Advertisement

ಕಂದಾಚಾರದ ಸಮಾಜಕ್ಕೆ ಬೆಳಕು ತೋರಿದ ದಾಸಿಮಯ್ಯ

06:50 AM Apr 06, 2018 | |

ಉಡುಪಿ: ಹತ್ತನೇ ಶತಮಾನದ ಸಮಾಜದಲ್ಲಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ದೂರ ಮಾಡಲು ಹುಟ್ಟಿದ ಮಹಾತ್ಮರಲ್ಲಿ ದೇವರ ದಾಸಿಮಯ್ಯ ಕೂಡ ಒಬ್ಬರು. ಅವರು ಸಮಾಜಕ್ಕೆ ಬೆಳಕಾದವರು ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ಅಭಿಪ್ರಾಯಪಟ್ಟರು.

Advertisement

ಎ. 5ರಂದು ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಪದ್ಧತಿಯ ವಿರುದ್ಧ ಜಾಗೃತಿ
ಅಹಂಕಾರ ತೊರೆದು ಕಾಯಕದಲ್ಲಿ ತೊಡಗಿಕೊಳ್ಳುವಂತೆ ಹೇಳಿದ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಜಾತಿಪದ್ಧತಿಯ ವಿರುದ್ಧ ಜನರನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. ಸ್ತ್ರೀಸಮಾನತೆಯ ಪರವಾಗಿಯೂ ದನಿ ಎತ್ತಿದ್ದರು ಎಂದು ಅನುರಾಧಾ ಹೇಳಿದರು.

ಪ್ರಕೃತಿಯಲ್ಲೇ ದೇವರನ್ನು ಕಂಡರು
ವಿಶೇಷ ಉಪನ್ಯಾಸ ನೀಡಿದ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ನಿಕೇತನ ಅವರು “ದಾಸಿಮಯ್ಯ ಅವರು ಪ್ರಕೃತಿಯಲ್ಲೇ ದೇವರನ್ನು ಕಂಡವರು. ಆದಿ ಪ್ರಕೃತಿ ಮತ್ತು ಜೀವ ಪ್ರಕೃತಿಯ ಮೂಲಕ ನಿಸರ್ಗ ಮತ್ತು ಮನುಷ್ಯ ಸಂಬಂಧವನ್ನು ನಿರೂಪಿಸಿದ್ದಾರೆ. ಪ್ರತಿಯೊಂದು ಕಾಯಕವೂ ಪವಿತ್ರ ಎಂದಿದ್ದ ದಾಸಿಮಯ್ಯ ಮಾನವೀಯತೆಯನ್ನು ಕೂಡ ಪ್ರತಿಪಾದಿಸಿದ್ದರು. ದೇಹ ಮಣ್ಣಾಗುವ ಮೊದಲೇ ಪಾರಮಾರ್ಥಿಕ ಸತ್ಯ ತಿಳಿಯಬೇಕೆಂಬ ನಿಲುವು ಅವರದಾಗಿತ್ತು’ ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು. ಶಂಕರ್‌ದಾಸ್‌ ನಿರೂಪಿಸಿದರು.

Advertisement

ಆದ್ಯ ವಚನಕಾರ
ದೇವರ ದಾಸಿಮಯ್ಯ ಅವರು 1165ನೇ ಇಸವಿಯಲ್ಲಿ ಬದುಕಿದ್ದ ಆದ್ಯವಚನಕಾರರು. ಅನಂತರ ವಚನ ಚಳವಳಿಯೇ ಉಂಟಾಯಿತು. ನೇಕಾರ ವೃತ್ತಿಯ ಜತೆಗೆ ಪಾರಮಾರ್ಥಿಕ ಸಾಧನೆ ಮಾಡಿದ ದಾಸಿಮಯ್ಯ ಅವರು 150ಕ್ಕೂ ಅಧಿಕ ವಚನಗಳನ್ನು ರಚಿಸಿರುವ ಮಾಹಿತಿ ಸಂಶೋಧನೆಗಳಿಂದ ಲಭ್ಯವಾಗಿದೆ. ಅವರ ಚಿಂತನೆಗಳು ವಿಶ್ವಭಾÅತೃತ್ವ, ವಿಶ್ವಪ್ರೀತಿಯನ್ನು ಸಾಂಕೀತಿಸುತ್ತವೆ.

– ಡಾ| ನಿಕೇತನ

Advertisement

Udayavani is now on Telegram. Click here to join our channel and stay updated with the latest news.

Next