ಕನ್ನಡ ಚಿತ್ರರಂಗದಲ್ಲಿ ದೇವರಾಜ್ ಅಂದಾಕ್ಷಣ, ಹಾಗೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರ ನೆನಪಾಗುತ್ತೆ. ಆರಂಭದಲ್ಲಿ ಪೊಲೀಸ್ ಅಧಿಕಾರಿ ಪಾತ್ರಗಳಿಗೆ ಜೀವ ತುಂಬುವ ಮೂಲಕ ನೋಡುಗರ ಅಚ್ಚುಮೆಚ್ಚಿನ ನಟ ಎನಿಸಿಕೊಂಡವರು ದೇವರಾಜ್. ಇತ್ತೀಚೆಗೆ ಅವರು ಒಂದಷ್ಟು ಪ್ರಯೋಗಾತ್ಮಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ವಿಶೇಷ ಎನಿಸುವಂತಹ ಪಾತ್ರಗಳನ್ನೂ ಒಪ್ಪಿ ಅಪ್ಪಿಕೊಳ್ಳುತ್ತಿದ್ದಾರೆ.
ಅಪ್ಪನಾಗಿ, ತಾತನಾಗಿ ನಟಿಸಿ ಸೈ ಎನಿಸಿಕೊಂಡರು. ಇನ್ನೆಲ್ಲೋ ಸಾಫ್ಟ್ ಪಾತ್ರ ನಿರ್ವಹಿಸಿ ಜನ ಮೆಚ್ಚುಗೆ ಪಡೆದುಕೊಂಡರು. ಈಗ ಇದೇ ಮೊದಲ ಬಾರಿಗೆ ಅವರು ಚಿತ್ರವೊಂದರಲ್ಲಿ ಅಂಧರಾಗಿ ಕಾಣಿಸಿಕೊಂಡಿದ್ದಾರೆ. “ಕವಚ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರು ಮೊದಲ ಸಲ ಅಂಧರಾಗಿ ನಟಿಸಿದರೆ, ದೇವರಾಜ್ ಅವರು ಮೊದಲ ಬಾರಿಗೆ “3 ಗಂಟೆ 30 ದಿನ 30 ಸೆಕೆಂಡ್’ ಚಿತ್ರದಲ್ಲಿ ಅಂಧರಾಗಿ ಅಭಿನಯಿಸಿದ್ದಾರೆ.
ಆ ಚಿತ್ರದಲ್ಲಿ ದೇವರಾಜ್ ಅಂಧರಾಗಿ ಕಾಣಿಸಿಕೊಂಡಿರುವುದೇಕೆ ಎಂಬುದಕ್ಕೆ ಸಿನಿಮಾ ನೋಡಬೇಕು. ಅದರಲ್ಲೂ ದೇವರಾಜ್ ಅವರು ಅಂಧ ಪಾತ್ರ ಒಪ್ಪಲು ಕಾರಣ, ನಿರ್ದೇಶಕ ಮಧುಸೂದನ್ ಅವರು ಹೆಣೆದಿರುವ ಕಥೆ ಮತ್ತು ಪಾತ್ರ. ಮೊದಲ ಬಾರಿಗೆ ಈ ಚಿತ್ರವನ್ನು ಮಧುಸೂದನ್ ನಿರ್ದೇಶಿಸಿದ್ದರೂ, ಕಥೆ ಹಾಗು ಪಾತ್ರದಲ್ಲಿ ತೂಕವಿದೆ ಎಂಬ ಕಾರಣಕ್ಕೆ ದೇವರಾಜ್ ಆ ಪಾತ್ರ ಒಪ್ಪಿ ಕ್ಯಾಮೆರಾ ಮುಂದೆ ನಿಂತಿದ್ದಾರೆ.
ಈಗಾಗಲೇ “3 ಗಂಟೆ, 30 ದಿನ 30 ಸೆಕೆಂಡ್’ ಚಿತ್ರದ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಇಡೀ ತಂಡಕ್ಕೆ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇದೆ. ನಿರ್ಮಾಪಕ ಚಂದ್ರಶೇಖರ್ ಆರ್.ಪದ್ಮಶಾಲಿ ಅವರು ಎರಡು ದಶಕದ ಗೆಳೆತನದಿಂದಾಗಿ ಮಧುಸೂದನ್ ಅವರಿಗೆ ಈ ಚಿತ್ರ ನಿರ್ದೇಶನಕ್ಕೆ ಸಾಥ್ ಕೊಟ್ಟಿದ್ದಾರೆ. ಅಂದಹಾಗೆ, ಇದೊಂದು ಹೃದಯ ಮತ್ತು ಬ್ರೈನ್ ನಡುವಿನ ಕಥೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದು, ಈ ಚಿತ್ರದಲ್ಲಿ ಒಂದು ಹಾಡನ್ನು ಪೂರ್ಣ ಪ್ರಮಾಣವಾಗಿ ಹಾಡಿದ್ದಾರೆ.