Advertisement

ಮಕ್ಕಳಲ್ಲಿ ಉತ್ತಮ ವಿಚಾರ ಬೆಳೆಸಿ

11:31 AM Feb 25, 2018 | Team Udayavani |

ಕಲಬುರಗಿ: ಮಕ್ಕಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಅವರಲ್ಲಿ ಉತ್ತಮ ವಿಚಾರ ಬಿತ್ತುವ ಮಹತ್ತರ ಜವಾಬ್ದಾರಿ ಪೋಷಕರದ್ದು ಎಂದು ಜಿಲ್ಲಾ ಬಾಲ ನ್ಯಾಯಿಕ ಮಂಡಳಿ ಅಧ್ಯಕ್ಷರು ಹಾಗೂ ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಸರಸ್ವತಿದೇವಿ ಹೇಳಿದರು. 

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಬಾಲ ನ್ಯಾಯಿಕ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ವೀಕ್ಷಣಾಲಯದಲ್ಲಿ ಹಮ್ಮಿಕೊಂಡಿದ್ದ ಬಾಲ ನ್ಯಾಯಿಕ ಕಾಯ್ದೆ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಕ್ಕಳು ತಮಗರಿವಿಲ್ಲದಂತೆ ಅಪರಾಧ ಪ್ರವೃತ್ತಿಯಲ್ಲಿ ತೊಡಗಿ ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಹೀಗೆ ಭಾಗಿಯಾದವರನ್ನು ಸಾಂಪ್ರದಾಯಿಕ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿದಾಗ ಅವರ ಭವಿಷ್ಯ ಹಾಳಾಗುತ್ತದೆ ಎಂದು ತಿಳಿದು ಬಾಲ ನ್ಯಾಯಿಕ ಮಂಡಳಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಇಲ್ಲಿ ಮಕ್ಕಳಿಗೆ ಪ್ರತ್ಯೇಕ ವಿಚಾರಣೆ ಕೈಗೊಳ್ಳುವುದಲ್ಲದೇ ಅವರ ಸಂರಕ್ಷಣೆ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. 

ಬಾಲ ನ್ಯಾಯಿಕ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ ಮಾತಾಡಿ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ಎಂಬ ನಾಣ್ಣುಡಿಯಂತೆ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಳ್ಳಲಿರುವ ವ್ಯವಸ್ಥೆಯೇ ಬಾಲ ನ್ಯಾಯಿಕ ಮಂಡಳಿ. ಉತ್ತಮರೊಂದಿಗೆ ಸ್ನೇಹ ಮಾಡುವ ಮೂಲಕ ಸತ್ಪ್ರಜೆಗಳಾಗುವಂತೆ ಮಕ್ಕಳಿಗೆ ಕರೆ ನೀಡಿದರು.

ಬಾಲ ನ್ಯಾಯಿಕ ಕಾಯ್ದೆಯಂತೆ ಯಾವುದೇ ಪ್ರಕರಣದಲ್ಲಿ ಅಪ್ರಾಪ್ತ ಮಕ್ಕಳು ಭಾಗಿಯಾಗಿದ್ದರೆ ಪೊಲೀಸರು ಬಂಧನದ
ಸಮಯದಲ್ಲಿ ಪೋಷಕರಿಗೆ ಹಾಗೂ ಮಕ್ಕಳಿಗೆ ಮಾಹಿತಿ ನೀಡಬೇಕು ಅಲ್ಲದೇ 24 ಗಂಟೆಯೊಳಗೆ ಬಾಲ ನ್ಯಾಯಿಕ ಮಂಡಳಿ ಎದುರು ಹಾಜರು ಪಡಿಸುವುದು ಕಡ್ಡಾಯವಾಗಿದೆ. ಕೆಲ ಪ್ರಕರಣಗಳಲ್ಲಿ ಇದು ಉಲ್ಲಂಘನೆಯಾಗುತ್ತಿದೆ. ಮಕ್ಕಳು ಮಂಡಳಿಗೆ ದೂರು ನೀಡಿದರೆ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಆರ್‌.ಮಾಣಿಕ್ಯ ಮಾತನಾಡಿ, ಅಪರಾಧ ಪ್ರಕರಣದಿಂದ ವೀಕ್ಷಣಾಲಯಕ್ಕೆ ಬರುವ ಮಕ್ಕಳ ಪೋಷಕರು ತಮ್ಮ ಪರವಾಗಿ ವಾದ ಮಂಡಿಸಲು ಪ್ರಾಧಿಕಾರಕ್ಕೆ ಕೋರಿದರೆ ವಕೀಲರ ನೇಮಕ ಮೂಲಕ ನೆರವಿಗೆ ಬರಲಿದೆ ಎಂದು ಹೇಳಿದರು.

ಬಾಲ ನ್ಯಾಯಿಕ ಮಂಡಳಿ ಸದಸ್ಯ ಲಿಯಾಖತ್‌ ಫರೀದ್‌, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಂಜುಳಾದೇವಿ ರೆಡ್ಡಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟು ಮಕ್ಕಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next