Advertisement
ರಾಜ್ಯದಲ್ಲಿ ಅನಿಷ್ಠ ಹಾಗೂ ಅಮಾನವೀಯ ಆಚರಣೆಗಳನ್ನು ನಿಷೇಧಿಸುವ ಸಂಬಂಧ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ತರಲಾಗಿದ್ದ “ಮೌಡ್ಯ ನಿಷೇಧ ಕಾಯ್ದೆ-2017’ನ್ನು ಈಗಿನ ಬಿಜೆಪಿ ಸರ್ಕಾರ ಇದೇ ತಿಂಗಳಲ್ಲಿ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಈ ಮಾತು ಮಹತ್ವ ಪಡೆದುಕೊಂಡಿದೆ. ದೇಶದ 71ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ರಾಜ್ಯಪಾಲರು ಹೇಳಿದ್ದಿಷ್ಟು:
Related Articles
Advertisement
* “ಉತ್ತಮ ಆಡಳಿತ ನಿರ್ವಹಣಾ ಸೂಚ್ಯಂಕ’ದಲ್ಲಿ ಕರ್ನಾಟಕ 3ನೇ ಸ್ಥಾನ ಪಡೆದಿದೆ. ಭಾರತದ ರಾಜ್ಯ ಅರಣ್ಯ ವರದಿ-2019ರ ಪ್ರಕಾರ ಅರಣ್ಯ ಪ್ರದೇಶ ಹೆಚ್ಚಿಸಿರುವ ರಾಜ್ಯಗಳ ಪೈಕಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ನಾವಿನ್ಯ ಪ್ರಾಧಿಕಾರ ಸ್ಥಾಪಿಸಲಾಗಿದೆ. ಪಾವಗಡದಲ್ಲಿ 2050 ಮೆ. ವ್ಯಾ. ಸಾಮರ್ಥಯದ “ಅಲ್ಟ್ರಾ ಮೆಗಾ ಸೋಲಾರ್ ಪಾರ್ಕ್’ ಕಾರ್ಯಾರಂಭ ಮಾಡಿದೆ. “ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್’ ಮೂಲಕ ವಿದ್ಯಾರ್ಥಿ ವೇತನ ಒದಗಿಸಲಾಗುವುದು. 2019-20ನೇ ಸಾಲಿಗೆ ಎಸ್‌ಸಿಪಿ, ಟಿಎಸ್ಪಿ ಯೋಜನೆಯಡಿ ಎಸ್ಸಿ, ಎಸ್ಟಿ ಪಂಗಡಗಳ ಸಮಗ್ರ ಅಭಿವೃದ್ಧಿಗೆ 30,445 ಕೋಟಿ ರೂ.ಗಳ ಉಪ ಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದಡಿ ಮೊದಲ ಹಂತದ 3,692 ಕಿ.ಮೀ ರಸ್ತೆ ಕಾಮಗಾರಿ ಆರಂಭವಾಗಿದೆ.
* ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಸಮನ್ವಯಗೊಳಿಸಿ ಆಯ್ದ 100 ಬರ ಪೀಡಿತ ಹಾಗೂ ಕಡಿಮೆ ಅಂತರ್ಜಲ ಮಟ್ಟ ಹೊಂದಿರುವ ತಾಲೂಕುಗಳಲ್ಲಿ “ಬರವನ್ನು ತಡೆಯಲು ಜಲಾನಯನ ಅಭಿವೃದ್ಧಿ’ ಹೆಸರಲ್ಲಿ ಹೊಸ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ-3ರ ಕಾಮಗಾರಿ ತ್ವರಿತಗೊಳಿಸಲಾಗಿದೆ. 5,500 ಕೋಟಿ ರೂ. ವೆಚ್ಚದಲ್ಲಿ 12 ಕೆರೆ ತುಂಬಿಸುವ ಯೋಜನೆ ಸೇರಿ ಇತರ 20 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
* ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದೇ ರೀತಿ ಚಿಕ್ಕಮಗಳೂರು, ಯಾದಗಿರಿ ಹಾಗೂ ಹಾವೇರಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಇದರಿಂದ ಹೆಚ್ಚುವರಿಯಾಗಿ ರಾಜ್ಯಕ್ಕೆ 600 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.
ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ: 2019ರಲ್ಲಿ 59,574 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲಕ ರಾಜ್ಯವು ದೇಶದಲ್ಲಿಯೇ ಎರಡನೇ ಬಂಡವಾಳ ಹೂಡಿಕೆ ತಾಣವಾಗಿ ಗುರುತಿಸಿಕೊಂಡಿದೆ. ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಗಾಗಿ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವುದಕ್ಕಾಗಿ 2020ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ “ಬಂಡವಾಳ ಹೂಡಿಕೆ ಸಮಾವೇಶ’ ಆಯೋಜಿಸಲಾಗುತ್ತಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿದರು.
ಕಲ್ಯಾಣ ಕರ್ನಾಟಕ ಮಂಡಳಿಗೆ ಹೆಚ್ಚುವರಿ ಅನುದಾನ: “ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯನ್ನು ಈಗ “ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಎಂದು ಮರು ನಾಮಕರಣ ಮಾಡಲಾಗಿದೆ. ಈ ಮಂಡಳಿಗೆ 2019-20ರ ಅವಧಿಯಲ್ಲಿ 1,500 ಕೋಟಿ ರೂ. ಅನುದಾನ ನೀಡಲಾಗಿದೆ. ಹೆಚ್ಚುವರಿಯಾಗಿ ಸಾವಿರ ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಕಲ್ಯಾಣ ಪ್ರದೇಶದ ಮೊದಲ ವಿಮಾನ ನಿಲ್ದಾಣವಾದ ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆಗೊಳಿಸಲಾಗಿದೆ. ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಇದ್ದ ಬಹು ಕಾಲದ ಬೇಡಿಕೆ ಪೂರೈಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.
ಮಾರ್ಚ್‌ಗೆ ರೈತರ ಸಾಲ ಮನ್ನಾ ಯೋಜನೆ ಮುಕ್ತಾಯ: 2019-20ನೇ ಸಾಲಿನಲ್ಲಿ ರೈತರಿಗಾಗಿ ಸರ್ಕಾರವು ಬೆಳೆ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದ್ದು, ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಕುಟುಂಬಕ್ಕೆ 2 ಲಕ್ಷ ರೂ. ಸಾಲ ಬಾಕಿ ಮನ್ನಾ ಮಾಡಲಾಗುತ್ತಿದೆ. ಇದು 2020ರ ಮಾರ್ಚ್ ವೇಳೆಗೆ ಮುಕ್ತಾಯಗೊಳ್ಳುತ್ತದೆ. ಈ ಯೋಜನೆಯಿಂದ ಸುಮಾರು 21 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಹಣಕಾಸಿನ ನೆರವು ನೀಡುತ್ತಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ವಿವರಿಸಿದ್ದಾರೆ.
ಈ ದಿನ ದೇಶದ ಅಭಿವೃದ್ಧಿಗಾಗಿ ಕಠಿಣ ಪರಿಶ್ರಮ ಪಡುತ್ತೇವೆಂಬ ನಮ್ಮ ಬದ್ಧತೆಯನ್ನು ಪುನರ್ ದೃಢೀಕರಿಸುವ ಸುಸಂದರ್ಭ ವಾಗಿದೆ. ವಿಶೇಷವಾಗಿ ಮೂಲಭೂತ ಕರ್ತವ್ಯಗಳ ಆಂದೋಲನವನ್ನು ದೇಶಾದ್ಯಂತ ಆಯೋಜಿಸುತ್ತಿರುವ ಈ ಸಂದರ್ಭದಲ್ಲಿ ನಾಗರಿಕರಾಗಿ ನಮ್ಮ ಕರ್ತವ್ಯಗಳ ಬಗ್ಗೆ ಗಮನಹರಿಸುವುದಕ್ಕೆ ಇದು ಸೂಕ್ತ ಕಾಲವೂ ಆಗಿದೆ.-ವಜುಭಾಯಿ ವಾಲಾ, ರಾಜ್ಯಪಾಲ