ದೇವದುರ್ಗ: ಕೊರೊನಾ ಸೋಂಕು ಹಬ್ಬುವುದನ್ನು ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಇದು ಹರಡದಂತೆ ಎಚ್ಚರಿಕೆ ವಹಿಸಲು ತಾಲೂಕಿನ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆ ವೈದ್ಯರು ವಿದೇಶದಿಂದ ಬರುವ ಹಾಗೂ ಶಂಕಿತ ವ್ಯಕ್ತಿಗಳ ಕುಟುಂಬ, ಪ್ರದೇಶದಿಂದ ಬರುವ ರೋಗಿಗಳ ಬಗ್ಗೆ ಕೂಡಲೇ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಬನದೇಶ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳ ವೈದ್ಯರಿಗೆ ವಿಡಿಯೋ ಕಾನ್ಫ್ರೆನ್ಸ್ ನಡೆಸಿ ಅವರು ಮಾತನಾಡಿದರು. ವಿದೇಶದಿಂದ ಬರುವವರು ಮತ್ತು ಭಾರತದಿಂದ ದೇಶಕ್ಕೆ ಹೋಗಿ ಬರುವವರ ಬಗ್ಗೆ ಎಚ್ಚರದಿಂದಿರಬೇಕು. ಆದ್ದರಿಂದ ಅಂತಹ ವ್ಯಕ್ತಿಗಳು ತಾಲೂಕಿನ ಯಾವುದೇ ವೈದ್ಯರ ಬಳಿ ಚಿಕಿತ್ಸೆಗೆ ಬಂದಾಗ ಅವರ ಪ್ರವಾಸದ ಇತಿಹಾಸ ತಿಳಿದುಕೊಳ್ಳಬೇಕು. ಒಂದು ವೇಳೆ ಅಂತಹ ಪ್ರದೇಶದಿಂದ ಬಂದಿದ್ದರೆ ಅಥವಾ ಕೊರೊನಾಕ್ಕೆ ತುತ್ತಾದ ಪ್ರದೇಶ ಅಥವಾ ಕುಟುಂಬದ ಸಂಬಂಧ ಹೊಂದಿರುವ ವ್ಯಕ್ತಿಗಳು ಬಂದಿದ್ದರೆ, ಕೂಡಲೇ ಮಾಹಿತಿ ನೀಡಬೇಕು. ಅವರನ್ನು ಪರೀಕ್ಷೆಗೊಳಪಡಿಸಿ 14 ದಿನದವರೆಗೆ ನಿಗಾ ವಹಿಸಲಾಗುತ್ತದೆ. ಅಂತಹ ಯಾವುದೇ ಲಕ್ಷಣಗಳು ಕಂಡುಬಂದರೆ ಜಿಲ್ಲಾ ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕರಿಗೆ, ಮಕ್ಕಳಿಗೆ ಮಾಸ್ಕ್ ಅವಶ್ಯಕತೆಯಿಲ್ಲ: ಕೊರೊನಾ ಸೋಂಕಿನ ಭಯದಿಂದ ಜನ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಲಾಗುತ್ತಿದೆ. ಆದರೆ ಆರೋಗ್ಯದಿಂದ ಇರುವ ಯಾರಿಗೂ ಮಾಸ್ಕ್ ಅವಶ್ಯಕತೆ ಇಲ್ಲ. ಶಾಲಾ ಮಕ್ಕಳಿಗೂ ಇದರ ಅಗತ್ಯವಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ತಮ್ಮ ಆರೋಗ್ಯ ರಕ್ಷಣೆಗಾಗಿ ಇವುಗಳನ್ನು ಉಪಯೋಗಿಸಬೇಕೆಂದು ಸ್ಪಷ್ಟಪಡಿಸಿದರು. ಒಂದು ವೇಳೆ ಮಾಸ್ಕ್ ಉಪಯೋಗಿಸಿದರೆ ಅದು ಕೇವಲ 8 ಗಂಟೆ ಮಾತ್ರ ಉಪಯೋಗಿಸಬೇಕು. ಹೆಚ್ಚಿನ ಅವಧಿ ಉಪಯೋಗಿಸಿದರೆ ಅದರಿಂದ ಅಡ್ಡ ಪರಿಣಾಮಗಳು ಬೀರುತ್ತವೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ಎಚ್ಚರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಉಹಾ-ಪೋಹಗಳಿಂದ ಜನರು ಭಯ ಭೀತರಾಗಿದ್ದಾರೆ, ಜನರು ಭಯ ಪಡುವ ಅಗತ್ಯವಿಲ್ಲ. ದೇವದುರ್ಗ ತಾಲೂಕಿನಲ್ಲಿ ಯಾರಲ್ಲೂ ಕೊರೊನಾ ಸೋಂಕು ಕಂಡುಬಂದಿಲ್ಲ. ಆದ್ದರಿಂದ ಜನ ಇದಕ್ಕೆ ಭಯಪಡುವ ಅಗತ್ಯವಿಲ್ಲ ಎಂದರು.
ಸ್ವಚ್ಛತೆ ಕಾಪಾಡಿ: ಪ್ರತಿ ಬಾರಿ ಕೈ ತೊಳೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಬೇಕು. ಕಚೇರಿ ಅಥವಾ ಮನೆಯ ವಸ್ತುಗಳನ್ನು ಸಹ ಸ್ವತ್ಛವಾಗಿರಿಸಿಕೊಳ್ಳಬೇಕು ಎಂದರು. ಯಾವುದೇ ವ್ಯಕ್ತಿಯ ಬಗೆ ಶಂಕೆ ವ್ಯಕ್ತಪಡಿಸಿ ರೋಗಕ್ಕೆ ತುತ್ತಾಗಿದ್ದಾರೆಂದು ಹೇಳುವ ಅಧಿಕಾರ ವೈದ್ಯರು, ಖಾಸಗಿ ವ್ಯಕ್ತಿಗಳಿಗಿಲ್ಲ. ಅಂತಹ ವ್ಯಕ್ತಿ ಕಂಡುಬಂದರೆ ತಾಲೂಕು ಆರೋಗ್ಯ ಇಲಾಖೆ ಸೋಂಕಿತರನ್ನು ಜಿಲ್ಲಾ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಿದೆ. ಅವರನ್ನು ಪರೀಕ್ಷಿಸಿದ ನಂತರ ನಂತರ ಜಿಲ್ಲಾಧಿ ಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.
ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ| ಎಚ್.ಎ. ನಾಡಗೌಡ, ಪ್ರಧಾನ ಕಾರ್ಯದರ್ಶಿ ಡಾ| ಮಂಜುನಾಥ, ವೈದ್ಯರಾದ ಡಾ| ಬಸವರಾಜ, ಡಾ| ನಾಗರಾಜ, ಡಾ| ನರೇಂದ್ರ ಪಾಟೀಲ, ಡಾ| ಗಿರಿಜಾ, ಡಾ| ಗಿರೀಶ, ಡಾ| ದೇವರಾಜ ದೇಸಾಯಿ, ಡಾ|ಬಸನಗೌಡ ಗಬ್ಬೂರು, ಡಾ| ನಿರ್ಮಲಾ, ಡಾ| ಅಶೋಕ ಇತರರಿದ್ದರು.