Advertisement

ತಂತ್ರಜ್ಞಾನ ಬಳಸಿ ಜನಪದ ಕಲೆ ಬೆಳೆಸಿ

04:05 PM Jan 29, 2018 | |

ರಾಯಚೂರು: ಜನಪದ ನಾಶವಾಗುತ್ತಿದೆ ಎಂಬುದು ಸುಳ್ಳು. ಸಂದರ್ಭಕ್ಕೆ ತಕ್ಕಂತೆ ಅದು ಬದಲಾಗಬಹುದೇ ವಿನಃ ಅವನತಿಯಾಗುವುದಿಲ್ಲ ಎಂಬುದು ಸತ್ಯ. ತಂತ್ರಜ್ಞಾನ ಬಳಸಿಕೊಂಡು ಜನಪದ ಕಲೆಯನ್ನು ಜನರ ಬಾಗಿಲಿಗೆ ಮುಟ್ಟುವಂತೆ ಮಾಡಬೇಕಿದೆ ಎಂದು ಹಿರಿಯ ಜನಪದ ಕಲಾವಿದ ಶಂಭು ಬಳಿಗಾರ ಹೇಳಿದರು.

Advertisement

ಕನ್ನಡ ಜಾನಪದ ಪರಿಷತ್‌ನಿಂದ ನಗರದ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರವಿವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಹಾಗೂ ಜಾನಪದ ಪ್ರಪಂಚ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಒಂದರ್ಥದಲ್ಲಿ ಜನಪದ ಕಲೆಯನ್ನು ಮೊದಲಿಗಿಂತ ಜನರಿಗೆ ತಲುಪಿಸುವುದು ಈಗ ಸುಲಭವಾಗಿದೆ. ಯಾವ ತಂತ್ರಜ್ಞಾನದಿಂದ ಜನಪದ ಕಲೆಗೆ ಹಿನ್ನಡೆಯಾಗಿದೆಯೋ ಅದೇ ತಂತ್ರಜ್ಞಾನ ಬಳಸುವ ಮೂಲಕ ಈ ಕಲೆಯನ್ನು ಬೆಳೆಸುವ ಅನಿವಾರ್ಯತೆ ಇದೆ ಎಂದರು.

ಸಂಸದ ಬಿ.ವಿ. ನಾಯಕ ಮಾತನಾಡಿ, ಗತ ವೈಭವವನ್ನು ಹಾಡುಗಳಲ್ಲಿ ಕಟ್ಟಿಕೊಡುತ್ತಿದ್ದ ಜಾನಪದ ಕಲೆ ಇಂದು ನಶಿಸುತ್ತಿದೆ. ಅದನ್ನು ಜೀವಂತವಾಗಿ ಇಡಬೇಕಾದರೆ ಇಂಥ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಜಾನಪದ ಸಾಹಿತ್ಯ ಪ್ರಾಚೀನ ಕಲೆಯಾಗಿದೆ. ಮೊದಲೆಲ್ಲ ರಾಜಮನೆತನಗಳ ವೈಭವಗಳನ್ನು ಲಾವಣಿ, ಗೀಗಿ ಪದಗಳಲ್ಲಿ ಕಟ್ಟಿ ಹಾಡಲಾಗುತ್ತಿತ್ತು. ಅವು ಬಾಯಿಂದ ಬಾಯಿಗೆ ಹರಡುವ ಮೂಲಕ ಪ್ರಸಿದ್ಧಿ ಪಡೆಯುತ್ತಿದ್ದವು. ಈ ಪದಗಳಿಗೆ ಭಾಷೆ ಇರಲಿಲ್ಲ. ಹೀಗಾಗಿ ಅವುಗಳನ್ನು ಸಂಗ್ರಹಿಸಿಡಲು ಆಗಿಲ್ಲ. ಆದ್ದರಿಂದ ಅವುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದರು.

ತಂತ್ರಜ್ಞಾನ ಬೆಳೆದಂತೆಲ್ಲ ಕಲೆಗಳು ಮರೆಯಾಗುತ್ತಿವೆ. ಯುವಕರು ಹೆಚ್ಚಾಗಿ ವಿದ್ಯುನ್ಮಾನ ಮಾಧ್ಯಮಗಳಿಗೆ
ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಜನಪದ ಕಲೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇಂಥ ಸಮ್ಮೇಳನಗಳು
ಹೆಚ್ಚಾಗಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎನ್‌.ಎಸ್‌.ಬೋಸರಾಜ್‌ ಮಾತನಾಡಿ, ಹಿಂದುಳಿದ ಜಿಲ್ಲೆಯಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.
 
