Advertisement

ದೇವೇಗೌಡರು ರಾಜಕೀಯವಾಗಿ ತುಳಿಯಲು ಯತ್ನಿಸಿದ್ರು

10:58 AM Apr 15, 2017 | |

ನಾಗಮಂಗಲ: “ನಾನು ಯಾರಿಗೂ ಹೆದರುವುದಿಲ್ಲ. ಓಡಿಹೋಗಲು ನಾನು ಹೇಡಿಯಲ್ಲ. ನನ್ನ ಜೀವನದ ಕೊನೆಯ ಉಸಿರಿರುವವರೆಗೆ ಸ್ವಾಭಿಮಾನ ಮತ್ತು ಮರ್ಯಾದೆಯಿಂದ ರಾಜಕಾರಣ ಮಾಡುತ್ತೇನೆ’ ಎಂದು ಶಾಸಕ ಎನ್‌.ಚಲುವರಾಯಸ್ವಾಮಿ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಅಭಿಮಾನಿಗಳ ಸಮಾವೇಶದಲ್ಲಿ ಮಾತನಾಡಿ, “ದೇವೇಗೌಡರು ನನ್ನ 23 ವರ್ಷಗಳ ರಾಜಕೀಯ ಜೀವನದಲ್ಲಿ ನೂರು ಬಾರಿ ತುಳಿಯಲು ಪ್ರಯತ್ನಿಸಿದರು. ಇವತ್ತು ನಾನು ರಾಜಕೀಯದಲ್ಲಿ ಉಳಿದಿರೋದು ಜನರಿಂದ ಮಾತ್ರ. ನಾನು ಯಾರಿಗೋ ಹೆದರಿಕೊಂಡು ರಾಜಕಾರಣ ಮಾಡಬೇಕಿಲ್ಲ. ದೇವರಿಗೆ ಸತ್ಯ ಗೊತ್ತಿದೆ. ನನ್ನಿಂದ ಬೇರೆಯವರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನುಡಿದರು. “ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾಗ ಕುಟುಂಬದವರಾರೂ ಅವರ ಹತ್ತಿರ ಬರಲಿಲ್ಲ. ಅಂದು ಅವರ ಜೊತೆಗಿದ್ದದ್ದು ನಾವು. ಕುಮಾರಸ್ವಾಮಿಗೆ ಜಮೀರ್‌ ಅಹಮದ್‌ ಮಗನಂತೆ ಸೇವೆ ಮಾಡಿದ್ದಾರೆ. ಆಸ್ಪತ್ರೆಯಲ್ಲೇ ಮಲಗಿ ಆರೈಕೆ ಮಾಡಿದ್ದಾರೆ.

ಮಾನಸಿಕವಾಗಿ ಮತ್ತು ವೈಯಕ್ತಿಕವಾಗಿ ಸೇವೆ ಮಾಡಿದವರಿಗೆ ಮೋಸ ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆನ್ನಿಗೆ ಚೂರಿ ಹಾಕಲಿಲ್ಲ: “2008ರಲ್ಲಿ ಯಡಿಯೂರಪ್ಪ ಮನೆ ಬಾಗಿಲಿಗೆ ಬಂದು ಅಧಿಕಾರ ಕೊಡ್ತೀವಿ ಬಿಜೆಪಿಗೆ ಬನ್ನಿ ಎಂದು ನಮ್ಮನ್ನು ಗೋಗರೆದರು. ಆದರೆ, ನಾವು ಎಂದಿಗೂ ಪಕ್ಷ ದ್ರೋಹ ಮಾಡಲ್ಲ. ಬೆನ್ನಿಗೆ ಚೂರಿ ಹಾಕಲ್ಲ ಎಂದಿದ್ದೆವು. 2013ರ ಚುನಾವಣೆಯಲ್ಲಿ ಕುಮಾರಸ್ವಾಮಿ ನನ್ನನ್ನು ಸೋಲಿಸುವ ಸಲುವಾಗಿಯೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರಲಿಲ್ಲ. ಇದು ನಾಯಕರಿಂದ ನಮಗೆ ಸಿಕ್ಕ ಬಳುವಳಿ’ ಎಂದು ಹೇಳಿದರು.

