Advertisement

ಪಾರಂಪರಿಕತೆ ಉಳಿಸಿಕೊಂಡು ರೈಲು ನಿಲ್ದಾಣ ಅಭಿವೃದ್ಧಿ

10:08 AM Jun 14, 2019 | Team Udayavani |

ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ ಗೊಂಡಿರುವ ಮೈಸೂರು ರೈಲು ನಿಲ್ದಾಣದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪಾರಂಪರಿಕತೆಯನ್ನು ಉಳಿಸಿಕೊಂಡು ಆಧುನೀಕರಣಕ್ಕೆ ತೆರೆದುಕೊಳ್ಳುತ್ತಿದೆ.

Advertisement

ನಿರ್ಮಾಣವಾದ ರೈಲು ನಿಲ್ದಾಣದಲ್ಲಿ 1980ರವರೆಗೆ ಇದ್ದದ್ದು ಕೇವಲ ನಾಲ್ಕು ಪ್ಲಾಟ್ಫಾರಂಗಳು. ಆ ನಂತರದ ವರ್ಷಗಳಲ್ಲಿ ಹೆಚ್ಚವರಿ ಯಾಗಿ ಇನ್ನೂ ಎರಡು ಪ್ಲಾಟ್ಫಾರಂಗಳನ್ನು ನಿರ್ಮಿಸ ಲಾಗಿದೆ. ಸದ್ಯ 96 ರೈಲು ಮೈಸೂರಿಗೆ ಬಂದು ಹೋಗುತ್ತಿದ್ದು, ನಿತ್ಯ 60 ಸಾವಿರ ಜನರು ಮೈಸೂರು ರೈಲು ನಿಲ್ದಾಣವನ್ನು ಬಳಸುತ್ತಿದ್ದು, ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಈ ಪ್ರಮಾಣ ಶೇ.20ರಷ್ಟು ಹೆಚ್ಚಿದೆ. (72,000) ಜೊತೆಗೆ ರೈಲು ನಿಲ್ದಾಣದ ಆವರಣದಲ್ಲಿ ನಿಲುಗಡೆ ಮಾಡುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಸಂಖ್ಯೆ ಕೂಡ ಕಳೆದ ಹತ್ತು ವರ್ಷಗಳಲ್ಲಿ ದ್ವಿಗುಣವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ 64 ಹಳೆಯ ರೈಲು ನಿಲ್ದಾಣಗಳ ಕಾಯಕಲ್ಪಕ್ಕೆ ಭಾರತೀಯ ರೈಲ್ವೆ ಮುಂದಾಗಿದ್ದು, ಆ ಪೈಕಿ ಮೈಸೂರು ರೈಲು ನಿಲ್ದಾಣದ ಅಭಿವೃದ್ಧಿಗೆ 16.5 ಕೋಟಿ ರೂ. ಅನುದಾನ ನೀಡಿದೆ. ಈ ಅನುದಾನದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಮೈಸೂರು ರೈಲು ನಿಲ್ದಾಣದ ಪುನರ್‌ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ತಗಾದೆ: ಅಭಿವೃದ್ಧಿ ಹೆಸರಲ್ಲಿ ರೈಲು ನಿಲ್ದಾಣದ ಪಾರಂಪರಿಕತೆಗೆ ಧಕ್ಕೆ ತರಲಾಗುತ್ತಿದೆ ಎಂದು ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸಲಾದ ತಜ್ಞರ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಸಮಿತಿಯ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದರು.

ಅದಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸಿದ್ದ ಸಂಸದ ಪ್ರತಾಪ್‌ ಸಿಂಹ ಅವರು ಹೆಚ್ಚುತ್ತಿರುವ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಇದಕ್ಕೆ ಅಡ್ಡಿಪಡಿಸದೆ ಸಹಕರಿಸುವಂತೆ ತಾಕೀತು ಮಾಡಿದ್ದರು.

ಆದರೆ, ಪ್ರವಾಸೋದ್ಯಮ ಸಚಿವರ ಸೂಚನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಕಡೆಗೆ ಜಿಲ್ಲಾಧಿಕಾರಿ ನೇತೃತ್ವದ ಪಾರಂಪರಿಕ ತಜ್ಞರ ಸಮಿತಿ, ಕಟ್ಟಡದ ಪಾರಂಪರಿಕತೆ ಉಳಿಸಿಕೊಂಡು ಕಾಮಗಾರಿ ಮುಂದುವರಿಸಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಭರದಿಂದ ಕಾಮಗಾರಿ ನಡೆದಿದ್ದು, ಮುಂಗಾರು ಆರಂಭದೊಳಗೆ ಕಾಮಗಾರಿ ಮುಗಿಸಲು ರೈಲ್ವೆ ಗಡುವು ಹಾಕಿಕೊಂಡಿದೆ.

● ಗಿರೀಶ್‌ ಹುಣಸೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next