Advertisement

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

11:15 PM Apr 14, 2024 | Team Udayavani |

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಮಾಡುತ್ತಿರುವ ಲೂಟಿಯನ್ನು ತಪ್ಪಿಸುವ ಸಲುವಾಗಿ ಮೋದಿ ಜತೆ ಕೈಜೋಡಿಸಲು ನಾನೇ ಕುಮಾರಸ್ವಾಮಿಗೆ ಹೇಳಿದ್ದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

Advertisement

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ 64 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ರಾಜ್ಯ ಸರಕಾರವನ್ನು ನೋಡಿಲ್ಲ. ಎಲ್ಲ ಕಡೆ ಬರೀ ಬಾಚುವುದೇ ನಡೆಯುತ್ತಿದೆ. ನಾನು ತಲೆಯಲ್ಲಿ ಬುದ್ಧಿ ಇಲ್ಲದೆ ಮೋದಿ ಅವರ ಜತೆ ಹೋಗು ಅಂತಾ ಕುಮಾರಸ್ವಾಮಿಗೆ ಹೇಳಿಲ್ಲ. ರಾಜ್ಯದಲ್ಲಿ ಲೂಟಿಯನ್ನು ತಪ್ಪಿಸುವ ಸಲುವಾಗಿಯೇ ಮೋದಿ ಜತೆ ಕೈಜೋಡಿಸಲು ಕುಮಾರಸ್ವಾಮಿಗೆ ಹೇಳಿದ್ದೆ ಎಂದು ಮೋದಿ ಅವರ ಕೈ ಹಿಡಿದು ಮೇಲಕ್ಕೆತ್ತಿದ್ದರು.

ಇಬ್ಬರು ಮಹಾನುಭವರು ಈ ರಾಜ್ಯ ಆಳುತ್ತಿದ್ದಾರೆ. ಆ ಪುಣ್ಯತ್ಮರಿಗೆ ನಮೋ ನಮಃ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ ಅವರು, ಒಬ್ಬ 6 ಕೋಟಿ ಜನರ ಪ್ರತಿನಿಧಿಸುವ ಮುಖ್ಯಮಂತ್ರಿ, 130 ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಿ ಬಗ್ಗೆ ಲಘುವಾಗಿ ಏನೇನೋ ಮಾತಾಡುತ್ತಾರೆ. ಇದನ್ನು ನೀವು ನೋಡುತ್ತಿದ್ದಿರಾ ಎಂದು ಆಕ್ರೋಶ ಹೊರಹಾಕಿದರು.

ನನಗೆ ಮೂರಲ್ಲ 28 ಕ್ಷೇತ್ರವೂ ಮುಖ್ಯ
ಯಡಿಯೂರಪ್ಪ ಅವರೇ, ಜೆಡಿಎಸ್‌ಗೆ ಸಿಕ್ಕಿರುವ 3 ಕ್ಷೇತ್ರವಷ್ಟೇ ನನಗೆ ಮುಖ್ಯವಲ್ಲ. ಎಲ್ಲ 28 ಕ್ಷೇತ್ರವೂ ಮುಖ್ಯ. ನೀವು ಎಲ್ಲಿಗೆ ಬೇಕಾದರೂ ಕರೆಯಿರಿ ಬಂದು ಪ್ರಚಾರ ಮಾಡುತ್ತೇನೆ. ಕನಿಷ್ಠ 24 ಸ್ಥಾನ ನಾವು ಗೆಲ್ಲಬೇಕು. ನಿಮಗೆ ಅಷ್ಟು ಸ್ಥಾನ ಗೆಲ್ಲಿಸಿಕೊಡುತ್ತೇನೆ ಎಂದು ಪ್ರಧಾನಿ ಮೋದಿ ಅವರಿಗೆ ಕೈ ಮುಗಿದು ಹೇಳಿದರು. ಈ ರಾಷ್ಟ್ರಕ್ಕೆ ಗೌರವ ತಂದು ಕೊಟ್ಟ ದೊಡ್ಡ ವ್ಯಕ್ತಿ ಅಂದರೆ ಅದು ಮೋದಿ. ಮೋದಿಗೆ ಎದ್ದು ನಿಂತು ಗೌರವ ತೋರಲು ಆಗಲಿಲ್ಲ. ಮಂಡಿ ನೋವಿನಿಂದ ಎದ್ದು ನಿಲ್ಲಲು ಆಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಹೇಳಿದ ಅವರು, ರಾಷ್ಟ್ರವನ್ನು ಬಲಯುತವಾಗಿ, ಶಕ್ತಿಶಾಲಿಯಾಗಿ ಬೆಳೆಸುವ ಒಂದೇ ಶಕ್ತಿ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ. ಇಂಥವರ್ಯಾರು ಇಂಡಿಯಾ ಒಕ್ಕೂಟದಲ್ಲಿ ನನ್ನ ಕಣ್ಣಿಗೆ ಕಾಣುತ್ತಿಲ್ಲ ಎಂದು ಐಎನ್‌ಡಿಐಎ ಬಗ್ಗೆ ಕುಹಕವಾಡಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next