ಸುರಪುರ: ಮೂಢನಂಬಿಕೆಗಳಿಂದ ಹೊರ ಬರಬೇಕಾದರೆ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ಇದರಿಂದ ದೃಢತೆ ಮತ್ತು ಧೈರ್ಯ ಹೆಚ್ಚಾಗುವುದರೊಂದಿಗೆ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಎಂದು ಶಿಕ್ಷಣ ಸಂಯೋಜಕ ಅನಂತಮೂರ್ತಿ ಡಬೀರ ಹೇಳಿದರು.
ನಗರದ ದರಬಾರ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆ ಹಾಗೂ ಅಗಸ್ತ್ಯ ಫೌಂಡೇಶನ್ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರಿಂದ ಪ್ರತಿಯೊಂದನ್ನು ವಿಮರ್ಶೆ ಮೂಲಕ ಒರೆಗೆ ಹಚ್ಚಲು ಸಾಧ್ಯ. ಇದರಿಂದ ಮನಸ್ಸು ವಿಕಸಿತಗೊಂಡು ಸಮಾನತೆ ಭಾವ ಮೂಡುತ್ತದೆ. ಸರಳ ಜೀವನಕ್ಕೆ ನೆರವಾಗುತ್ತದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೋಮರೆಡ್ಡಿ ಮಂಗ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಇರದಿದ್ದರೆ ಜಗತ್ತಿನ ವಿದ್ಯಮಾನ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ವಿಜ್ಞಾನವಿಲ್ಲದೇ ಜೀವನವಿಲ್ಲ ಎನ್ನುವಷ್ಟರ ಮಟ್ಟಿಗೆ ವಿಜ್ಞಾನ ಬೆಳೆದು ನಿಂತಿದೆ. ಇದಕ್ಕೆಲ್ಲ ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೋಘ. ಅವರನ್ನು ಸ್ಮರಿಸುವುದು ಅತ್ಯಂತ ಸ್ತುತ್ಯಾರ್ಹ ಎಂದರು.
ಬಿಆರ್‌ಪಿ ಖಾದರ ಪಟೇಲ, ಸಿಆರ್‌ಸಿ ತಿಪ್ಪಣ್ಣ ಸಿನ್ನೂರ, ಶಾಮತಪ್ಪ ಅಗ್ನಿ, ಮಹಿಬೂಬ ಸೂಭಾನಿ, ಎಸ್‌ಎಸ್. ಕರಿಕಬ್ಬಿ, ಅಗಸ್ತ್ಯ ಫೌಂಡೇಶನ್ ಮಲ್ಲಿಕಾರ್ಜುನ, ಎಪಿಎಫ್ ವಿನೋದಕುಮಾರ ಅನ್ವರ ಜಮೇದಾರ, ಅಬ್ದುಲ್ ಪಟೇಲ, ತುಕಾರಾಮ ಜೋಗಪ್ಪ, ಶರಣಯ್ಯ ಸ್ವಾಮಿ, ಚನ್ನಪ್ಪ ಹೂಗಾರ, ಮಹಾಲಕ್ಷ್ಮೀ, ಸುನಂದಾ ಇತರರಿದ್ದರು.
ಮಹೇಶ ಹುಜರತ್ತಿ ನಿರೂಪಿಸಿ, ವಂದಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ವಿಜ್ಞಾನದ 50ಕ್ಕೂ ಹೆಚ್ಚು ಮಾದರಿಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ವೀಕ್ಷಿಸಿದರು.