Advertisement
ಹಾಸನ ಕ್ಷೇತ್ರದಿಂದ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರೆ. ಈ ಕುರಿತು ಸ್ಥಳೀಯ ಕಾರ್ಯಕರ್ತರೊಂದಿಗೆ ಮಾತನಾಡುತ್ತೇನೆ ಎಂದು ಸ್ವತಃ ದೇವೇಗೌಡರೇ ಹೇಳಿದ್ದಾರೆ. ಈ ಮೂಲಕ ತಾವು ಕ್ಷೇತ್ರ ಬದಲಾವಣೆ ಮಾಡಿ ಮಂಡ್ಯದಿಂದ ಸ್ಪರ್ಧಿಸುವ ಇಲ್ಲವೇ ಮತ್ತೆ ಸ್ಪರ್ಧಿಸದೇ ಇರುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.L
ಪ್ರಸ್ತುತ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ಈ ಮೈತ್ರಿಯನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸಿ ಸಂಸತ್ತಿನಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಜೆಡಿಎಸ್ ನಿರ್ಧರಿಸಿದೆ. ಹೀಗಿರುವಾಗ ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸಲು ಮುಂದಾದರೆ ಹಾಸನ ಕ್ಷೇತ್ರ ಬಿಟ್ಟುಕೊಡುವಂತೆ ಕಾಂಗ್ರೆಸ್‌ನಿಂದ ಒತ್ತಡ ಹೆಚ್ಚಬಹುದು. ಆದರೆ, ಮಂಡ್ಯದಲ್ಲಿ ವಿಧಾನಸಭೆಗೆ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲದ ಕಾರಣ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಮೇಲಾಗಿ ಅಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದೂ ಜೆಡಿಎಸ್‌ಗೆ ಕಷ್ಟದ ಕೆಲಸವೇನೂ ಅಲ್ಲ. ಹೀಗಾಗಿ ದೇವೇಗೌಡರು ಹಾಸನದಿಂದಲ್ ಸ್ಪರ್ಧಿಸಬೇಕು ಎಂಬುದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಬಹುತೇಕರ ಅಭಿಪ್ರಾಯ ಎಂದು ತಿಳಿದುಬಂದಿದೆ.
Related Articles
Advertisement
ಇಂತಹ ಸಂದರ್ಭದಲ್ಲಿ ರಾಜಕೀಯದಲ್ಲಿ ಹೆಚ್ಚು ಅನುಭವ ಇಲ್ಲದ ಪ್ರಜ್ವಲ್ ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸಿದರೆ ಅದರ ಲಾಭ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನಿಸಬಹುದು. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಬಹುದಾದರೂ ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಯಾಗಬಹುದು. ಆದರೆ, ಗೌಡರೇ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ ಈ ಜಿಲ್ಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿಯೂ ಸುಮ್ಮನಾಗಬಹುದು ಎಂಬುದನ್ನು ಪಕ್ಷದ ನಾಯಕರು ಈಗಾಗಲೇ ದೇವೇಗೌಡರ ಬಳಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯದಿಂದ ಪ್ರಜ್ವಲ್?:ಈ ಮಧ್ಯೆ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು. ಅಲ್ಲಿ ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಅವರು ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಹೇಗೂ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಹುಡುಕಬೇಕಾಗಿದೆ. ಅದರ ಬದಲು ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿದರೆ ಅಭ್ಯರ್ಥಿ ಆಯ್ಕೆಯ ಸಮಸ್ಯೆಯೂ ತಪ್ಪುತ್ತದೆ ಮತ್ತು ಎಲ್ಲಾ ಶಾಸಕರು ಜೆಡಿಎಸ್‌ನವರೇ ಆಗಿರುವುದರಿಂದ ಗೆಲ್ಲಿಸಿಕೊಳ್ಳುವುದೂ ಸುಲಭ ಎಂಬ ಮಾತು ಕೇಳಿಬರುತ್ತಿದೆ. ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ಅವರನ್ನು ಮಂಡ್ಯ ಜಿಲ್ಲೆಯಿಂದ ಕಣಕ್ಕಿಳಿಸುವ ಬಗ್ಗೆ ಸಚಿವ ಎಚ್.ಡಿ.ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಅವರೂ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ದೇವೇಗೌಡರ ನಂತರ ಹಾಸನ ಜಿಲ್ಲೆಯಲ್ಲಿ ಪಕ್ಷದ ಉಸ್ತುವಾರಿ ರೇವಣ್ಣ ಕೈಗೆ ಸಿಗುತ್ತದೆ. ಇನ್ನೊಂದೆಡೆ ಪ್ರಜ್ವಲ್ ಮಂಡ್ಯ ಸಂಸದರಾಗಿ ಆಯ್ಕೆಯಾದರೆ ಆ ಜಿಲ್ಲೆಯಲ್ಲೂ ಕುಟುಂಬದ ಶಕ್ತಿ ಹೆಚ್ಚುತ್ತದೆ. ಎರಡು ಜಿಲ್ಲೆಗಳು ತಮ್ಮ ಕೈಯ್ಯಲ್ಲಿರುತ್ತದೆ ಎಂಬ ಕಾರಣಕ್ಕಾಗಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರು ಮಂಡ್ಯ ಜಿಲ್ಲೆಯಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ದೇವೇಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ ಚುನಾವಣಾ ನಿವೃತ್ತಿ ಇಲ್ಲ
ದೇವೇಗೌಡರು ಚುನಾವಣಾ ನಿವೃತ್ತಿ ಪಡೆದು ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೆ ಎಂಬ ಊಹಾಪೋಹಗಳಿಗೂ ಜೆಡಿಎಸ್ ತೆರೆ ಎಳೆದಿದ್ದು, ಸದ್ಯಕ್ಕೆ ರಾಜಕೀಯ ನಿವೃತ್ತಿ ಪಡೆಯುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೇತರ ಮೈತ್ರಿಕೂಟ ರಚಿಸಲಾಗುತ್ತಿದ್ದು, ಒಂದೊಮ್ಮೆ ಅಧಿಕಾರಕ್ಕೆ ಬಂದರೆ ದೇವೇಗೌಡರು ಪ್ರಧಾನಿ ಅಭ್ಯರ್ಥಿಯಾಗಬಹುದು. ಇನ್ನೊಂದೆಡೆ ಕಾಂಗ್ರೆಸ್ ಜತೆಗಿನ ಮೈತ್ರಿ ಲಾಭ ಪಡೆದುಕೊಂಡು ರಾಜ್ಯದಲ್ಲಿ ಜೆಡಿಎಸ್ ಸಂಸದರನ್ನು ಹೆಚ್ಚಿಸಿಕೊಳ್ಳುವುದಕ್ಕೂ ಅನುಕೂಲವಾಗಬಹುದು. ಹೀಗಾಗಿ ದೇವೇಗೌಡರು ಕಣಕ್ಕಿಳಿಯುವುದು ಖಚಿತ ಎಂದು ಮೂಲಗಳು ತಿಳಿಸಿವೆ. – ಎಂ. ಪ್ರದೀಪ್‌ಕುಮಾರ್