ಹುಣಸೂರು: ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವ ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಸಮೃದ್ಧಿ ಯೋಜನೆಯಡಿ ತಲಾ 10 ಸಾವಿರ ರೂ ಆರ್ಥಿಕ ನೆರವು ನೀಡುತ್ತಿದ್ದು ಯೋಜನೆ ಸದುಯೋಗ ಪಡೆದು ಆರ್ಥಿಕಾಭಿವೃದ್ಧಿ ಹೊಂದಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ಸೂಚಿಸಿದರು.
ನಗರದ ಸಂತ ಮೈದಾನದಲ್ಲಿ ನೂತನವಾಗಿ ಸಂಘಟನೆಗೊಂಡ ಡಿ.ದೇವರಾಜ ಅರಸ್ ತರಕಾರಿ ವ್ಯಾಪಾರಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಮಾರುಕಟ್ಟೆ ಹಳೆಯದಾಗಿದ್ದು, ಮಾರುಕಟ್ಟೆ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿಯಲ್ಲಿ 80 ಲಕ್ಷರೂ. ಹಣ ಮಂಜೂರಾಗಿದ್ದು, ಬಾಕಿ ಉಳಿದಿರುವ ಮಾರುಕಟ್ಟೆ ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸಿ, ಸುಸಜ್ಜಿತ ಮಳಿಗೆ ಹಾಗೂ ಗೋಡೌನ್ ನಿರ್ಮಿಸಿಕೊಡಲಾಗುತ್ತದೆ, ಅಲ್ಲದೆ ಮಾರುಕಟ್ಟೆಯೊಳಗಿನ ರಸ್ತೆಗೆ ಕಾಂಕ್ರೀಟ್ ವ್ಯವಸ್ಥೆ ಮಾಡಲಾಗುವುದು ಎಂದರು.
ಬೀದಿ ಬದಿ ವ್ಯಾಪಾರಸ್ಥರಿಗೆ ನೆರವು: ಸರಕಾರದ ಮಹಿಳಾ ಅಭಿವೃದ್ಧಿ ನಿಗಮದವತಿಯಿಂದ ಬೀದಿ ಬದಿ ತರಕಾರಿ ವ್ಯಾಪಾರ ಸಡೆಸುತ್ತಿರುವ ಮಹಿಳೆಯರ ಆರ್ಥಿಕ ನೆರವಿಗಾಗಿ 10 ಸಾವಿರ ನೆರವು ನೀಡುವ ಯೋಜನೆಯಡಿ 100 ಮಹಿಳೆಯರ ಪೈಕಿ ಈಗಾಗಲೇ 27 ಮಂದಿಗೆ ತಲಾ 10 ಸಾವಿರ ರೂ. ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ, ಇನ್ನುಳಿದವರ ಬ್ಯಾಂಕ್ ಖಾತೆಗೆ ಶೀಘ್ರ ಹಣ ಜಮೆ ಮಾಡಲಾಗುವುದು ಎಂದರು.
ತಮ್ಮ ತಾಯಿ ಹೆಸರಿನಲ್ಲಿ ತರಕಾರಿ ವ್ಯಾಪಾರ ಮಾಡುವ ಬಡವರ ಅನುಕೂಲಕ್ಕೆ ಈ ಹಿಂದೆ ಹಣಕಾಸಿನ ನೆರವು ನೀಡಿದ್ದು, ಇದೀಗ 3 ಲಕ್ಷರೂ ಬಂಡವಾಳ ಮಾಡಿ ಕೊಂಡಿರುವುದು ಸಂತಸ ತಂದಿದೆ. ಸಂಘವನ್ನು ಸಂಘಟಿಸಿ ವ್ಯಾಪಾರ ಅಭಿವದ್ದಿಗೊಳಿಸುವ ಜೊತೆಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ ಎಂದರು.
