Advertisement

ಸರಕು ವಾಹನದಲ್ಲೇ ಕಾರ್ಮಿಕರ ಸಾಗಾಟ

12:09 PM Oct 30, 2019 | Naveen |

ದೇವದುರ್ಗ: ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಬಾರದು ಎಂದು ಕಾನೂನು ಮಾಡಿದ್ದರೂ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು, ಬಾಲ ಕಾರ್ಮಿಕರನ್ನು ಕುರಿಗಳಂತೆ ತುಂಬಿಕೊಂಡು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.

Advertisement

ಸರಕು ಸಾಗಣೆಯ ಮಿನಿ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕಾರ್ಮಿಕರನ್ನು, ಮಕ್ಕಳನ್ನು ತುಂಬಿಕೊಂಡು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ದೃಶ್ಯ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂಡುಬರುತ್ತಿವೆ. ಒಂದೊಂದು ವಾಹನದಲ್ಲಿ ಮಕ್ಕಳು, ದೊಡ್ಡವರು ಸೇರಿ ಕನಿಷ್ಠ 25ರಿಂದ 30 ಜನರನ್ನು ತುಂಬಿಕೊಂಡು ಕರೆದುಕೊಂಡು ಹೋಗಲಾಗುತ್ತಿದೆ.

ಜಾಲಹಳ್ಳಿ, ತಿಂಥಿಣಿ ಬ್ರಿಜ್‌, ಕೊಳ್ಳೂರು, ಹಟ್ಟಿ, ಲಿಂಗಸುಗೂರು, ಶಹಾಪುರ, ಮಾನ್ವಿ, ಪೋತ್ನಾಳ ಸೇರಿ ವಿವಿಧ ಗ್ರಾಮೀಣ ಭಾಗದಿಂದ ನಿತ್ಯ ನೂರಾರು ಕೂಲಿ ಕಾರ್ಮಿಕರನ್ನು ಕೃಷಿ ಕೆಲಸಕ್ಕೆ ಕರೆದೊಯ್ಯಲಾಗುತ್ತಿದೆ. ನೆಪ ಮಾತ್ರಕ್ಕೆ ದಾಳಿ: ಸರಕು ವಾಹನಗಳಲ್ಲಿ ಪ್ರಯಾಣಿಕರು, ಬಾಲ ಕಾರ್ಮಿಕರ ಸಾಗಾಟ ತಡೆಗೆ ತಹಶೀಲ್ದಾರ್‌ ನೇತೃತ್ವದಲ್ಲಿ ನಾನಾ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ನೆಪ ಮಾತ್ರಕ್ಕೆ ಆಗಾಗ ವಾಹನಗಳನ್ನು ತಡೆದು ದಂಡ ವಿಧಿಸಲಾಗುತ್ತಿದೆ.

ಚಾಲಕರ ವಿರುದ್ಧ ದಂಡ ವಿಧಿಸುವುದು ತಾತ್ಕಲಿಕ ಎಂಬಂತಾಗಿದೆ. ದಂಡ ಭಯಕ್ಕೂ ಹೆದರದ ವಾಹನ ಚಾಲಕರು ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಅಪಘಾತಕ್ಕೆ ದಾರಿ: ಸುಮಾರು ಆರೇಳು ತಿಂಗಳ ಹಿಂದೆ ಸಿರವಾರ ಕ್ರಾಸ್‌ ಹತ್ತಿರ ಒಂದಕ್ಕೊಂದು ವಾಹನ ಡಿಕ್ಕಿ ಆಗಿ ವಾಹನಗಳು ಪಲ್ಟಿಯಾದಾಗ ಸುರಪುರ ತಾಲೂಕಿನಿಂದ ಹೊಲಗದ್ದೆ ಕೆಲಸಕ್ಕೆ ಬಂದ ಕೂಲಿ ಕಾರ್ಮಿಕರಲ್ಲಿ ತಾಯಿ-ಮಗಳು ಮೃತಪಟ್ಟ ಘಟನೆ ಜರುಗಿತ್ತು. ಆರೇಳು ಜನಕ್ಕೆ ಗಂಭೀರವಾದ ಗಾಯಗಳಾಗಿದ್ದವು.

ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಗ್ರಾಮೀಣ ಪ್ರಯಾಣಿಕರು ಪ್ರಾಣಭಯವಿಲ್ಲದೇ ಟಂಟಂ ರಿಕ್ಷಾ, ಟಾಟಾ ಏಸ್‌ ವಾಹನಗಳಿಗೆ ಜೋತುಬಿದ್ದು ಪ್ರಯಾಣಿಸುವುದು ದುರಂತವೇ ಸರಿ.

Advertisement

ಬಾಲ ಕಾರ್ಮಿಕರೇ ಹೆಚ್ಚು: ಒಂದೆಡೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಕಳಿಸುವುದು ಅಪರಾಧ, ದುಡಿಸಿಕೊಳ್ಳುವುದು ಕಾನೂನಿಗೆ ವಿರೋಧ ಎಂದು ವಿವಿಧ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದರೂ ಇದಕ್ಕೆ ಕ್ಯಾರೇ ಎನ್ನದ ಪಾಲಕರು, ಹೊಲಗಳ ಮಾಲೀಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಹೊಲದಲ್ಲಿ ಕೃಷಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಅಧಿಕಾರಿಗಳು ಆಗಾಗ ದಾಳಿ ನಡೆಸಿ ವಾಹನಗಳನ್ನು ಹಿಡಿದು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವಶಕ್ಕೆ ಪಡೆದು ಮರಳಿ ಶಾಲೆಗೆ ಕಳಿಸುತ್ತಿದ್ದಾರೆ. ಆಗ ಮಾತ್ರ ಶಾಲೆಗೆ ಹೋಗುವ ಮಕ್ಕಳು ಮತ್ತೆ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿದೆ. ಹೀಗಾಗಿ ಬಾಲಕಾರ್ಮಿಕರ ಪದ್ಧತಿ ಮುಕ್ತಿ ಕಾಣದಂತಾಗಿದೆ.

ಕಾರ್ಮಿಕ ಇಲಾಖೆ ಕಚೇರಿ ಜಿಲ್ಲಾ ಕೇಂದ್ರದಲ್ಲಿದ್ದು, ಅಲ್ಲಿನ ಅಧಿಕಾರಿ ತಾಲೂಕಿಗೆ ಬರುವುದೇ ಅಪರೂಪ ಎಂಬಂತಾಗಿದೆ. ಹೀಗಾಗಿ ಕೂಲಿ ಕಾರ್ಮಿಕರ ಹೆಸರಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು ಕಸಾಪ ಅಧ್ಯಕ್ಷ ಎಚ್‌. ಶಿವರಾಜ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next