ಪರಿಷತ್‌ ರಾಜ್ಯ ಕಾರ್ಯಾಧ್ಯಕ್ಷ ಎಸ್‌.ಬಾಲಾಜಿ ಮಾತನಾಡಿ, ಇಂದು ಕಲಾವಿದರ ಬುದಕು ಸಾಕಷ್ಟು ಕಷ್ಟದಲ್ಲಿದೆ. ಸರ್ಕಾರ ಕಲಾವಿದರಿಗೆ 1500 ರೂ. ಮಾಸಾಶನ ನೀಡುತ್ತಿದೆ. ಆದರೆ, ಅಷ್ಟು ಹಣದಲ್ಲಿ ಜೀವನ ಸಾಗಿಸುವುದು ಕಷ್ಟಕರ. ಹೀಗಾಗಿ ಕನಿಷ್ಠ ಐದು ಸಾವಿರ ರೂ. ಮಾಸಾಶನ ನೀಡಬೇಕು ಎಂದು ಮನವಿ ಮಾಡಿದರು.

Advertisement

ಸಮ್ಮೇಳನದ ಅಧ್ಯಕ್ಷ, ಹಿರಿಯ ಕಲಾವಿದ ಬಸಪ್ಪ ಹೆಗ್ಗಡದಿನ್ನಿ ದಂಪತಿಯನ್ನು ಸನ್ಮಾನಿಸಲಾಯಿತು. ಈ ವೇಳೆ ಬಸಪ್ಪ ಹೆಗ್ಗಡದಿನ್ನಿ ಒಂಭತ್ತು ವಾದ್ಯಗಳನ್ನು ನುಡಿಸಿ, ಗಾಯನ ಮಾಡಿ ನೆರೆದವರನ್ನು ರಂಜಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅನೇಕ ಜನಪದ ಕಲಾವಿದರಿಗೆ ಜಾನಪದ ಪ್ರಪಂಚ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಿಷತ್‌ ರಾಜ್ಯಾಧ್ಯಕ್ಷ ಟಿ.ಕೆ. ಗೌಡರ, ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಜಿಪಂ ಅಧ್ಯಕ್ಷ ಆದಿಮನಿ ವೀರಲಕ್ಷ್ಮೀ, ಆರ್‌ಡಿಎ ಅಧ್ಯಕ್ಷ ಅಬ್ದುಲ್‌ ಕರೀಂ, ನಗರಸಭೆ ಸ್ಥಾಯಿ ಸಮಿತಿ ನಿರ್ದೇಶಕ ಗೋಪಾಲಯ್ಯ
ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. 

ಚಿತ್ರಕಲೆ ಪ್ರದರ್ಶನ ರಂಗಮಂದಿರದಲ್ಲಿ ಹಮ್ಮಿಕೊಂಡ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಆಯೋಜಿಸಿದ್ದ ಚಿತ್ರಕಲೆ ಪ್ರದರ್ಶನ ಗಮನ ಸೆಳೆಯಿತು. ಬಹುತೇಕ ಹಳ್ಳಿ ಸೊಗಡಿನ ಚಿತ್ರಣಗಳನ್ನು ಬಿಡಿಸಿದ್ದ ಕಲಾವಿದರು ಕಾರ್ಯಕ್ರಮದ ಮೆರಗು ಹೆಚ್ಚಿಸುವಂತೆ ಮಾಡಿದ್ದರು. ಎಂಎಲ್‌ಸಿ ಎನ್‌.ಎಸ್‌.ಬೋಸರಾಜ್‌ ಚಿತ್ರಕಲೆ ಪ್ರದರ್ಶನ ಉದ್ಘಾಟಿಸಿದರು. ಇನ್ನು ವೇದಿಕೆ ಮೇಲೆಯೂ ಜಾನಪದ ಶೈಲಿ ಅಲಂಕಾರ ಕಣ್ಣು ಕುಕ್ಕುವಂತಿತ್ತು. ಬೆಳಗುವ ಜ್ಯೋತಿಯಿಂದ ಹಿಡಿದು ಎಲ್ಲವನ್ನೂ ಅಪ್ಪಟ ದೇಶೀ ಶೈಲಿಯಲ್ಲಿ ನಿರ್ಮಿಸಲಾಗಿತ್ತು.

ಸಮ್ಮೇಳನ ಎರಡು ದಿನ ನಡೆಯಬೇಕಿತ್ತು ಕಾರ್ಯಕ್ರಮಕ್ಕೆ ಸಿಕ್ಕ ಜನಬೆಂಬಲ ಕಂಡು ಅತಿಥಿಗಳು ಸಂತಸ ವ್ಯಕ್ತಪಡಿಸಿದ್ದಲ್ಲದೇ, ಇದನ್ನು ಒಂದು ದಿನಕ್ಕೆ ಸೀಮಿತೊಳಿಸದೆ ಕನಿಷ್ಠ ಎರಡು ದಿನವಾದರೂ ನಡೆಸಬೇಕಿತ್ತು ಎಂದು ಅಭಿಪ್ರಾಯ ಪಟ್ಟರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾವಿದರು ಆಗಮಿಸಿದ್ದರು. ಎಲ್ಲರಿಂದ ರಂಗಮಂದಿರ
ಭರ್ತಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next