ದೇವಕಾನ ಕೃಷ್ಣ ಭಟ್ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ಯಕ್ಷಗಾನ ಇವರನ್ನು ತೀವ್ರವಾಗಿ ಆಕರ್ಷಿಸಿದ ಕಲೆ. ಆದುದರಿಂದ ಅಧ್ಯಾಪನ ವೃತ್ತಿಯ ನಡುವೆಯೂ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುವುದು, ವೇಷ ಕಟ್ಟುವುದು, ಆಟ ನೋಡುವುದು …ಹೀಗೆ ಯಕ್ಷಗಾನ ಹವ್ಯಾಸದಿಂದ ಸಂತೋಷವನ್ನು ಅನುಭವಿಸಿದವರಿವರು.
ಪೈವಳಿಕೆ ಹೈಸ್ಕೂಲಿನಲ್ಲಿ ಹಳೆವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಇಂದ್ರಜಿತು ಕಾಳಗ ಯಕ್ಷಗಾನ ಪ್ರದರ್ಶನದಲ್ಲಿ ಇಂದ್ರಜಿತುವಾಗಿ ರಂಗಸ್ಥಳಕ್ಕೆ ಕಾಲಿಟ್ಟ ದೇವಕಾನ ಕೃಷ್ಣಭಟ್ ಅನಂತರದ ದಿನಗಳಲ್ಲಿ ದಕ್ಷ, ಅರ್ಜುನ, ಕಾರ್ತವೀರ್ಯ, ಜಮದಗ್ನಿ, ರಾವಣ, ಕಂಸ, ಮಧು-ಕೈಟಭ, ಶುಂಭ, ರಕ್ತಬೀಜ ಮುಂತಾದ ನೂರಾರು ಪಾತ್ರಗಳಲ್ಲಿ ರಂಗಸ್ಥಳ ಹುಡಿ ಹಾರಿಸಿದರು.
ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷ-ಭೂಷಣಗಳ ಬಗೆಗೆ ಹೆಚ್ಚಿನ ಆಸಕ್ತಿ ಹೊಂದಿದ ದೇವಕಾನದವರು ಬಿಡುವು ಇದ್ದಾಗಲೆಲ್ಲಾ ಚೌಕಿಯಲ್ಲೇ ಕುಳಿತು ಹಿರಿಯ ಕಲಾವಿದರ ವೇಷಗಳನ್ನು ನೋಡಿ, ಅವರಿಂದ ಕೇಳಿ ಅನೇಕ ಮಾಹಿತಿ ಸಂಗ್ರಹಿಸಿಕೊಂಡವರು. ಕುಬಣೂರು ಶ್ರೀಧರ ರಾವ್, ಪೆರಡಂಜಿ ಗೋಪಾಲಕೃಷ್ಣ ಭಟ್, ಉಪ್ಪಳ ಕೃಷ್ಣ ಮಾಸ್ಟ್ರೆ, ಕೈರಂಗಳ ಸಂಘ, ಕೋಡಪದವು ತಂಡ ಮೊದಲಾದ ತಂಡಗಳ ಯಕ್ಷಗಾನಕ್ಕೆ ಮೇಕಪ್‌ಮ್ಯಾನ್ ಆಗಿ ಹೋಗುತ್ತಿದ್ದ ಕೃಷ್ಣಭಟ್ಟರು ಯಕ್ಷಗಾನ ಪ್ರಸಾದನ ಕಲೆಯಲ್ಲಿ ಪರಿಣತರಾದರು.ಮಾಗಿದ ಅನುಭವದಿಂದ 1985ರಲ್ಲಿ ಇವರು ಪ್ರಸಾದನ ಕಲೆಗಾಗಿಯೇ ಸ್ಥಾಪಿಸಿದ ಸಂಸ್ಥೆ ಶ್ರೀ ಗಣೇಶ ಕಲಾವೃಂದ, ಪೈವಳಿಕೆ.