ಅರ್ಜಿಸಲ್ಲಿಸಿ-ನೆರವು ಪಡೆಯಿರಿ: ಸಿಡಿಪಿಓ ನವೀನ್‌ಕುಮಾರ್ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ರಸ್ತೆ ಬದಿ ವ್ಯಾಪಾರ ಮಾಡುವ ಮಹಿಳೆಯರಿಗೆ ನೆರವು ನೀಡುವ ಕಾರ್ಯಕ್ರಮವಿದ್ದು, ಅರ್ಹ ಮಹಿಳೆಯರು ಸೂಕ್ತ ದಾಖಲಾತಿಯೊಂದಿಗೆ ಅರ್ಜಿಸಲ್ಲಿಸಬೇಕೆಂದು ಹಾಗೂ ಉದ್ಯೋಗಿನಿ ಯೋಜನೆಯಡಿ ಸ್ವಯಂ ಉದ್ಯೋಗ ನಡೆಸುವ ಮಹಿಳೆಯರಿಗೆ 10 ಸಾವಿರ ಸಬ್ಸಿಡಿಯೊಂದಿಗೆ ಒಂದು ಲಕ್ಷ ರೂ.ವರೆಗೆ ಸಾಲ ಸೌಲಭ್ಯ ದೊರೆಯಲಿದೆ, ಮತ್ತು ಸಮೃದ್ದಿ ಯೋಜನೆಯಡಿ ತಾಲೂಕಿನ ಎರಡು ಮಹಿಳಾ ಸಂಘಗಳಿಗೆ ಆರ್ಥಿಕ ಚಟುವಟಿಕೆ ನಡೆಸಲು ಬಡ್ಡಿರಹಿತ 4 ಲಕ್ಷರೂ ಸಾಲವನ್ನು ನೀಡಲಾಗುತ್ತಿದ್ದು, ಇಲ್ಲಿ ಸಂಘ ರಚಿಸಿಕೊಂಡಿರುವವರು ಅರ್ಜಿ ಸಲ್ಲಿಸಬೇಕೆಂದು ಸೂಚಿಸಿದರು.
ಹೆಚ್ಚುವರಿ ಮಳಿಗೆಗ ಮನವಿ: ಸಂಘದ ಅಧ್ಯಕ್ಷ ಷಣ್ಮುಖ ಮಾತನಾಡಿ, ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಮಳಿಗೆಗಳು ಸಾಲುತ್ತಿಲ್ಲ, ಹೆಚ್ಚುವರಿಯಾಗಿ 10-15 ಮಳಿಗೆಗಳನ್ನು ನಿರ್ಮಿಸಿಕೊಡಬೇಕು, ಹಾಲಿ ಕಟ್ಟಡವನ್ನು ಪೂರ್ಣಗೊಳಿಸಬೇಕು, ಸಂಘದ ಕಾರ್ಯ ಚಟುವಟಿಕೆಗಳಿಗೆ ಒಂದು ಕೊಠಡಿ ನೀಡಬೇಕು, ಮಳಿಗೆ ಸೇರಿದಂತೆ ಸಂತೆ ಆವರಣಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ರಾತ್ರಿ ವೇಳೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿದರು, ನಗರಸಭಾ ಸದಸ್ಯರಾದ ಸೌರಭಸಿದ್ದರಾಜು, ಅಯೂಬ್ ಖಾನ್, ಎಚ್.ವೆ.ಮಹದೇವ್, ಭಾಗ್ಯಮ್ಮ, ಬಾಬು, ದೇವರಾಜ್, ಪೌರಾಯುಕ್ತ ಶಿವಪ್ಪನಾಯ್ಕ, ಸಂಘದ ಕಾರ್ಯದರ್ಶಿ ಎಚ್.ಎಸ್.ಶ್ರೀನಾಥ್, ಉಪಾಧ್ಯಕ್ಷ ಮುನ್ನಾ, ದ್ವಾರಕೀಶ್, ರುದ್ರ, ಮುಷಾಹಿದ್, ಆಶ್ರಯ ಸಮಿತಿ ಸದಸ್ಯ ಬಷೀರ್ ಸೇರಿದಂತೆ ತರಕಾರಿ ವ್ಯಾಪಾರಸ್ಥರು ಹಾಜರಿದ್ದರು.