Advertisement

ಶಿಕ್ಷಣ ಇಲಾಖೆಯಲ್ಲಿ ಹುದ್ದೆ ಖಾಲಿ

12:19 PM Jan 16, 2020 | Naveen |

ದೇವದುರ್ಗ: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕೆಲ ಹುದ್ದೆಗಳು ಖಾಲಿ ಇರುವುದರಿಂದ ಒಬ್ಬೊಬ್ಬ ಸಿಆರ್‌ಪಿಗಳಿಗೆ ಎರಡ್ಮೂರು ಕ್ಲಸ್ಟರ್‌ ಹೊಣೆ ವಹಿಸಲಾಗಿದೆ. ಇದರಿಂದ ಆಯಾ ಕ್ಲಸ್ಟರ್‌ ಮಟ್ಟದ ಶಾಲೆಗಳ ಚಟುವಟಿಕೆ ಕುರಿತು ಅಧಿಕಾರಿಗಳಿಗೆ ಸಕಾಲಕ್ಕೆ ಮಾಹಿತಿ ಒದಗಿಸಲು ಆಗುತ್ತಿಲ್ಲ. ಮತ್ತು ಅತಿಥಿ ಶಿಕ್ಷಕರಿಗೆ ಸಕಾಲಕ್ಕೆ ಗೌರವಧನವೂ ಪಾವತಿ ಆಗುತ್ತಿಲ್ಲ ಎನ್ನಲಾಗಿದೆ.

Advertisement

ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ 25 ಕ್ಲಸ್ಟರ್‌ಗಳಿವೆ. 25 ಕ್ಲಸ್ಟರ್‌ಗಳಿಗೆ ಸಿಆರ್‌ ಪಿಗಳು ಇದ್ದರು. ಆದರೆ ಅವಧಿ ಮುಗಿದ 16 ಜನ ಸಿಆರ್‌ಪಿಗಳನ್ನು ತೆಗೆದು ಹಾಕಿದ್ದರಿಂದ ಸದ್ಯ 9 ಜನ ಸಿಆರ್‌ಪಿಗಳಿದ್ದಾರೆ. ಒಬ್ಬೊಬ್ಬರಿಗೆ ಎರಡ್ಮೂರು ಕ್ಲಸ್ಟರ್‌ ವಹಿಸಲಾಗಿದೆ. ದಿಕ್ಕಿಗೊಂದು ಕ್ಲಸ್ಟರ್‌ಗಳು ಇರುವ ಕಾರಣ ಸಿಆರ್‌ಪಿಗಳು ಶಾಲೆಗೆ ಭೇಟಿ ನೀಡಿ ಮುಖ್ಯಶಿಕ್ಷಕರಿಂದ ಸಕಾಲಕ್ಕೆ ಮಾಹಿತಿ ಪಡೆಯಲು ಆಗುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣವೇ ಮಾಹಿತಿ ನೀಡುವಂತೆ ಒತ್ತಡ ಹೇರಿದಾಗ ಸಿಆರ್‌ಪಿಗಳು ಕ್ಲಸ್ಟರ್‌ಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇರೆ ತಾಲೂಕಿನಲ್ಲಿ ಅವಧಿ ಮುಗಿದ ಸಿಆರ್‌ಪಿಗಳನ್ನೇ ಮುಂದುವರಿಸಲಾಗಿದ್ದು, ದೇವದುರ್ಗ ತಾಲೂಕಿನಲ್ಲಿ ಮಾತ್ರ ತೆಗೆದು ಹಾಕಿದ್ದರಿಂದ ಇರುವ 9 ಸಿಆರ್‌ಪಿಗಳಿಗೆ ಹೆಚ್ಚುವರಿ ಹೊರೆ ಬಿದ್ದಿದೆ.

ಮಾಹಿತಿ ವಿಳಂಬ: ಸರಕಾರಿ ಶಾಲೆಯ ಪ್ರತಿಯೊಂದು ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕಿದೆ. ಶಾಲೆಯಿಂದ ಹೊರಗುಳಿದ ಮಕ್ಕಳು, ಬಿಸಿಯೂಟ, ಸಮವಸ್ತ್ರ, ಸೈಕಲ್‌ ವಿತರಣೆ, ಕ್ಷೀರಭಾಗ್ಯ, ಶಿಷ್ಯವೇತನಕ್ಕೆ ಅರ್ಹರಾದ ಮಕ್ಕಳ ಮಾಹಿತಿಯನ್ನು ಮುಖ್ಯ ಶಿಕ್ಷಕರಿಂದ ಪಡೆಯಲು ಸಿಆರ್‌ಪಿಗಳು ಹರಸಾಹಸ ಪಡಬೇಕಿದೆ.

