ದೇವನಹಳ್ಳಿ:ವಿಧಾನಸಭಾ ಕ್ಷೇತ್ರಗಳ ಮತದಾರರ ವಿಶೇಷ ಪರಿಷ್ಕರಣೆ-2020ರ ಸಂಬಂಧ, ಜನವರಿ 6 ರಿಂದ 8ರವರೆಗೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಸಭೆ:ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಮತದಾರರ ವಿಶೇಷ ಪರಿಷ್ಕರಣೆ-2020, ರಾಷ್ಟ್ರೀಯ ಮತದಾರರ ದಿನಾಚರಣೆಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳುವ ಬಗ್ಗೆ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯ ಸಂಬಂಧ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಮತ್ತು ಮತದಾನ ಕೇಂದ್ರಗಳನ್ನು ಗುರುತಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಚಾರ ಕಾರ್ಯ ಹಮ್ಮಿಕೊಳ್ಳಿ:ಮತದಾರರ ಪಟ್ಟಿಗಳ ಪರಿಷ್ಕರಣೆಯ ಭಾಗವಾಗಿ 2020 ರ ಜನವರಿ 6 ರಿಂದ 8 ರವರೆಗೆ ಎಲ್ಲಾ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ಕಾರ್ಯವನ್ನು ಏರ್ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಿಂಚಿನ ನೋಂದಣಿ ಕಾರ್ಯ ನಡೆಯುವ ದಿನಗಳಂದು ಎಲ್ಲಾ ಬಿಎಲ್‌ಓಗಳು ತಪ್ಪದೇ ಮತಗಟ್ಟೆಗಳಲ್ಲಿ ಉಪಸ್ಥಿತರಿರಬೇಕು. ಮಿಂಚಿನ ನೋಂದಣಿ ಕಾರ್ಯವನ್ನು ಎಲ್ಲಾ ಕಾಲೇಜುಗಳಲ್ಲಿ ಏರ್ಪಡಿಸಿ, ಹೆಚ್ಚಿನ ಯುವ ಮತದಾರರ ನೋಂದಣಿಗೆ ಕ್ರಮ ವಹಿಸಬೇಕು ಹಾಗೂ ಮಿಂಚಿನ ನೋಂದಣಿ ಕಾರ್ಯ ನಡೆಯುವ ಬಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ-2020 ಸಂಬಂಧಿಸಿದಂತೆ, ಮತದಾರರ ಪಟ್ಟಿಗಳ
ಕರಡು ಪ್ರಕಟಣೆ ಮಾಡಿದ ಡಿಸೆಂಬರ್ 7 ರಿಂದ 23 ರವರೆಗೆ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಜನವರಿ 5 ರೊಳಗೆ ವಿಲೇವಾರಿ ಮಾಡಲು, ಅಂಗೀಕರಿಸಲಾದ/ಪುರಸ್ಕರಿಸಲಾದ ಅರ್ಜಿಗಳ ಮಾಹಿತಿ ಖಚಿತಪಡಿಸಿಕೊಂಡು ಮತದಾರರ ವಿವರವನ್ನು ತಂತ್ರಾಂಶದಲ್ಲಿ ಜನವರಿ 8 ರೊಳಗೆ ದಾಖಲಿಸಲು ಹಾಗೂ ಪೂರಕ ಪಟ್ಟಿಗಳನ್ನು ಒಳಗೊಂಡ ಅಂತಿಮ ಮತದಾರರ ಪಟ್ಟಿಗಳನ್ನು ಜನವರಿ 16 ರಂದು ಪ್ರಕಟಿಸಲು ಕ್ರಮ ಕೈಗೊಳ್ಳಬೇಕೆಂದರು.
ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿ:10ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಈ ಬಾರಿಯ ಧ್ಯೇಯ, ಸದೃಢ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಸಾಕ್ಷರತೆ ಆಗಿರುತ್ತದೆ. ಜನವರಿ 25 ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಮತದಾರರ ದಿವಸವನ್ನು ಎಲ್ಲಾ ಮತಗಟ್ಟೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಆಚರಿಸಬೇಕು ಹಾಗೂ ಹೊಸದಾಗಿ ನೋಂದಾಯಿಸಿದ ಮತದಾರರಿಗೆ ನೂತನ ಎಪಿಕ್ ಕಾರ್ಡ್ಗಳನ್ನು ವಿತರಿಸಬೇಕು.ಶಾಲಾ ಕಾಲೇಜುಗಳಲ್ಲಿ ಮತದಾರರ ದಿನಾಚರಣೆ ಕುರಿತ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್. ಕೆ.ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪುಷ್ಪಾ ರಾಯ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ತಾಲೂಕು ತಹಶೀಲ್ದಾರರು, ಶಿರಸ್ತೇದಾರರು ಉಪಸ್ಥಿತರರಿದ್ದರು.