂ ಐದು ನಿಮಿಷಗಳಲ್ಲಿ ಬಿ.ಸಿ. ರೋಡ್‌ ಪೇಟೆ ತಲುಪಲು ಸಾಧ್ಯ. ಈ ಬಗ್ಗೆ ಸಂಸದರಿಗೆ ಪತ್ರ ಬರೆದಿದ್ದು, ಕೆಲಸ ಕಾರ್ಯಗತ ಆಗಬೇಕು.
 -ಸುಗುಣಾ ಕಿಣಿ, ಬಂಟ್ವಾಳ ಪುರಸಭೆ ಮಾಜಿ ಸದಸ್ಯೆ

 ರೈಲ್ವೇ ಸೊತ್ತು ಸಂರಕ್ಷಿಸಿ
ನೇತ್ರಾವತಿ ರೈಲ್ವೇ ಸೇತುವೆಯಲ್ಲಿ ಸಾರ್ವಜನಿಕರ ಕೋರಿಕೆಯ ಮೇರೆಗೆ ನಡೆದುಕೊಂಡು ಹೋಗಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾರೋ ಇವುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಇದನ್ನು ಸರಿಪಡಿಸಲಾಗುವುದು. ಇಲ್ಲಿ ಸಂಚರಿಸುವವರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವ, ವಿಹರಿಸುವ ಮೊದಲು ಎಚ್ಚರದಲ್ಲಿರಬೇಕು. ರೈಲ್ವೆ ಸೊತ್ತುಗಳನ್ನು ಸಂರಕ್ಷಿಸಬೇಕು.
 - ಕೆ.ಪಿ. ನಾಯ್ಡು , ರೈಲ್ವೇ ಪ್ರಾದೇಶಿಕ ಎಂಜಿನಿಯರ್‌

-  ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next