ಅತಿಥಿ ಶಿಕ್ಷಕರಿಗೆ ವೇತನವಿಲ್ಲ: ಸರಕಾರಿ ಶಾಲೆಯಲ್ಲಿ 500ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರತಿವರ್ಷ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪ್ರಸಕ್ತ ವರ್ಷ ನೇಮಕವಾದ ಅತಿಥಿ ಶಿಕ್ಷಕರಿಗೆ ಆರೇಳು ತಿಂಗಳಿಂದ ಗೌರವಧನ ಪಾವತಿಸಿಲ್ಲ. ಹೀಗಾಗಿ ಅತಿಥಿ ಶಿಕ್ಷಕರು ಗೌರವಧನ ಪಾವತಿಸುವಂತೆ ನಿತ್ಯ ಕಚೇರಿಗೆ ಅಲೆಯುವಂತಾಗಿದೆ.

Advertisement

ಹುದ್ದೆಗಳು ಖಾಲಿ: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕೆಲ ಹುದ್ದೆಗಳು ಖಾಲಿ ಇವೆ. ಗೆಜೆಟೆಡ್‌ ಮ್ಯಾನೇಜರ್‌, ಎರಡು ಮೇಲ್ವಿಚಾರಕರು, ಎರಡು ಜನ ಎಫ್‌ಡಿಎ, ಎಸ್‌ಡಿಎ ಒಂದು ಹುದ್ದೆ ಖಾಲಿ ಇದೆ. ಹೀಗಾಗಿ ಶಿಕ್ಷಕರ ಕೆಲಸ ಕಾರ್ಯ, ಶಾಲೆಯ ಕಡತಗಳ ವಿಲೇವಾರಿಗೆ ಹಿನ್ನಡೆ ಆಗುತ್ತಿದೆ. ಹುದ್ದೆ ಭರ್ತಿಗೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಸರ್ಕಾರ ಭರ್ತಿಗೆ ಮುಂದಾಗದಿರುವುದು ಸಮಸ್ಯೆ ಕಾರಣವಾಗಿದೆ.

ಅತಿಥಿ ಶಿಕ್ಷಕರಿಗೆ ಗೌರವಧನ ಪಾವತಿಸಲು ಸರಕಾರ ಅನುದಾನ ಬಿಡುಗಡೆ
ಮಾಡಿಲ್ಲ. ಅವಧಿ  ಮುಗಿದ ಸಿಆರ್‌ಪಿಗಳಿಗೆ ನಿಯೋಜನೆಗೊಂಡ ಶಾಲೆಗೆ ತೆರಳುವಂತೆ ಆದೇಶ ಹೊಡಿಸಲಾಗಿದೆ. ಇದ್ದವರಿಗೆ ಹೆಚ್ಚುವರಿ ಕ್ಲಸ್ಟರ್‌ ಗಳ ಜವಾಬ್ದಾರಿ ನೀಡಲಾಗಿದೆ.
ಡಾ| ಎಸ್‌.ಎಂ.ಹತ್ತಿ,
ಕ್ಷೇತ್ರ ಶಿಕ್ಷಣಾಧಿಕಾರಿ

ನಮ್ಮ ಕ್ಲಸ್ಟರ್‌ ಜವಾಬ್ದಾರಿ ವಹಿಸಿಕೊಂಡ ಸಿಆರ್‌ಪಿ ಮುಖವನ್ನೇ ನೋಡಿಲ್ಲ. ದೂರವಾಣಿ ಮೂಲಕವೇ ಪ್ರತಿಯೊಂದು ಮಾಹಿತಿ ನೀಡುವಂತೆ ಕೇಳುತ್ತಿದ್ದಾರೆ.
.ಹೆಸರು ಹೇಳಲು ಇಚ್ಚಿಸದ
ಮುಖ್ಯ ಶಿಕ್ಷಕ

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next