ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಗಳವಾರವೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ಕಾಂಗ್ರೆಸ್‌ನ ಅತೃಪ್ತ ಶಾಸಕರ ಜತೆಯೂ ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚಿಸಿ ಸಚಿವ ಡಿ.ಕೆ.ಶಿವಕುಮಾರ್ ಜತೆ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ್ದ ಕುಮಾರಸ್ವಾಮಿ ಸಂಜೆ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿ ದೇವೇಗೌಡರ ಜತೆ ಮಾತುಕತೆ ನಡೆಸಿದರು. ಗುಲಾಂ ನಬಿ ಆಜಾದ್ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ನಿವಾಸದಲ್ಲಿ ನಡೆಸುವ ಸಚಿವರ ಸಭೆಯ ನಿರ್ಧಾರ ನೋಡಿಕೊಂಡು ಮುಂದಿನ ಹೆಜ್ಜೆ ಇಡುವಂತೆ ದೇವೇಗೌಡರು ಸಲಹೆ ನೀಡಿದರು. ದೇವೇಗೌಡರು ಸಹ ಸಂಪುಟ ಪುನಾರಚನೆಗಿಂತ ಸಂಪುಟ ವಿಸ್ತರಣೆ ಸೂಕ್ತ ಎಂಬ ನಿಲುವು ಹೊಂದಿದ್ದಾರೆ ಎಂದು ಹೇಳಲಾಗಿದೆ. ಮೂರು ಸಚಿವ ಸ್ಥಾನಗಳಲ್ಲಿ ಜೆಡಿಎಸ್‌ನ ಎರಡು ಸ್ಥಾನ ಜೆಡಿಎಸ್‌ಗೆ, ಕಾಂಗ್ರೆಸ್‌ನ ಒಂದು ಸ್ಥಾನ ಕಾಂಗ್ರೆಸ್‌ಗೆ ಸಿಗಲಿ. ಪಕ್ಷೇತರ ಶಾಸಕರಲ್ಲಿ ಕಾಂಗ್ರೆಸ್ ಒಬ್ಬರಿಗೆ ಅವಕಾಶ ಕಲ್ಪಿಸಿದರೆ, ಜೆಡಿಎಸ್ ಮತ್ತೂಬ್ಬರಿಗೆ ಅವಕಾಶ ಕಲ್ಪಿಸಿಕೊಡಬಹುದು ಎಂಬ ಚಿಂತನೆಯೂ ಜೆಡಿಎಸ್‌ನಲ್ಲಿದೆ ಎಂದು ಹೇಳಲಾಗಿದೆ.