ದೇವನಹಳ್ಳಿ: ಬಹುದಿನಗಳಿಂದ ಜನರ ನಿರೀಕ್ಷೆ ಜಿಲ್ಲಾ ಕೇಂದ್ರ ಘೋಷಣೆಗೆ ಕಾತುರ ದಿಂದ ಇದ್ದಾರೆ. ಜಿಲ್ಲಾ ಕೇಂದ್ರವನ್ನಾಗಿ ಆದಷ್ಟು ಬೇಗ ಘೋಷಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ಪಟ್ಟಣದ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜಿಲ್ಲಾ ಕೇಂದ್ರದ ಸಂಬಂಧಪಟ್ಟಂತೆ ಚರ್ಚಿಸಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರೂ ಜಿಲ್ಲಾಕೇಂದ್ರಕ್ಕೆ ಸಂಬಂಧಪಟ್ಟಂತೆ ಚರ್ಚಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಲಿದ್ದಾರೆಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳು ವೇಗವಾಗಿ ಬೆಳೆಯುತ್ತಿದೆ. ಕಾಡುಗೋಡಿವರೆಗೆ ಮೆಟ್ರೋ ರೈಲು ಬರಲಿದ್ದು, ಹೊಸಕೋಟೆವರೆಗೆ ವಿಸ್ತರಿಸಲು ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದೇನೆ.
ಇದನ್ನೂ ಓದಿ:- ದೀಪಾವಳಿ: ಈ ಬಾರಿ ಗ್ರಾಹಕರ ಕೈ ಸುಡುವ ಪಟಾಕಿಗಳು!
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವುದರಿಂದ ಹೆಚ್ಚು ಬೆಳೆಯುತ್ತಿರುವುದರಿಂದ ದೇವನಹಳ್ಳಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ ಮತ್ತು ಸಬರ್ಬನ್ ರೈಲ್ವೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆಂದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದರಿಂದ 4 ತಾಲೂಕು ಬಹುವೇಗವಾಗಿ ಬೆಳೆಯುತ್ತಿವೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಕೈಗಾರಿಕೋದ್ಯಮ ಕಂಪನಿಗಳು ಪ್ರಾರಂಭವಾಗಿವೆ ಎಂದರು.
ಮುಖ್ಯಮಂತ್ರಿಗಳು 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಹೊಸ ಕಾರ್ಯಕ್ರಮ ರೂಪಿಸಿದ್ದು ಕಾರ್ಯಗತವಾಗಿವೆ. ಮುಂದಿನ ದಿನಗಳಲ್ಲಿ ನಗರ, ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದರ್ಜೆಗೇರಿಸಿರುವ ನಗರಗಳಿಗೆ ಎಸ್‌ಎಫ್ಸಿಎಸ್ ಅನುದಾನದಡಿ ನಗರೋತ್ಥಾನ 4ನೇ ಹಂತ, ಕೇಂದ್ರ ಸರ್ಕಾರದ 14-5ನೇ ಹಣಕಾಸಿನಡಿ ಅಭಿವೃದ್ಧಿಗೆ ಸಾಕಷ್ಟು ಹಣವನ್ನು 22-23ನೇ ಸಾಲಿನಲ್ಲಿ ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಿಎಂ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.