Advertisement

ದೇವೇಗೌಡರ ವಿಜಯಕ್ಕೆ “ಬಸವ’ನ ಕಾಟ

09:20 AM Apr 09, 2019 | Team Udayavani |

ತುಮಕೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪ್ರವೇಶದಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ಗೌಡರು ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಇವರ ಎದುರಾಳಿಯಾಗಿ ನಾಲ್ಕು ಬಾರಿ ಸಂಸದರಾಗಿರುವ ಜಿ.ಎಸ್‌.ಬಸವರಾಜು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಈ ಇಬ್ಬರು ನಾಯಕರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Advertisement

ಕಣ ಚಿತ್ರಣ: ತುಮಕೂರು ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ. ಈ ಕ್ಷೇತ್ರದಿಂದ 10 ಬಾರಿ ಕಾಂಗ್ರೆಸ್‌ ಸಂಸದರು ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಬಿಜೆಪಿ ಸಂಸದರು ಸಂಸತ್‌ ಪ್ರವೇಶಿಸಿದ್ದು, ಒಂದು ಬಾರಿ ಜೆಡಿಎಸ್‌ ಮತ್ತು ಒಂದು ಬಾರಿ ಪ್ರಜಾ ಸೋಷಲಿಸ್ಟ್‌ ಪಾರ್ಟಿ (ಪಿಎಸ್‌ಪಿ) ಗೆಲುವು ಸಾಧಿಸಿದೆ.

ಈವರೆಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗುತ್ತಿದ್ದ ದೇವೇಗೌಡರು, ಈ ಬಾರಿ ತಮ್ಮ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಬಿಟ್ಟು ಕೊಟ್ಟು ತುಮಕೂರಿಗೆ ವಲಸೆ ಬಂದಿದ್ದಾರೆ. ಹಾಲಿ ಸಂಸದ, ಕಾಂಗ್ರೆಸ್‌ನ ಎಸ್‌.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್‌ ತಪ್ಪಿಸಿ, ಜೆಡಿಎಸ್‌ ಅಭ್ಯರ್ಥಿಯಾಗಿ ದೇವೇಗೌಡರು ಸ್ಪರ್ಧಿಸಿರುವುದರಿಂದ ಕಾಂಗ್ರೆಸ್‌ನಲ್ಲಿ ಬಂಡಾಯ ಬೂದಿ ಮುಚ್ಚಿದ ಕೆಂಡದಂತಿದೆ.

ವೀರಶೈವರು, ಒಕ್ಕಲಿಗರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತಗಳೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಎರಡು ಪ್ರಬಲ ಕೋಮುಗಳಾದ ವೀರಶೈವ ಮತ್ತು ಒಕ್ಕಲಿಗ ಸಮುದಾಯದ ಇಬ್ಬರು ನಾಯಕರಾದ ಬಸವರಾಜು ಮತ್ತು ದೇವೇಗೌಡರು ಸ್ಪರ್ಧಿಸಿದ್ದಾರೆ.

ಒಳಬೇಗುದಿ ಮೀಟಿಯಾರೆ ಗೌಡರು?: ಒಕ್ಕಲಿಗರು ದೇವೇಗೌಡರನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದರೆ, ವೀರಶೈವರು ಬಸವರಾಜು ಪರ ಇದ್ದಾರೆ ಎನ್ನಲಾಗಿದೆ. ಟಿಕೆಟ್‌ ಕೈತಪ್ಪಿದ್ದರಿಂದ ಕಾಂಗ್ರೆಸ್‌ನಲ್ಲಿ ಒಳ ಬೇಗುದಿ ಇದೆ. ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ನೇರವಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಗೆ ಹೇಮಾವತಿ ನೀರು ಹರಿಯಲು ದೇವೇಗೌಡರು ಮತ್ತು ಅವರ ಮಕ್ಕಳು ತೊಂದರೆ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ.

Advertisement

ಬಸವರಾಜು ಅವರು ನಾಲ್ಕು ಬಾರಿ ಸಂಸದರಾಗಿ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ. ದೇವೇಗೌಡರು ಗೆದ್ದರೆ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎನ್ನುವ ಮಾತುಗಳೊಂದಿಗೆ ಮಿತ್ರ ಪಕ್ಷಗಳು ಎದುರಾಳಿಗಳಿಗೆ ಮಾತಿನ ಚಾಟಿ ಬೀಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಅಲೆ ಇರುವಂತೆಯೇ ಜೆಡಿಎಸ್‌, ಕಾಂಗ್ರೆಸ್‌ ಅಲೆಯೂ ಇದೆ. ಒಕ್ಕಲಿಗರ ಜೊತೆಗೆ ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳು ಬರುತ್ತವೆ. ಉಳಿದಂತೆ ಹಿಂದುಳಿದ ವರ್ಗಗಳ ಮತಗಳು ಹೆಚ್ಚು ಬರುತ್ತವೆ. ಹೀಗಾಗಿ, ಗೆಲುವಿನ ಹಾದಿ ಸುಲಭ ಎನ್ನುವ ಅಭಿಪ್ರಾಯ ಜೆಡಿಎಸ್‌ನದು.

