Advertisement

ಘಟಬಂಧನ್‌ಗೆ ಗೌಡರೇ ಸೇತು

02:11 AM May 09, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಒಕ್ಕೂಟ ರಚನೆಗೆ ಮುಂದಾಗಿರುವ ಟಿಆರ್‌ಎಸ್‌ ಮುಖ್ಯಸ್ಥ ಚಂದ್ರಶೇಖರರಾವ್‌ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ನ ಮಖ್ಯಸ್ಥ ಜಗನ್‌ಮೋಹನ್‌ರೆಡ್ಡಿ ಅವರ ಮನವೊಲಿಸಿ ಮಹಾಘಟ್ಬಂಧನ್‌ ತೆಕ್ಕೆಗೆ ಸೆಳೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಮುಂದಾಗಿದ್ದಾರೆ.

Advertisement

ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಈ ಕುರಿತು ಟಿಆರ್‌ಎಸ್‌ನ ಚಂದ್ರಶೇಖರರಾವ್‌ ಹಾಗೂ ವೈಆರ್‌ಎಸ್‌ನ ಜಗನ್‌ಮೋಹನ್‌ರೆಡ್ಡಿ ಜತೆ ಮಾತನಾಡುವಂತೆ ರಾಹುಲ್ ಮನವಿ ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಟಿಆರ್‌ಎಸ್‌ ಮುಖ್ಯಸ್ಥ ಚಂದ್ರಶೇಖರ್‌ ಅವರು ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ ಮಾಹಿತಿ ಪಡೆದುಕೊಂಡಿರುವ ರಾಹುಲ್ಗಾಂಧಿ, ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಒಕ್ಕೂಟ ಸ್ಥಾಪನೆಗಿಂತ ಬಿಜೆಪಿ ದೂರ ಇಡುವ ಗುರಿಯೊಂದಿಗೆ ಮಹಾಘಟ್ಬಂಧನ್‌ನಲ್ಲೇ ಸೇರುವುದು ಸೂಕ್ತ ಎಂದಿದ್ದಾರೆ.

ಟಿಆರ್‌ಎಸ್‌, ವೈಎಸ್‌ಆರ್‌, ಎಸ್‌ಪಿ-ಬಿಎಸ್‌ಪಿ, ಟಿಎಂಸಿ, ಬಿಜೆಡಿ, ಎಎಪಿ, ಎಡ ಪಕ್ಷಗಳು ಮಹಾಘಟ್ಬಂಧನ್‌ ಜತೆಗೂಡಿದರೆ ಅಗತ್ಯವಾದರೆ ಮೈತ್ರಿಕೂಟದ ಹೆಸರು ಸರ್ವಸಮ್ಮತವಾಗಿ ಬದಲಾವಣೆ ಸಹ ಮಾಡಬಹುದು. ಆಗ ಬಿಜೆಪಿ ವಿರುದ್ಧ ನಿಜಕ್ಕೂ ಒಂದು ಪ್ರಬಲ ಶಕ್ತಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ರಾಹುಲ್ಗಾಂಧಿ, ದೇವೇಗೌಡರಿಗೆ ತಿಳಿಸಿದ್ದಾರೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಜತೆಗೂ ರಾಹುಲ್ಗಾಂಧಿ ಮಾತನಾಡಿದ್ದು, ಈಗಾಗಲೇ ಡಿಎಂಕೆ ಮಹಾಘಟ್ಬಂಧನ್‌ ಜತೆ ಇರುವುದರಿಂದ ಚಂದ್ರಶೇಖರರಾವ್‌ ಅವರ ಭೇಟಿಗೆ ಒಪ್ಪಿಲ್ಲ ಎಂದು ಹೇಳಲಾಗಿದೆ.

Advertisement

ಲೋಕಸಭೆ ಚುನಾವಣೆಯ ಐದು ಹಂತಗಳ ಮತದಾನದ ನಂತರದ ಪರಿಸ್ಥಿತಿಯಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್‌ ಸೇರಿ ಬಿಜೆಪಿ ನಾಯಕರೇ ಅನುಮಾನ ವ್ಯಕ್ತಪಡಿಸುತ್ತಿರುವುದರಿಂದ ಎಲ್ಲರೂ ಒಂದಾದರೆ ಬಿಜೆಪಿಯೇತರ ಮೈತ್ರಿಕೂಟ ಅಧಿಕಾರ ಹಿಡಿಯುವ ಸಾಧ್ಯತೆಯೂ ಇರುವುದರಿಂದ ಟಿಆರ್‌ಎಸ್‌-ವೈಎಸ್‌ಆರ್‌ ತಮ್ಮ ತೆಕ್ಕೆಗೆ ಸೆಳೆಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್‌ ಹೊಂದಿದೆ. ಇದೇ ಕಾರಣಕ್ಕೆ ಚಂದ್ರಶೇಖರ ರಾವ್‌ ಹಾಗೂ ಜಗನ್‌ಮೋಹನ್‌ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ದೇವೇಗೌಡರಿಗೆ ತಿಳಿಸಿದೆ ಎಂದು ತಿಳಿದು ಬಂದಿದೆ.

ನಿಲುವು

ಜೆಡಿಎಸ್‌, ಡಿಎಂಕೆ ಸೇರಿ ಲೋಕಸಭೆ ಚುನಾವಣೆಗೆ ಮುಂಚೆಯೇ ಮಹಾಘಟ್ಬಂಧನ್‌ ಜತೆ ಗುರುತಿಸಿಕೊಂಡಿರುವ ಪಕ್ಷಗಳು ಲೋಕಸಭೆ ಚುನಾವಣೆ ಫ‌ಲಿತಾಂಶ ಹೊರಬೀಳುವವರೆಗೂ ಬೇರೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ತೀರ್ಮಾನಿಸಿವೆ. ಕಾಂಗ್ರೆಸ್‌ ನೇತೃತ್ವದ ಮಹಾಘಟ್ಬಂಧನ್‌ ಅಧಿಕಾರಕ್ಕೆ ಬಂದರೆ ರಾಹುಲ್ಗಾಂಧಿಯೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಪ್ರತಿಪಾದಿಸುವ ನಿಲುವು ತಾಳಿದೆ. ಆಂತರಿಕವಾಗಿ ಬಿಜೆಪಿಯಿಂದ ದೂರ ಇರುವ ಪಕ್ಷಗಳನ್ನು ಒಟ್ಟುಗೂಡಿಸುವ ಇರಾದೆ ಹೊಂದಿದೆ . ಸದ್ಯದಲ್ಲೇ ಚಂದ್ರಶೇಖರ್‌ ರಾವ್‌ ಜತೆ ದೇವೇಗೌಡರು ಅಥವಾ ಕುಮಾರಸ್ವಾಮಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next