Advertisement

ಎಚ್ ಡಿಡಿ ಸ್ಪರ್ಧೆ: ಮಧುಗಿರಿಯಲ್ಲಿ ರಾಜಕೀಯ ರಂಗು

01:08 PM Apr 10, 2019 | keerthan |

ಮಧುಗಿರಿ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ಕ್ಷೇತ್ರ ಇಂದು ರಾಜಕೀಯದ ರಂಗು ಬಳಿದುಕೊಂಡು ಪುಟಿಯುತ್ತಿದೆ.

Advertisement

ಮೂರು ಬಾರಿ ಸಂಸದರಾಗಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜು ವಿರುದ್ಧ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿದಿದ್ದು, ಫ‌ಲಿತಾಂಶಕ್ಕೆ ಇಡೀ ದೇಶವೇ ಕಾಯುತ್ತಿದೆ. ಇತರೆ ಅಭ್ಯರ್ಥಿಗಳು ಕಣದಲ್ಲಿದ್ದರೂ ದೇವೇಗೌಡರು ಹಾಗೂ ಬಸವರಾಜು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಪ್ರಧಾನಿ ಬೆನ್ನಿಗೆ ಮೈತ್ರಿ ಸರ್ಕಾರದ ಕಾಂಗ್ರೆಸ್‌ ಪಕ್ಷದ ಉಪಮುಖ್ಯಮಂತ್ರಿ ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ, ಷಫಿ ಅಹ್ಮದ್‌, ರಫಿಕ್‌ ಅಹ್ಮದ್‌, ಸೇರಿದಂತೆ ಹಲವಾರು ಘಟಾನುಗಟಿಗಳು ಇದ್ದು, ಒಕ್ಕಲಿಗ ಸೇರಿದಂತೆ ಅಹಿಂದ ಮತಗಳ ಬಲದೊಂದಿಗೆ ಚುನಾವಣೆ ಎದುರಿಸಲಿದ್ದಾರೆ.

ಮೈತ್ರಿಧರ್ಮ ಪಾಲಿಸುತ್ತಾರೋ ಇಲ್ಲವೋ:
ಪ್ರಧಾನಿಯಾಗಿ ತಾವು ಮಾಡಿದ ರೈತಪರ, ಬಡವರ ಪರವಾದ ಕಾರ್ಯಗಳು, ಅಲ್ಪಸಂಖ್ಯಾತರಿಗೆ ನೀಡಿದ ಶೇ.4 ಮೀಸಲಾತಿ ಹಾಗೂ ನಾಯಕ ಸಮುದಾಯಕ್ಕೆ ಪರಿಶಿಷ್ಟ ವರ್ಗಕ್ಕೆ ಸೇರಿಸಲು ಪಟ್ಟ ಶ್ರಮವನ್ನು ನಂಬಿ
ಮತ್ತು ಕುಮಾರಸ್ವಾಮಿನೇತೃತ್ವದ ಸಾಲಮನ್ನಾ, ಬಡವರ ಬಂಧು, ಎತ್ತಿನಹೊಳೆ ಯೋಜನೆ ಸೇರಿದಂತೆ ಇತರೆ ಜನಪರವಾದ ಕಾರ್ಯಕ್ರಮವನ್ನು ಚುನಾವಣೆಗೆ ಸಿದ್ಧವಾಗಿದ್ದಾರೆ. ಆದರೆ, ಜಿಲ್ಲೆಯ ಕಾಂಗ್ರೆಸ್‌ ಪಕ್ಷದ
ನಾಯಕರಲ್ಲಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ, ಸಂಸದ ಮುದ್ದಹನುಮೇಗೌಡರು ಇನ್ನೂ ದೇವೇಗೌಡರ ಜೊತೆ ಸಭೆಯಲ್ಲಿ ಭಾಗಿಯಾಗಿಲ್ಲ. ಏ.10 ರಂದು ನಡೆಯುವ ಸಭೆಗೆ ಇವರಿಬ್ಬರೂ ಬರುವ ನಿರೀಕ್ಷೆಯಿದ್ದು, ದೇವೇಗೌಡರ ಪರವಾಗಿ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ, ಮಧುಗಿರಿಯ ಕಾಂಗ್ರೆಸ್‌ನಲ್ಲಿ ರಾಜಣ್ಣನವರು ಏಕಮಾತ್ರ ನಾಯಕರಾಗಿದ್ದು, ಅವರು ಮೈತ್ರಿಧರ್ಮ ಪಾಲಿಸುತ್ತಾರೋ ಇಲ್ಲವೋ ಎಂಬುದು ಮುಂದಿನದಿನದಲ್ಲಿ ತಿಳಿಯಬೇಕಿದೆ.

ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜು ಕಳೆದ ಬಾರಿ ಬಿಜೆಪಿಗೆ ಹಾರಿ ಪರಾಭವಗೊಂಡಿದ್ದರು. ಜಿಲ್ಲೆಗೆ ಇವರು ನೀಡಿದ ಕೊಡುಗೆಯನ್ನು ಇಲ್ಲಿವರೆಗೂ ನಡೆದ ಚುನಾವಣಾ ಸಭೆಯಲ್ಲಿ ಎಲ್ಲಿಯೂ ಹೇಳಿಲ್ಲವಾದರೂ, ಕೇವಲ ದೇವೇಗೌಡ ವಿರುದ್ಧವಾಗಿ ಟೀಕೆ ಮಾಡುತ್ತಾ ಮೋದಿಯ ಹೆಸರಲ್ಲೇ ಮತಯಾಚನೆ ಮಾಡುತ್ತಿರುವುದು ವಿಶೇಷ. ಇವರಿಗೆ ಕಾಂಗ್ರೆಸ್‌
ಪಕ್ಷದ ಅತೃಪ್ತರು ಮತಗಳನ್ನು ಹಾಕಿಸುವುದರ ಮೂಲಕ ಸಹಾಯ ಮಾಡುತ್ತಾರೆಂದು ನಂಬಿದ್ದು, ಅದೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಈ ಬಾರಿ ಲಿಂಗಾಯತ ಹಾಗೂ ವೈಶ್ಯ, ಬ್ರಾಹ್ಮಣ ಮತಗಳು ಬಿಜೆಪಿಗೆ ಅನಾಯಾಸವಾಗಿ ಹರಿಯಲಿದೆ ಎಂಬ ಭಾವನೆಯಿಂದ ಬಸವರಾಜು ಆ ಮತಗಳ ಬೇಟೆಗೆ ನಿರ್ಲಕ್ಷ ತೋರಿರುವುದು ಕೆಲವರಲ್ಲಿ ಅಸಮಾಧಾನ ಉಂಟುಮಾಡಿದೆ.

ಗೌಡರ ಆಗಮನದಿಂದ ಬೆವೆತ ಬಸವರಾಜು: ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಜಿ.ಎಸ್‌.ಬಸವರಾಜು ಆಯ್ಕೆಯಾದಾಕ್ಷಣ ಸುಲಭ ಗೆಲುವಿನ ಕನಸು ಕಂಡಿದ್ದರು. ಆದರೆ, ದೇವೇಗೌಡರ ಸ್ಪರ್ಧೆ ಬಗ್ಗೆ ಖಚಿತವಾಗುತ್ತಿದ್ದಂತೆ ವಿಚಲಿತರಾದ ಬಸವರಾಜು, ಹೇಮಾವತಿ ವಿಚಾರವನ್ನು ಎಳೆದು ತಂದರು. ಮಾಜಿ ಶಾಸಕ ಸುರೇಶ್‌ಗೌಡ ಗಂಗೆ ಶಾಪದ ಮಾತನಾಡಿದರು. ಆದರೆ, ದೇವೇಗೌಡರು ಜಿಲ್ಲೆಗೆ ಬಂದಾಕ್ಷಣ ಮಳೆಯ ಸಿಂಚನವಾಗಿದ್ದು, ಸಿದ್ಧಗಂಗಾ ಮಠಕ್ಕೆ ಹಾಗೂ ದರ್ಗಾಕ್ಕೆ ಭೇಟಿ ನೀಡಿದ್ದು, ಇದನ್ನು ಗಂಗೆ ವರಪುತ್ರ ಎಂಬಂತೆ ಜೆಡಿಎಸ್‌ ಕಾರ್ಯಕರ್ತರು ವ್ಯಾಖ್ಯಾನಿಸಿದರು.