ಹಿಂಸೆ ನೀಡುವ ಪಕ್ಷದಲ್ಲಿ ಯಾರೂ ಇರಲ್ಲ
ನಾಗಮಂಗಲ:
“ಸದಾಕಾಲ ಚಿತ್ರಹಿಂಸೆ ನೀಡುವ ಪಕ್ಷದಲ್ಲಿ ಯಾರೂ ಉಳಿಯಲು ಸಾಧ್ಯವಿಲ್ಲ’ ಎಂದು ಜೆಡಿಎಸ್‌ ಭಿನ್ನಮತೀಯ ಗುಂಪಿನ ನಾಯಕ ಜಮೀರ್‌ ಅಹಮದ್‌ ತಿಳಿಸಿದರು. ನಗರದಲ್ಲಿ ಶುಕ್ರವಾರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, “ಇಲ್ಲಿ ಶಾಸಕರಾದವರು,
ಮಂತ್ರಿಯಾದವರು ಮೋಸ ಮಾಡಿ ಹೋಗುತ್ತಿದ್ದಾರೆ ಎಂದು ಆರಂಭದಲ್ಲಿ ನಾವು ಭಾವಿಸಿದ್ದೆವು. ಆದರೆ, ನಾಯಕರ ಬೆಳವಣಿಗೆಯನ್ನು ಸಹಿಸದೆ ಚಿತ್ರಹಿಂಸೆ ನೀಡುವ ಪಕ್ಷದಲ್ಲಿ ಯಾರು ತಾನೇ ಉಳಿಯುತ್ತಾರೆ ಎಂಬುದು ಅನುಭವದಿಂದ ಅರಿವಿಗೆ ಬಂದಿದೆ’ ಎಂದು ಬೇಸರದಿಂದ ನುಡಿದರು. 

ಕುಟುಂಬಸ್ಥರಿಂದಲೇ ಕುಮಾರಸ್ವಾಮಿಬೀದಿಗೆ ಬೀಳ್ತಾರೆ: ಬಾಲಕೃಷ್ಣ ಲೇವಡಿ
ನಾಗಮಂಗಲ
: “ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನು’ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು. ನಗರದಲ್ಲಿ ಶುಕ್ರವಾರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, “ದೇವೇಗೌಡರನ್ನು ತವರಿನಲ್ಲೇ ಸೋಲಿಸಿ ಕಳುಹಿಸಿದ್ದರು. ಕನಕಪುರ ಲೋಕಸಭೆಗೆ ಉಪ ಚುನಾವಣೆ ಘೋಷಣೆಯಾದಾಗ ನಾನು ಬಿಜೆಪಿಯಲ್ಲಿದ್ದೆ. ಯಡಿಯೂರಪ್ಪ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು. ಆಗ ಎಂ.ಶ್ರೀನಿವಾಸ್‌ ನನ್ನನ್ನು ಜೆಡಿಎಸ್‌ಗೆ ಕರೆತಂದ್ರು. ಒಕ್ಕಲಿಗರ ಪ್ರಾಬಲ್ಯವಿದ್ದ ಕ್ಷೇತ್ರದಲ್ಲಿ ಜೆಡಿಎಸ್‌ ಮತದಾರರಿದ್ದದ್ದು 3 ಸಾವಿರ ಮಾತ್ರ.

Advertisement

ನಾನು ಬಂದ ಮೇಲೆ 47 ಸಾವಿರ ಓಟು ಕೊಟ್ರಾ. ನಾವೇನಾದರೂ ಜೆಡಿಎಸ್‌ಗೆ ಬರಲಿಲ್ಲ ಎಂದಿದ್ದರೆ ಡಿ.ಕೆ.ಶಿವಕುಮಾರ್‌ ದೇವೇಗೌಡರನ್ನು ಸೋಲಿಸುತ್ತಿದ್ದರು. ನಾವು ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ಕೊಟ್ಟೆವು. ಈಗ ನಮಗೆ ಅವರೇನು ಕೊಟ್ರಾ’ ಎಂದು ಪ್ರಶ್ನಿಸಿದರು. “ಕುಮಾರಸ್ವಾಮಿಯನ್ನು ನಾವೆಲ್ಲರೂ ಸೇರಿ ಮುಖ್ಯಮಂತ್ರಿ ಮಾಡಿದ್ವಿ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ದೇವೇಗೌಡರು ರಾಜಕೀಯ ಹಿನ್ನಡೆ ಅನುಭವಿಸುತ್ತಾರೆ. ರೇವಣ್ಣ ಮುಖ್ಯಮಂತ್ರಿಯಾದರೆ ಬೆಳವಣಿಗೆ ಕಾಣಾ¤ರೆ ಅಂತ ಶಾಸ್ತ್ರ ಹೇಳಿದೆಯಂತೆ. ಇದೇ ಕಾರಣಕ್ಕೆ ಮುಂದೊಂದು ದಿನ ಅವರ ಕುಟುಂಬದವರೇ ಕುಮಾರಸ್ವಾಮಿಯನ್ನು ತಂದು ಬೀದಿಯಲ್ಲಿ ನಿಲ್ಲಿಸುತ್ತಾರೆ. ನನ್ನ ಮಾತು ನಿಜವಾಗದಿದ್ದರೆ ಆಮೇಲೆ ನೋಡಿ’ ಎಂದು ಭವಿಷ್ಯ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next