Advertisement

ಕೈ ಸರ್ಕಾರಕೆ ದೇವೇಗೌಡ ಛಾಟಿಯೇಟು

04:20 PM Feb 10, 2018 | |

ಮುದ್ದೇಬಿಹಾಳ: ಕಾಂಗ್ರೆಸ್‌ನವರು ಬಳ್ಳಾರಿಯಿಂದ ನಡಿಗೆ ಪ್ರಾರಂಭಿಸಿ ಯುಕೆಪಿ ಯೋಜನೆಗೆ 50 ಸಾವಿರ ರೂ. ಖರ್ಚು ಮಾಡ್ತೇವೆ ಅಂತಾ ಭಾಷೆ ಕೊಟ್ರಾ. ಈಗ ಸಮೃದ್ಧ ಕರ್ನಾಟಕ ಮಾಡ್ತೇವೆ ಅಂತಿದ್ದಾರೆ. 5 ವರ್ಷ ಇವರಿಗೇನೂ ಮಾಡೋಕಾಗ್ಲಿಲ್ವಾ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಪ್ರಶ್ನಿಸಿದರು.

Advertisement

ಬಸರಕೋಡ ಗ್ರಾಮದಲ್ಲಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಶುಕ್ರವಾರ ಪವಾಡ ಬಸವೇಶ್ವರ ದೇವಸ್ಥಾನ ಕಮಿಟಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತನನ್ನು ಕಡೆಗಣಿಸೋ ಸರ್ಕಾರಗಳು ಉಳಿಯೊಲ್ಲ. ನಿರ್ನಾಮ ಆಗುತ್ತವೆ. ಹಿಂದೆ ರೈತರ ಆತ್ಮಹತ್ಯೆ ತಡೆಗಟ್ಟುವಂತೆ ಕೋರಿ ಕಠಿಣ ಪತ್ರ ಬರೆದಿದ್ದೆ. ಆದರೆ ಸರ್ಕಾರ ನಡೆಸುವವರು ಕಡೆಗಣಿಸಿ ಮಾನವೀಯತೆ ಮರೆತು ನಡೆದುಕೊಂಡರು. ಸರ್ಕಾರ ನಡೆಸುವ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಜನರ ತೊಂದರೆಯನ್ನು ತಮ್ಮದೇ ತೊಂದರೆ ಎಂದು ಭಾವಿಸುವ ಮಾನವೀಯತೆ ಇರಬೇಕು. ಒಂದು ವೇಳೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತದೆ. ಇದು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದರು. 

ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿ , ಮಾಜಿ ಸಿಎಂ ಎಸ್‌. ನಿಜಲಿಂಗಪ್ಪ ಅವರಿಗೆ ವಿಜಯಪುರದ ಜನ ಚಿನ್ನದಲ್ಲಿ ತೂಗಿದ್ದರು. ಆದರೆ ಅವರು ವಿಜಯಪುರ ಸಹಿತ ಉಕದ ನೀರಾವರಿ ಯೋಜನೆಗಳಿಗೆ ನಯಾಪೈಸೆ ಕೊಡಲಿಲ್ಲ. ಆದರೆ ನಾನು ಪ್ರಧಾನಿ ಆಗಿದ್ದಾಗ ಸಾಕಷ್ಟು ಕೊಡುಗೆ ನೀಡಿದ್ದೇನೆ. ಅದರೆ ಅದನ್ನು ಸ್ಮರಿಸುವ ಜನರಾಗಲಿ, ಪ್ರಚಾರ ಮಾಡುವ ನಾಯಕರಾಗಲಿ ಸದ್ಯ ಈ ಭಾಗದಲ್ಲಿ ಇಲ್ಲವಾಗಿದೆ.
ಹಿಂದಿನದನ್ನು ನೆನಪಿಸುವ ಸಮರ್ಥ ನಾಯಕರು ಈ ಭಾಗದಲ್ಲಿ ತಲೆಎತ್ತಿರುವುದು ಸಂತೋಷದ ಸಂಗತಿ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಜನಪರ ಯೋಜನೆ ಜಾರಿಗೊಳಿಸಿ ಹೊಸ ಬಗೆ ಆಡಳಿತ ನೀಡುವ ಸಂಕಲ್ಪ ಮಾಡಿದ್ದಾರೆ. ಅವರ ಕೈ ಬಲಪಡಿಸಬೇಕು. ಇದಕ್ಕಾಗಿ ಕಾಂಗ್ರೆಸ್‌ನ ವಿರುದ್ಧ ಸಿಡಿದೆದ್ದು ಆ ಪಕ್ಷದಿಂದ ಹೊರಬಂದು ಜೆಡಿಎಸ್‌ ಸೇರಿರುವ ಜನಪ್ರಿಯ ಸಮಾಜಸೇವಕ, ಹೋರಾಟಗಾರ ಎ.ಎಸ್‌. ಪಾಟೀಲ ನಡಹಳ್ಳಿ ಅವರನ್ನು ಗೆಲ್ಲಿಸಬೇಕು ಎಂದರು. ಇದೇ ವೇಳೆ ನವದಂಪತಿಗಳಿಗೆ ಶುಭ ಹಾರೈಸಿದ ಅವರು ಸಾವಿರಾರು ಉಚಿತ ಸಾಮೂಹಿಕ ವಿವಾಹ ನಡೆಸಿಕೊಡುವ
ಮೂಲಕ ಶಾಸಕ ನಡಹಳ್ಳಿ 13 ವರ್ಷದಿಂದ ನಿರಂತರ ಸಮಾಜಸೇವೆ ನಡೆಸುತ್ತಿದ್ದಾರೆ. ಪವಾಡಬಸವೇಶ್ವರ ಇವರಿಗೆ ಶಕ್ತಿ ನೀಡಿದ್ದಾರೆ ಅನ್ನೋ ನಂಬಿಕೆ ನನ್ನದಾಗಿದೆ. ರಾಜಕಾರಣ ಕೆಟ್ಟು ಹೋಗಿರುವ ಈ ದಿನಗಳಲ್ಲೂ ಆಸೆ, ಆಮಿಷ ಇಲ್ಲದೆ ಸಮಾಜಸೇವೆ ಮಾಡೋದು ಪುಣ್ಯದ ಕೆಲಸ. ಅದನ್ನು ನಡಹಳ್ಳಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

Advertisement

ಕಾರ್ಯಕ್ರಮ ಸಂಘಟಕ, ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ, ಬಸರಕೋಡದಿಂದಲೇ ನನ್ನ
ಸಾಮಾಜಿಕ, ರಾಜಕೀಯ ಜೀವನ ಪ್ರಾರಂಭಗೊಂಡಿದ್ದು ಸಾಕಷ್ಟು ಪ್ರಗತಿ ಸಾಧಿ ಸಿದ್ದೆನೆ. ಇದಕ್ಕೆ ಪವಾಡಬಸವೇಶ್ವರನ
ಆಶಿರ್ವಾದವೇ ಕಾರಣ. ಮುಂಬರುವ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 5-6 ಕ್ಷೇತ್ರಗಳನ್ನು ಜೆಡಿಎಸ್‌ ಕೈವಶ ಮಾಡಿಕೊಳ್ಳಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಒಂದೇ ಮಗುವನ್ನು ಹೆತ್ತು ಸುಖೀ ಜೀವನ ನಡೆಸಬೇಕು ಎಂದರು.

ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್‌. ಮಾಗಿ, ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ರಸೂಲ್‌ ದೇಸಾಯಿ, ತಾಳಿಕೋಟೆಯ ಜೆಡಿಎಸ್‌ ಮುಖಂಡ ಖಾಜಾಹುಸೇನ್‌ ಚೌಧರಿ, ಮಾಜಿ ಶಾಸಕ ಎನ್‌.ಎಸ್‌. ಖೇಡ ಮಾತನಾಡಿದರು. ರೂಢಗಿ, ಬಸರಕೋಡ, ಇಂಗಳಗೇರಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಸಿ. ಮನಗೂಳಿ, ಜಿಪಂ ಸದಸ್ಯ ಬಸನಗೌಡ ವಣಿಕ್ಯಾಳ, ಜೆಡಿಎಸ್‌ ತಾಲೂಕಾಧ್ಯಕ್ಷ ಈರಸಂಗಪ್ಪಗೌಡ ಬಾಗೇವಾಡಿ, ಸಂಗಮ್ಮ ದೇವರಳ್ಳಿ, ಮಹಾದೇವಿ ಪಾಟೀಲ ನಡಹಳ್ಳಿ, ಆರ್‌.ಕೆ. ಪಾಟೀಲ, ನಡಹಳ್ಳಿ ಅವರ ತಾಯಿ ಗಂಗಾಬಾಯಿ, ಎಂ.ಆರ್‌. ನಾಡಗೌಡ, ಗ್ರಾಪಂ ಅಧ್ಯಕ್ಷೆ ಕವಿತಾ, ಸರಸ್ವತಿ ಪೀರಾಪುರ, ಶಾಂತಗೌಡ ಪಾಟೀಲ ನಡಹಳ್ಳಿ, ಮಲ್ಲಿಕಾರ್ಜುನ ಯಂಡಿಗೇರಿ, ರಿಯಾಜ್‌ ಫಾರೂಕಿ, ಚನ್ನಪ್ಪ ಕಂಠಿ, ಸಂಗಪ್ಪ ಲಕ್ಷಟ್ಟಿ, ಮನೋಹರ ತುಪ್ಪರ, ಶರಣು ಬೂದಿಹಾಳಮಠ, ಬಲಭೀಮ ನಾಯಕಮಕ್ಕಳ, ಚನಬಸಪ್ಪಗೌಡ ಪಾಟೀಲ, ವಾಸುದೇವ ಹೆಬಸೂರ, ಮಂಜುಳಾ ಮೇಟಿ ವೇದಿಕೆಯಲ್ಲಿದ್ದರು.

ಪವಾಡಬಸವೇಶ್ವರ ಸಂಸ್ಥೆ ಅಧ್ಯಕ್ಷ ಕೆ.ವೈ. ಬಿರಾದಾರ ಸ್ವಾಗತಿಸಿದರು. ಗುರುನಾಥ ಬಿರಾದಾರ ನಿರೂಪಿಸಿದರು. ಇದಕ್ಕೂ ಮುನ್ನ 19 ದಂಪತಿಗಳಿಗೆ ದೇವೇಗೌಡರ ಸಹಿತೆ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಅಕ್ಷತೆ ಹಾಕಿ ಶುಭ ಕೋರಿದರು.

ಮನಗೂಳಿ ಸ್ನೇಹದ ಸ್ಮರಣೆ ಜಿಲ್ಲೆ ಜೆಡಿಎಸ್‌ ಅಧ್ಯಕ್ಷ, ಮಾಜಿ ಸಚಿವ ಎಂ.ಸಿ. ಮನಗೂಳಿ ಮತ್ತು ತಮ್ಮ ನಡುವಿನ ಸ್ನೇಹ ನೆನಪಿಸಿಕೊಂಡ ದೇವೇಗೌಡರು ಅವರ ಒತ್ತಾಯದ ಮೇರೆಗೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಪರಿಗಣಿಸಿದ್ದು ತಮ್ಮ
ಸ್ನೇಹದ ಸ್ಮರಣಾರ್ಥ ಸಿಂದಗಿ ತಾಲೂಕು ಗೋಲಗೇರಿಯಲ್ಲಿ ತಮ್ಮ ಮತ್ತು ಮನಗೂಳಿ ಅವರ ಪರಸ್ಪರ ಹೆಗಲ ಮೇಲೆ ಕೈಯಿಟ್ಟ ಪುತ್ಥಳಿಗಳನ್ನು ಸ್ಥಾಪಿಸಿದ್ದನ್ನು ಪ್ರಸ್ತಾಪಿಸಿ ಗುಣಗಾನ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next