Advertisement

ದೇವೇಗೌಡರು ನನ್ನ ರಾಜಕೀಯ ಗುರು: ಎ.ಮಂಜು

09:26 PM Mar 17, 2023 | Team Udayavani |

ಅರಕಲಗೂಡು: ನನ್ನ ರಾಜಕೀಯ ಜೀವನದಲ್ಲಿ ಇಂದಿನ ತನಕ ಯಾರೂ ರಾಜಕೀಯ ಗುರುಗಳು ಇರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಇಂದು ರಾಜಕೀಯ ಗುರುಗಳಾಗಿ ನನ್ನನ್ನು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ಅಭ್ಯರ್ಥಿ ಎ.ಮಂಜು ತಿಳಿಸಿದರು.

Advertisement

ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿ, ತದ್ವಿರುದ್ಧ ನಾಯಕರು ಹೇಗೆ ಒಟ್ಟಾಗಿ ಸೇರಿಕೊಂಡರು ಅಂತ ಎಲ್ಲರಿಗೂ ಅಚ್ಚರಿಯಾಗಬಹುದು. ಇದನ್ನು ನಾನೂ ಕಲ್ಪಿಸಿಕೊಂಡಿರಲಿಲ್ಲ. ದೇವೇಗೌಡರ ಆರೋಗ್ಯ ಸರಿಯಿಲ್ಲದ ಸಮಯದಲ್ಲಿ ನೋಡಲು ಹೋದಾಗ ಈ ಬಗ್ಗೆ ಚರ್ಚೆಯಾಯಿತು. ಗೌಡರು ಪಕ್ಷ ಸೇರಿಕೋ, ಒಟ್ಟಾಗಿ ಹೋಗೋಣ ಎಂದರು. ನಂಜೇಗೌಡರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದ ನನಗೆ ನನ್ನ ಕ್ಷೇತ್ರದ ಕಾರ್ಯಕರ್ತರೇ ಗುರುಗಳಾಗಿದ್ದರು. ಈಗ ನನಗೆ ನಿಜವಾದ ಗುರುಗಳು ಸಿಕ್ಕಿದ್ದಾರೆ, ಅದು ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದರು.

ಎಚ್‌.ಡಿ.ರೇವಣ್ಣನವರು ನನ್ನನ್ನು ಪ್ರೀತಿಯಿಂದ ನೋಡಿಕೊಂಡು ನಡೆಸಿಕೊಳ್ಳಬೇಕು. ಇಲ್ಲದಿದ್ದರೆ ಕಷ್ಟವಾಗುತ್ತದೆ. ಹೊಳೆನರಸೀಪುರ ಒಂದು ಕಣ್ಣು, ಅರಕಲಗೂಡು ಒಂದು ಕಣ್ಣು ಎಂದು ನೋಡಿಕೊಳ್ಳಬೇಕು. ರಾಜಕೀಯವಾಗಿ ರೇವಣ್ಣ-ನಾನು ಮಾತನಾಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ , ಇಬ್ಬರೂ ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ. ಪ್ರಾದೇಶಿಕ ಪಕ್ಷದಿಂದ ಸಮಗ್ರ ಅಭಿವೃದ್ಧಿ ಸಾಧ್ಯ. ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್‌ ಪಕ್ಷ ಸೇರಿದ್ದೇನೆ. ಅದಕ್ಕೆ ಧಕ್ಕೆ ಆಗದಂತೆ ಕೆಲಸ ಮಾಡೋಣ ಎಂದು ಹೇಳಿದರು.

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮಾತನಾಡಿ, ನನ್ನ ಮತ್ತು ಮಂಜಣ್ಣ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂದಿನ ಚುನಾವಣೆಯಲ್ಲಿ ಮಂಜಣ್ಣನನ್ನು ಗೆಲ್ಲಿಸಿ ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಎ.ಮಂಜಣ್ಣ ಜೆಡಿಎಸ್‌ ಪಕ್ಷ ಸೇರಿದ್ದಾರೆ. ಇವರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತೇವೆ. ಮಂಜಣ್ಣ ದೇವೇಗೌಡರ ಕುಟುಂಬದ ಸದಸ್ಯರಿದ್ದಂತೆ. ಮುಂದಿನ ಮೇ 18ರಂದು ದೇವೇಗೌಡರ ಹುಟ್ಟುಹಬ್ಬ. ಆ ದಿನ ದೇವೇಗೌಡರ ಮಡಿಲಿಗೆ ಮಂಜಣ್ಣನವರನ್ನು ಈ ಕ್ಷೇತ್ರದಿಂದ ಗೆಲ್ಲಿಸಿಕೊಡುತ್ತೇವೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next