ಬೆಂಗಳೂರು: ಪಂಚರತ್ನ ಸಮಾರೋಪ ಸಮಾವೇಶ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತೆರೆದ ವಾಹನ ಯಾತ್ರೆ ರದ್ದುಪಡಿಸಲಾಗಿದೆ.
ದೇವೇಗೌಡರ ಆರೋಗ್ಯ ಹಾಗೂ ಶಾಸಕರ ಸಲಹೆಯ ಮೇರೆಗೆ ಕುಂಬಳಗೋಡಿನಿಂದ 100 ಕಿ.ಮೀ. ರೋಡ್ ಶೋ ಬದಲು ನಾಲ್ಕು ಕಿ.ಮೀ.ಗೆ ಮಾತ್ರ ಸಮಾವೇಶದ ಸ್ಥಳಕ್ಕೆ ತೆರೆದ ಜೀಪಿನಲ್ಲಿ ಕರೆದೊಯ್ಯಲು ನಿರ್ಧರಿಸಲಾಗಿದೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಈ ತಿಂಗಳ 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಆಗಿದೆ. ಚಾಮುಂಡೇಶ್ವರಿ ಸನ್ನಿಧಾನದಲ್ಲಿ ತಾಯಿ ಆಶೀರ್ವಾದ ಇರಲಿ ಅಂತಲೇ ಅಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಂಚರತ್ನ ಸಮಾರೋಪ ಸಮಾವೇಶದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ ಎಂದು ಹೇಳಿದರು.