Advertisement

ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಕೌಶಲ್ಯ ಬೆಳೆಸಿಕೊಳ್ಳಿ

07:43 AM Mar 12, 2019 | Team Udayavani |

ತಿಪಟೂರು: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಮಾರ್ಗ ಕಂಡುಕೊಂಡು ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಂಡಾಗ ಮಾತ್ರ ಜೀವನಕ್ಕೆ ಮಾರ್ಗ ಸಿಗುತ್ತದೆ ಎಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ.ದಿಲೀಪ್‌ ಎಂ.ಶಾ ತಿಳಿಸಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ವತಿಯಿಂದ ನಡೆದ ಮ್ಯಾನೇಜ್‌ಮೆಂಟ್‌ ಫೆಸ್ಟ್‌-2019 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಉದಾಸೀನತೆ ಬಿಡಿ: ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ಆತ್ಮಸ್ಥೈರ್ಯವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಧಿಸುವ ಅರಿವು ನಿಮ್ಮಲ್ಲಿ ಬಂದರೆ ನೀವು ಸಮಾಜದಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿಗಳಾಗಿ ಇತರರಿಗೆ ಮಾದರಿಯಾಗಿ ಬೆಳೆಯಬಹುದು. ಜಗತ್ತನ್ನೆ ಮೆಟ್ಟಿ ನಿಲ್ಲುವ ಶಕ್ತಿ ನಿಮ್ಮಲ್ಲಿದ್ದು, ನಿಚ್ಚಳವಾದ ಸಾಧನೆ ಮಾಡಿದಾಗ ಜಗತ್ತೇ ನಿಂತು ನಿಮ್ಮನ್ನು ನೋಡುತ್ತದೆ. ನನ್ನ ಕೈಯಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ಉದಾಸೀನತೆ ಬಿಟ್ಟು

-ನಿಮ್ಮಲ್ಲಿ ಸಾಧಿಸುವ ತಾಕತ್ತಿದ್ದರೆ ನಿಮ್ಮ ಗುರಿ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ಏಳ್ಗೆಯ ಶಿಲ್ಪಿ ನೀವೇ ಎಂದುಕೊಂಡು ನಿಮ್ಮನ್ನು ನೀವು ಅರ್ಥಮಾಡಿಕೊಂಡು ಕೌಶಲ್ಯಗಳನ್ನು ಸರಿಯಾದ ರೀತಿ ಸದ್ಬಳಕೆ ಮಾಡಿಕೊಂಡರೆ ಭವಿಷ್ಯದ ಬದುಕು ಹಸನಾಗಲಿದೆ. ದೇಶದ ಅಭಿವೃದ್ಧಿಗೆ ಯುವ ಸಮೂಹದ ಅಗತ್ಯವಿದ್ದು, ಮಹಾನ್‌ ವ್ಯಕ್ತಿಗಳ, ಸಾಧಕರ ಆದರ್ಶ ಮೈಗೂಡಿಸಿಕೊಂಡು ಭವ್ಯ ಭಾರತ ನಿರ್ಮಾಣ ಮಾಡಿ ವಿಶ್ವ ಮಾನವರಾಗಬೇಕು ಎಂದು ಸಲಹೆ ನೀಡಿದರು.

ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಿ: ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಪ್ರೊ.ಶೇಖರ್‌ಗೌಡ ಮಾತನಾಡಿ, ಉದ್ಯೋಗ ಹುಡುಕಿಕೊಂಡು ಹೋಗುವ ಬದಲು ಉದ್ಯೋಗವೇ ನಿಮ್ಮನ್ನು ಹುಡುಕಿಕೊಂಡು ಬರಬೇಕು. ಆ ರೀತಿ ನಿಮ್ಮಲ್ಲಿರುವ ಕೌಶಲ್ಯ ಅಭಿವೃದ್ಧಿಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕು ನಡೆಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದು ಉತ್ತಮ ಜೀವನ ತಮ್ಮದಾಗಿಸಿಕೊಂಡು ರಾಷ್ಟ್ರಸೇವೆಯಲ್ಲಿ ತೊಡಗಬೇಕೆಂದು ಸಲಹೆ ನೀಡಿದರು.

Advertisement

ಗುರುಗಳ ಮಾರ್ಗದರ್ಶನದಂತೆ ನಡೆಯಿರಿ: ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಕೆ.ಎಂ.ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಯೋಜನೆ ಮಾಡಲಾಗಿದ್ದು, ಇದರ ಪ್ರಯೋಜನವನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಸಮಯ ಹಾಳುಮಾಡದೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ಗುರುಗಳ ಮಾರ್ಗದರ್ಶನದಲ್ಲಿ ಸಾಗಿ ಪೋಷಕರ ಕನಸನ್ನು ನನಸು ಮಾಡಬೇಕು ಎಂದರು.

 ಕಾರ್ಯಕ್ರಮದಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ಕೆ. ನಾಗರಾಜು, ನ್ಯಾಕ್‌ ಸಂಯೋಜಕಿ ಡಾ. ಕೆ.ಬಿ. ಸರಸ್ವತಿ, ಸಹಾಯಕ ಪ್ರಾಧ್ಯಾಪಕ ಕೆ.ಆರ್‌. ಅನುಪ್ರಸಾದ್‌ ಸೇರಿದಂತೆ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next