ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಈ ಹಿಂದೆ ವೀರಶೈವ-ಲಿಂಗಾಯಿತರನ್ನು ಪ್ರತ್ಯೇಕಿಸುವ ಹುನ್ನಾರಕ್ಕೆ ಕಾಂಗೆಸ್ ಕೈ ಹಾಕಿತ್ತು. ಜೆಡಿಎಸ್ ಸಹ ಇದೇ ಹಾದಿಯಲ್ಲಿದ್ದು ಜನತೆ ಸರಿಯಾಗಿ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ನಡೆಸಿದ್ದಾರೆ. ಅವರ ಹೇಳಿಕೆಗಳಿಂದ ಉತ್ತರ ಕರ್ನಾಟಕದ ಜನತೆಗೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ಜು.31 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತ್ಯೇಕ ಕರ್ನಾಟಕ ರಾಜ್ಯ ಹೋರಾಟದಲ್ಲಿ ಭಾಗವಹಿಸಲಿರುವ ಮಠಾಧೀಶರು ಹಾಗೂ ಇತರೆ ಹೋರಾಟಗಾರರ ಮನವೊಲಿಸಿ ಏಕೀಕೃತ ಕರ್ನಾಟಕದ ಹೋರಾಟಕ್ಕೆ ಬದ್ಧವಾಗಲು ಮನವಿ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನತೆ 104 ಶಾಸಕರನ್ನು ಚುನಾಯಿಸುವ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದರೂ ಸಹ 37 ಶಾಸಕರನ್ನೊಳಗೊಂಡ ಜೆಡಿಎಸ್‌ಗೆ 79 ಶಾಸಕರನ್ನೊಳಗೊಂಡ ಕಾಂಗ್ರೆಸ್ ಪಕ್ಷದವರು ಅನೈತಿಕ ಸಂಬಂಧ ಬೆಳೆಸುವ ಮೂಲಕ ಸರ್ಕಾರ ರಚಿಸಿ ಜನತೆಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಜನತೆಯನ್ನು ಸವತಿ ಮಕ್ಕಳಂತೆ ಕಾಣುತ್ತಿರುವ ಕುಮಾರಸ್ವಾಮಿಯವರು ನಿಮ್ಮ ಸಾಲ ಮನ್ನಾ ಮಾಡಲು ನೀವೇನು ನನಗೆ ಓಟು ಹಾಕಿದ್ದೀರ, ಓಟು ಹಾಕುವಾಗ ನನ್ನ ನೆನಪಾಗಲಿಲ್ಲವೇ ಎಂದು ಹೇಳುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಹಾಗೂ ದುರಂಹಕಾರದ ಮಾತುಗಳನ್ನು ಆಡಿದ್ದಾರೆ. ಹಿಂದೆಂದೂ ಯಾವುದೇ ಮುಖ್ಯಮಂತ್ರಿಗಳು ಈ ರೀತಿಯ ಹೇಳಿಕೆ ನೀಡಿರಲಿಲ್ಲ.
ಬೆಂಗಳೂರಿನ ಹಣವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತೇನೆ ಎನ್ನುವ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿಯಗಳು ಮನೆ ಒಡೆಯುವ ಸಂಚಿಗೆ ಕೈ ಹಾಕಿದ್ದಾರೆ. ಇದಕ್ಕೆಲ್ಲಾ ಬೆಂಬಲ ಸೂಚಿಸುತ್ತಿರುವ ಕಾಂಗ್ರೆಸ್ ನಾಯಕರ ಮೌನ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.