Advertisement

ಕ್ಷೇತ್ರವ್ಯಾಪ್ತಿಯಲ್ಲಿ 6 ಹೋಬಳಿ: ತಾಲೂಕಿನಲ್ಲಿ 6 ಹೋಬಳಿಗಳಿದ್ದು, ಪುರವರ ಕೊರಟಗೆರೆ ಕ್ಷೇತ್ರಕ್ಕೆ ಸೇರಲಿದ್ದು, ಉಳಿದ ಕಸಬಾ, ದೊಡ್ಡೇರಿ, ಮಿಡಿಗೇಶಿ, ಐ.ಡಿ.ಹಳ್ಳಿ, ಕೊಡಿಗೇನಹಳ್ಳಿ ಹೋಬಳಿಯಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬಹುಮತ ಪಡೆದಿದೆ. ತಾಲೂಕಿನ ತಾಪಂ, ಜಿಪಂ ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಹಿಡಿತ ಸಾಧಿಸಿದ್ದು,
ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್‌, 88,021, ಕಾಂಗ್ರೆಸ್‌ 69,671, ಬಿಜೆಪಿ 2,904 ಮತಗಳಿಸಿದೆ. ಇಲ್ಲಿ ಬಿಜೆಪಿ ಯಾವುದೇ ಜನಪ್ರತಿನಿಧಿ ಕ್ಷೇತ್ರದಲ್ಲಿ
ಗೆದ್ದಿಲ್ಲದಿರುವುದು ಬಿಜೆಪಿಗೆ ಬಲಕುಗ್ಗಿಸಿದೆ. ಆದರೂ ಮೋದಿ ಹೆಸರಲ್ಲಿ ಕಳೆದ ಬಾರಿ 22 ಸಾವಿರಕ್ಕೂ ಹೆಚ್ಚು ಮತಗಳಿಸಿದ್ದ ಇದೇ ಬಸವರಾಜು, ಈ ಬಾರಿ 30
ಸಾವಿರ ಮತಗಳಿಸುವ ನಿರೀಕ್ಷೆಯಿದ್ದು, ಒಂದು ವೇಳೆ ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡರೆ ಆ ಮತಗಳಿಕೆ ಸರಾಸರಿ 50 ಸಾವಿರ ದಾಟುವ
ನಿರೀಕ್ಷೆಯಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಈ ಒಳ ಒಪ್ಪಂದದ ಕಾರ್ಯ ಹಾಗೂ ರಾಜಣ್ಣನವರ ಅಸಮಾಧಾನವನ್ನು ತಡೆಯಲು ಸಿದ್ದರಾಮಯ್ಯನವರೇ ಕ್ಷೇತ್ರಕ್ಕೆ ಬುಧವಾರ ಆಗಮಿಸಲಿದ್ದು, ಅಂದು ನಡೆಯುವ ಮಾತುಕತೆ ದೇವೇಗೌಡರಿಗೆ ಬಲ ತಂದುಕೊಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದು ದೇವೇಗೌಡರ ಪರವಾಗಿ ಕೆಲಸ ಮಾಡಿದರೆ ಜಿಲ್ಲೆಯಲ್ಲೇ
ದೇವೇಗೌಡರ ಬಹುಮತವನ್ನು ತಡೆಯಲು ಬಿಜೆಪಿಯಿಂದ ಸಾಧ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next