ಸ್ಥಳೀಯರು ಎಂಬುದು ಪ್ಲಸ್‌ ಪಾಯಿಂಟ್‌: ಬಸವರಾಜು ಅವರು ಮೋದಿ ಅಲೆಯ ಮೇಲೆ ನಿಂತಿದ್ದಾರೆ. ವೀರಶೈವರು ಮತ್ತು ಬಿಜೆಪಿಯ ಮೇಲೆ ಅಭಿಮಾನ ಇಟ್ಟಿರುವ ಎಲ್ಲ ಸಮುದಾಯದ ಮತಗಳು ತಮಗೆ ಬರುತ್ತವೆ. ಹೀಗಾಗಿ, ಗೆಲುವು ಸುಲಭ ಎನ್ನುವ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರಿಗೆ ಮತ ನೀಡಬೇಕೋ, ವಲಸೆ ಬಂದವರಿಗೆ ಮತ ನೀಡಬೇಕೋ, ನೀವೇ ಯೋಚಿಸಿ ಎಂದು ಬಿಜೆಪಿಯವರು ಮತದಾರರ ಬಳಿ ಪ್ರಶ್ನಿಸುತ್ತಿದ್ದಾರೆ.

ನಿರ್ಣಾಯಕ ಅಂಶ: ಒಕ್ಕಲಿಗ, ವೀರಶೈವ ಜೊತೆಗೆ, ಕುರುಬ, ಯಾದವ, ನಾಯಕರ ಮತಗಳು ಯಾರ ಕಡೆ ಹೋಗುತ್ತವೆ ಎನ್ನುವುದು ಕುತೂಹಲಕಾರಿ ಅಂಶ. ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿರುವ ಹಿಂದುಳಿದ ವರ್ಗಗಳ ಮತಗಳು ಯಾರ ಕೈ ಹಿಡಿಯುತ್ತವೆ ಎನ್ನುವುದರ ಮೇಲೆ ಗೆಲುವು ನಿಂತಿದೆ. ದೇವೇಗೌಡರಿಗೆ ತಮ್ಮದೇ ಆದ ವರ್ಚಸ್ಸಿನ ಬೆಂಬಲವಿದ್ದರೆ, ಬಸವರಾಜುಗೆ ಸ್ಥಳೀಯರು ಎಂಬುದು ಪ್ಲಸ್‌ ಪಾಯಿಂಟ್‌.

ಕ್ಷೇತ್ರವ್ಯಾಪ್ತಿ: ಈ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. 3 ವಿಧಾನಸಭಾ ಕ್ಷೇತ್ರಗಳು ಜೆಡಿಎಸ್‌ ತೆಕ್ಕೆಯಲ್ಲಿದ್ದು, ಇನ್ನುಳಿದ ಒಂದು ಕ್ಷೇತ್ರ ಮಾತ್ರ ಕಾಂಗ್ರೆಸ್‌ ಕೈಯಲ್ಲಿದೆ. ಗುಬ್ಬಿಯಲ್ಲಿ ಜೆಡಿಎಸ್‌ ಶಾಸಕ ಹಾಗೂ ಸಚಿವ ಎಸ್‌.ಆರ್‌.ಶ್ರೀನಿವಾಸ್‌, ತಿಪಟೂರಿನಲ್ಲಿ ಬಿಜೆಪಿ ಶಾಸಕ ಬಿ.ಸಿ.ನಾಗೇಶ್‌, ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ,

ಕೊರಟಗೆರೆಯಲ್ಲಿ ಕಾಂಗ್ರೆಸ್‌ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಧುಗಿರಿಯಲ್ಲಿ ಜೆಡಿಎಸ್‌ ಶಾಸಕ ವೀರಭದ್ರಯ್ಯ, ತುರುವೇಕೆರೆಯಲ್ಲಿ ಬಿಜೆಪಿ ಶಾಸಕ ಮಸಾಲ ಜಯರಾಮ…, ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್‌ ಶಾಸಕ ಡಿ.ಸಿ.ಗೌರಿಶಂಕರ್‌, ತುಮಕೂರು ನಗರದಲ್ಲಿ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ಇದ್ದಾರೆ.

ಮತದಾರರು
-ಒಟ್ಟು – 15,94,703.
-ಪುರುಷರು – 7,97,512
-ಮಹಿಳೆಯರು – 7,97,191

ಜಾತಿವಾರು ಲೆಕ್ಕಾಚಾರ: (ಅಂದಾಜು)
-ಲಿಂಗಾಯತ – 3,19,840.
-ಒಕ್ಕಲಿಗ – 3,05,962
-ಎಸ್‌ಸಿ – 2,33,889
-ಕುರುಬ – 1,68,519
-ಎಸ್ಟಿ- 1,07,000
-ಮುಸ್ಲಿಂ- 1,55,700.
-ಯಾದವ-80,100.
-ಇತರರು -2,23,693.

* ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next