ಬೆಂಗಳೂರು: ಲೋಕಸಭಾ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದ್ದು, ಕ್ಷೇತ್ರವಾರು ಸಮಾಲೋಚನೆಗೆ ಚಾಲನೆ ನೀಡಿದೆ. ಈ ಮಧ್ಯೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಣಕ್ಕಿಳಿಯಬೇಕೆಂಬ ಬೇಡಿಕೆ ತೀವ್ರಗೊಂಡಿದೆ.
ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಎಲ್ಲರೂ, ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಿಂದ ದೇವೇಗೌಡರು ಕಣಕ್ಕಿಳಿಯಬೇಕು. ಬೆಂಗಳೂರು ಉತ್ತರ ಕ್ಷೇತ್ರದಲ್ಲಾದರೆ ಗೆಲ್ಲುವು ಶತಸಿದ್ಧ. ಹೀಗಾಗಿ ಉತ್ತರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಾತನಾಡಿ, ನಾವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗುತ್ತಿದ್ದೇವೆ. ಮೈತ್ರಿ ಧರ್ಮ ಪಾಲಿಸುವುದು ಮುಖ್ಯ. ಹೀಗಾಗಿ ಮೊದಲೇ ಈ ಬಗ್ಗೆ ನಾವೇ ತೀರ್ಮಾನ ಕೈಗೊಳ್ಳುವುದು ಬೇಡ. ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಆದರೂ, ಮುಂದು ವರಿದ ನಾಯಕರು ಬೆಂಗಳೂರು ಮೊದಲು ಜೆಡಿಎಸ್ ಭದ್ರಕೋಟೆಯಾಗಿತ್ತು. ಆನಂತರ ನಾಯಕರ ವಲಸೆ ಯಿಂದಾಗಿ ಸ್ವಲ್ಪ ಶಕ್ತಿ ಕುಂದಿದೆ. ಹೀಗಾಗಿ ನೀವು ಸ್ಪರ್ಧಿಸಿದರೆೆ, ಪಕ್ಷಕ್ಕೂ ಬಲ ಬರುತ್ತದೆ ಎಂದು ಪ್ರತಿಪಾದಿಸಿದರು.
ಕಾರ್ಯಾಧ್ಯಕ್ಷರ ನೇಮಕ: ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟಿಸುವ ಬಗ್ಗೆ ನಾಯಕರಿಗೆ ದೇವೇಗೌಡರು ಕಿವಿಮಾತು ಹೇಳಿದರು. ಪ್ರತಿ ಕ್ಷೇತ್ರಕ್ಕೆ ಒಬ್ಬೊಬ್ಬ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗು ವುದು. ಎಲ್ಲ ಉಸ್ತುವಾರಿಯನ್ನು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಕಾರ್ಯಕಾರಿಣಿ: ಜ.29ಕ್ಕೆ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪಕ್ಷದ ಕಚೇರಿಯಲ್ಲಿ ನಡೆಯಲಿದ್ದು, ಆ ದಿನ ಲೋಕಸಭಾ ಚುನಾವಣೆಯ ಮೈತ್ರಿ ಸಂಬಂಧ ರಾಜಕೀಯ ನಿರ್ಣಯ ಕೈಗೊಳ್ಳಲಾಗುವುದು. ಮರು ದಿನ ಬುಧವಾರ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಯಲಿದ್ದು, ಲೋಕಸಭಾ ಚುನಾವಣೆ ಸಂಬಂಧ ಉಸ್ತುವಾರಿಗಳ ನೇಮಕ ಹಾಗೂ ಸಂಘಟನೆ ಜವಾಬ್ದಾರಿ ವಹಿಸಲಾಗುವುದು. ರಾಷ್ಟ್ರೀಯ ಕಾರ್ಯಕಾರಿಣಿ ಯಲ್ಲಿ ರೈತರ ಸಾಲ ಮನ್ನಾ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಿಶೇಷವಾಗಿ ಸನ್ಮಾನಿಸಬೇಕೆಂದು ತೀರ್ಮಾನಿಸಲಾಯಿತು.
ದತ್ತಾ ಪ್ರಮಾಣ ಸ್ವೀಕಾರ ಇಂದು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ವೈ.ಎಸ್.ವಿ.ದತ್ತಾ ಸೋಮವಾರ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಎಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದ ರಿಂದ ಯಾವ ಕ್ಷೇತ್ರ ನಮಗೆ ಕೊಡುತ್ತಾರೋ, ಅವರು ಇಟ್ಟುಕೊಳ್ಳುತ್ತಾರೋ ಎಂಬುದು ಇನ್ನೂ ತೀರ್ಮಾನವಾಗಬೇಕಿದೆ. ಆದರೂ, ನಮ್ಮ ಪಕ್ಷವನ್ನು ಸಂಘಟಿಸಬೇಕಿದೆ. ಲೋಕಸಭೆ ಅಷ್ಟೇ ಅಲ್ಲದೆ, ಮುಂದಿನ ಬಿಬಿಎಂಪಿ ಚುನಾವಣೆ ಬಗ್ಗೆಯೂ ಚರ್ಚಿಸಿದ್ದೇವೆ. ಏಕಾಂಗಿಯಾಗಿಯೇ ಸ್ಪರ್ಧೆ ಮಾಡಬೇಕಾಗಿದೆ. ಹಾಸನದಿಂದ ಲೋಕಸಭೆಗೆ ಪ್ರಜ್ವಲ್ ಸ್ಪರ್ಧಿಸಬೇಕೆಂದು ಹೇಳಿದ್ದೇನೆ. ಆ ಬಗ್ಗೆ ಸಂಸದೀಯ ಮಂಡಳಿಯಲ್ಲಿ ತೀರ್ಮಾನವಾಗಿಲ್ಲ. ● ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಲ್ಲಲಿ. ಅವರ ವಿರುದ್ಧ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಇಚ್ಛೆಯೂ ಆಗಿದೆ.
●ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