ಮೂಡಿಗೆರೆ: ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಬಿ.ಎಲ್.ದೇವರಾಜು ಸರ್ವಾನುಮತದಿಂದ ಆಯ್ಕೆಗೊಂಡರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಸುಂದರ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ತಾಪಂ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪಕ್ರಿಯೆಯಲ್ಲಿ, ಬಣಕಲ್ ಹೋಬಳಿ ತ್ರಿಪುರ ತಾಪಂ ಕ್ಷೇತ್ರದ ಸದಸ್ಯ ಬಿ.ಎಲ್.ದೇವರಾಜು ಅವರನ್ನು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ವೇಳೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿ, ತಾಪಂ ಉಪಾಧ್ಯಕ್ಷೆಯಾಗಿದ್ದ ಸವಿತಾ ರಮೇಶ್, ಈ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆ ಜು.22ರಂದು ಅಂಗೀಕಾರಗೊಂಡಿತ್ತು. ಜನರಿಂದ ನಾವು ಆರಿಸಿ ಬಂದಿದ್ದೇವೆ. ಜನರ ಕೆಲಸ ಮಾಡಬೇಕಾಗಿದ್ದು ನಮ್ಮ ಕರ್ತವ್ಯ. ತಾಲೂಕಿನಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ತಾಪಂ ವ್ಯಾಪ್ತಿಯಲ್ಲಿ ಇತ್ಯರ್ಥಪಡಿಸಬೇಕು. ಎಲ್ಲಾ ಸದಸ್ಯರು ಒಗ್ಗೂಡಿ ಕೆಲಸ ಮಾಡಿದ್ದರಿಂದ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಬಗೆಹರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಪಂ ಮಾಜಿ ಉಪಾಧ್ಯಕ್ಷೆ ಸವಿತಾ ರಮೇಶ್, ಅಧಿಕಾರ ಶಾಶ್ವತವಲ್ಲ. ನಾವು ಅಧಿಕಾರದಲ್ಲಿದ್ದಾಗ ಏನು ಸಾಧಿಸಿದ್ದೇವೆ ಎಂಬುದು ಪ್ರಮುಖವಾಗಿರುತ್ತದೆ. ಗೃಹಿಣಿಯಾಗಿ ಮನೆಯಲ್ಲಿದ್ದ ತನ್ನನ್ನು ಬಿಜೆಪಿ ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದೆ. ಗೆಲುವು ಪಡೆದ ನಂತರ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದೆ. ಇದಕ್ಕಾಗಿ ತಾನು ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ತಾಪಂ ಮಾಜಿ ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಂದರ್ ಕುಮಾರ್ ಹಾಗೂ ಮೂಡಿಗೆರೆಯಲ್ಲಿ ಸಹಾಯಕ ಕೃಷಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ಈಗ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಯಾಗಿ ಬೆಳ್ತಂಗಡಿಗೆ ಬಡ್ತಿಗೊಂಡಿರುವ ಕುಮುದಾ ಅವರನ್ನು ಸನ್ಮಾನಿಸಲಾಯಿತು.
ನಂತರ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಬಿ.ಎಲ್.ದೇವರಾಜು ಅವರನ್ನು ಜಿಪಂ, ತಾಪಂ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಅಭಿನಂದಿಸಿದರು.
ಜಿಪಂ ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೇಶ್, ಸದಸ್ಯರಾದ ವೀಣಾ ಉಮೇಶ್, ಭಾರತೀ ರವೀಂದ್ರ, ಪ್ರಮೀಳಾ, ತಾಪಂ ಕಾರ್ಯ ನಿರ್ವಹಣಾಧಿಕಾರಿ ವೆಂ.ವೆಂಕಟೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿದೇರ್ಶಕ ಅಮೀನ್ ಅಹಮ್ಮದ್, ಶಿಕ್ಷಣ ಇಲಾಖೆಯ ಗಣೇಶಪ್ಪ, ಬಿಜೆಪಿ ಮುಖಂಡರಾದ ಸುದರ್ಶನ್, ಪಂಚಾಕ್ಷರಿ, ಗಜೇಂದ್ರ ಕೊಟ್ಟಿಗೆಹಾರ, ಬಿ.ಎನ್.ಮುತ್ತಪ್ಪ, ಯೋಗೇಶ್ ಪೂಜಾರಿ, ಅಶ್ವತ್ಥ ಬೆಟ್ಟಗೆರೆ ಮತ್ತಿತರರು ಉಪಸ್ಥಿತರಿದ್ದರು.