ಮಂಡ್ಯ: ಲೋಕಸಭಾ ಚುನಾವ ಣೆಯ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಣಕ್ಕಿಳಿಯಲಿದ್ದಾರೆಂಬ ಸುದ್ದಿ ಜಿಲ್ಲಾದ್ಯಂತ ಬಿರುಗಾಳಿಯಂತೆ ಹಬ್ಬಿದ್ದು, ಚರ್ಚೆಗೆ ಗ್ರಾಸವಾಗಿದೆ. ಮೈತ್ರಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಗೊಂದಲದ ನಡುವೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ವಾಟ್ಸಾಪ್ ಸ್ಟೇಟಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಬಿಜೆಪಿ ಕಾರ್ಯಕರ್ತರು ಎನ್‌ಡಿಎಯಿಂದ ಸ್ಪರ್ಧಿಸುತ್ತಾರೆಂದರೆ, ಜೆಡಿಎಸ್ ಕಾರ್ಯಕರ್ತರು ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆಂಬ ಚರ್ಚೆಗಳು ಆರಂಭಗೊಂಡಿವೆ.
ಸಂಸದೆ ಸುಮಲತಾ ಅಂಬರೀಷ್ ಮೈತ್ರಿ ಟಿಕೆಟ್ ನನಗೆ ಸಿಗಲಿದೆ ಎಂದು ಪದೇಪದೆ ಹೇಳುತ್ತಲೇ ಇದ್ದಾರೆ. ಮತ್ತೂಂದೆಡೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಸಿಗಲಿದೆ ಎಂದು ಹೇಳಲಾಗುತ್ತಿತ್ತು. ಈಗ ದಿಢೀರನೆ ದೇವೇಗೌಡರ ಹೆಸರನ್ನು ತೇಲಿ ಬಿಡಲಾಗಿದೆ. ಇದು ಮಂಡ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ದೇವೇಗೌಡರು ಕಣಕ್ಕಿಳಿದರೆ ಏನಾಗಲಿದೆ ಎಂಬ ಚುನಾವಣೆ ಲೆಕ್ಕಾಚಾರಗಳು ಆರಂಭಗೊಂಡಿವೆ. ಕೆಲವರು ದೇವೇಗೌಡರು ಸ್ಪ ರ್ಧಿಸುವುದಿಲ್ಲ. ಸ್ಥಳೀಯರಿಗೆ ಟಿಕೆಟ್ ನೀಡಲಿದ್ದಾರೆ ಎಂಬ ಪರ-ವಿರೋಧ ಚರ್ಚೆಗಳು ಕಾರ್ಯಕರ್ತರಲ್ಲಿಯೇ ನಡೆಯುತ್ತಿದೆ. ಇದರಿಂದ ಮೈತ್ರಿ ಟಿಕೆಟ್ ಯಾರಿಗೆ ಎಂಬ ಕುತೂಹಲ ಹೆಚ್ಚಾಗಿದ್ದು, ಟಿಕೆಟ್ ಘೋಷಣೆಯವರೆಗೂ ಕಾದು ನೋಡಬೇಕಿದೆ.