ದೇವಕಾನ ಕೃಷ್ಣಭಟ್ಟರ ವೇಷಭೂಷಣಗಳೆಂದರೆ ಅತ್ಯಂತ ಸೊಗಸು, ಅಚ್ಚುಕಟ್ಟು. ಒಂದು ಹೇರ್‌ಪಿನ್ ಕೂಡಾ ವೇಷಧಾರಿಗಳು ತರಬೇಕಾಗಿಲ್ಲ. ಅಷ್ಟೂ ಸಮೃದ್ಧ ಆ ವ್ಯವಸ್ಥೆ. ಕೆಲಸಕ್ಕೆ ಬೇಕಾಗುವಷ್ಟು ನುರಿತ ಪ್ರಸಾದನ ಕಲಾಕಾರರು. ಅವರೆಲ್ಲರೂ ತಾಳ್ಮೆಯಿಂದ ವೇಷಕಟ್ಟುವ ರೀತಿಯೇ ಒಂದು ಖುಷಿ. ಅಂದ-ಆಯ-ಆಕಾರ-ಸೇವೆ ಮುಂತಾದ ಕಾರಣಗಳಿಂದ ದೇವಕಾನದವರ ವೇಷಭೂಷಣಗಳೆಂದರೆ ಕಲಾವಿದರಿಗೆಲ್ಲಾ ಒಂಥರಾ ಹಿಗ್ಗು.
ಪೇಲವವಾಗಿದ್ದ ಯಕ್ಷಗಾನದ ವೇಷಭೂಷಣಗಳಿಗೆ ಹೊಸ ಮೆರಗನ್ನಿತ್ತ ದೇವಕಾನದವರ ವೇಷಭೂಷಣ ಜಪಾನ್, ಲಂಡನ್, ಅಮೆರಿಕ ದೇಶಗಳಿಗೂ ಹೋಗಿ ನೆಲೆನಿಂತಿದೆ. ಇವರ ಆಹಾರ್ಯದ ಸೌಂದರ್ಯ ವಿದೇಶಯರನ್ನೂ ಆಕರ್ಷಿಸಿದೆ. ನಾನು ಹೊಸತೇನನ್ನೂ ಮಾಡಿಲ್ಲ. ಇರುವ ವೇಷ-ಭೂಷಣಗಳ ಸೊಗಸಿಗೆ ಇನ್ನಷ್ಟು ಮೆರುಗು ನೀಡಿದ್ದೇನೆ ಎಂದು ವಿನೀತರಾಗಿ ಹೇಳುತ್ತಿದ್ದ ದೇವಕಾನ ಕೃಷ್ಣಭಟ್ಟರು ಆಹಾರ್ಯದ ರಚನೆಯಲ್ಲಿ ಹೊಸಹಿತ್ಲು ಮಹಾಲಿಂಗ ಭಟ್, ಕ್ರಿಶ್ಚಿಯನ್ ಬಾಬು ಮೊದಲಾದ ಕಲಾವಿದರ ಸಲಹೆಯನ್ನು ಪಡೆದಿದ್ದಾರೆ. ಧರ್ಮಸ್ಥಳ ಮೇಳದ ವೇಷಭೂಷಣಗಳನ್ನು ಮೆಚ್ಚಿಕೊಂಡ ದೇವಕಾನ ತನ್ನ ಸಂಸ್ಥೆಯಲ್ಲಿ ಅದನ್ನೆ ಅನುಸರಿಸಿದವರು.
ಕೃಷ್ಣಭಟ್ಟರು ಎಡನೀರು ಮೇಳದಲ್ಲಿ ಹವ್ಯಾಸಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಕರ್ನಾಟಕ ಕಲಾದರ್ಶಿನಿ ಪ್ರಶಸ್ತಿ, ಎಡನೀರು ಶ್ರೀಗಳ ಸಮ್ಮಾನ ಹೀಗೆ ಅನೇಕ ಸಮ್ಮಾನ, ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಅರ್ಥದಾರಿ, ವೇಷಧಾರಿ, ಪ್ರಸಾದನ ಕಲಾಕಾರ ಹೀಗೆ ಬಹುಮುಖದ ಸೇವೆಯನ್ನು ಯಕ್ಷಗಾನಕ್ಕೆ ಸಲ್ಲಿಸುತ್ತಾ ಕಲೆಯನ್ನೇ ಉಸಿರಾಡುತ್ತಿದ್ದ ಅಧ್ಯಾಪಕ ದೇವಕಾನ ಕೃಷ್ಣಭಟ್ಟರು ಕಲಾವೃಂದವನ್ನು ಅಗಲಿದ್ದಾರೆ. ಏನು ಮಾಡೋಣ? ಕಾಲನ ಮುಂದೆ ಕಣ್ಣೀರು ಹರಿಸುವುದಷ್ಟೇ ನಮ್ಮಿಂದ ಸಾಧ್ಯ.
ತಾರಾನಾಥ ವರ್ಕಾಡಿ