ದೇವದುರ್ಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಂಚಿಸಲು ಸರಕಾರ ನಿರ್ಬಂಧಿಸಿದ ಬಯೋ ಕಂಪನಿ ರಸಗೊಬ್ಬರ ಪೂರೈಸುವ ಜಾಲ ಹಳ್ಳಿಗಳಲ್ಲಿ ಸದ್ದಿಲ್ಲದೇ ವ್ಯಾಪಕವಾಗಿ ನಡೆದಿದೆ.
ಇತ್ತೀಚೆಗೆ ಮರಳು ಮಿಶ್ರಿತ ರಸಗೊಬ್ಬರ ಪೂರೈಸಿರುವ ಬಸವೇಶ್ವರ ಕೃಷಿ ಸೇವಾ, ಎಸ್.ಎಂ. ಆಗ್ರೋ ಏಜೆನ್ಸಿ ಎರಡು ಅಂಗಡಿಗಳ ವಿರುದ್ಧ ಲೈಸನ್ಸ್ ರದ್ದುಗೊಳಿಸಲು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬ್ಯಾನ್ ಆಗಿರುವ ಬಯೋ ಕಂಪನಿಯ ರಸಗೊಬ್ಬರ ಮಾರಾಟ ನಡೆಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ರೈತ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದಾರೆ.
ರೈತರು ಮುಂಗಾರು ಹಂಗಾಮಿನಲ್ಲಿ ಕಂತಿನ ಮೇಲೆ ಗೊಬ್ಬರ ಪೂರೈಸುವ ಕೆಲ ಅಂಗಡಿಗಳ ಮಾಲೀಕರು ದಲ್ಲಾಳಿಗಳನ್ನು ಹಳ್ಳಿಗಳಿಗೆ ಕಳಿಸಿ ದಂಧೆ ನಡೆಸಿದ್ದಾರೆ. ನಕಲಿ ಬೀಜ, ರಸಗೊಬ್ಬರ ಮಾರಾಟ ಮಾಡುವ ದಂಧೆ ಬೇರೂರಿದೆ. ಇಲಾಖೆಯ ಕೆಲ ಅಧಿಕಾರಿಗಳು ಅಂಗಡಿಗಳ ಮಾಲೀಕರ ಜತೆ ಶಾಮೀಲಾಗಿ ರೈತರಿಗೆ ವಂಚಿಸುವ ದಂಧೆ ಹಿಂದಿನಿಂದಲೂ ನಡೆದಿದೆ.
ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರತಿವರ್ಷ ಆಂಧ್ರ ಮೂಲಕ ವ್ಯಕ್ತಿಗಳಿಂದ ನಕಲಿ ಬೀಜ ಪೂರೈಸುವ ಜಾಲ ಹಳ್ಳಿಗಳಲ್ಲಿ ವ್ಯಾಪಕವಾಗಿದೆ. ತಾಲೂಕಿನ ರೈತರು ಅಂಗಡಿಗಳಲ್ಲಿ ಯಾವುದೇ ಬೀಜ, ರಸಗೊಬ್ಬರ, ರಾಸಾಯನಿಕ ಖರೀದಿಸಿದರೇ ಟಿನ್ ನಂಬರ್ ಬಿಲ್ ನೀಡದೇ ಬಿಳಿ ಹಾಳೆಯಲ್ಲಿ ರಶೀದಿ ನೀಡಿ ರೈತರನ್ನು ವಂಚಿಸುತ್ತಿದೆ. ಬೆಳೆ ಬೆಳೆದು ಮಾರಾಟ ನಂತರವೇ ಹಣ ಪಾವತಿಸುವ ಪದ್ದತಿ ಜಾರಿಯಲ್ಲಿದೆ. ಬಿತ್ತನೆ ವೇಳೆ ರೈತರಿಗೆ ಅನುಕೂಲ ಮಾಡುವ ನೆಪದಲ್ಲಿ ಇಳುವರಿ ವ್ಯತ್ಯಾಸ ಬೆಳೆ ನಷ್ಟವಾದರೆ ಯಾವುದೇ ರಸೀದಿ ಇಲ್ಲದ ಇಂತಹ ಬಿತ್ತನೆ ಬೀಜ ಖರೀದಿಸಿದ ರೈತರು ಬೆಳೆನಷ್ಟ ಪರಿಹಾರದಿಂದ ವಂಚಿತರಾಗುವುದು ಸಾಮಾನ್ಯವಾಗಿದೆ.
ಅಂಗಡಿಗಳ ಮಾಲೀಕರ ದಲ್ಲಾಳಿಗಳು ಹಳ್ಳಿ, ಹಳ್ಳಿಗಳಿಗೆ ಅಲೆದು ಈ ಕಂಪನಿ ಬೀಜ, ರಸಗೊಬ್ಬರ ಹಾಕಿ ಬೆಳೆದರೇ ಈ ಬಾರಿ ಉತ್ತಮ ಫಸಲು ಬರುತ್ತದೆ ಎಂದು ನಂಬಿಸಿ ರೈತರನ್ನು ವಂಚಿಸುವ ಕೆಲಸ ಸದ್ದಿಲ್ಲದೇ ನಡೆದಿದೆ. ನಕಲಿ ಬೀಜ ಮಾರಾಟ ನಡೆಸಿದ ಅಂಗಡಿಗಳ ಮಾಲೀಕರು ವಿದೇಶ ಪ್ರವಾಸದಲ್ಲಿ ಮೋಜು ಮಸ್ತಿಯಲ್ಲಿ ಲಾಭ ಗಳಿಸಿದ್ದಾರೆ. ಸರಕಾರ ಬಯೋ ಕಂಪನಿ ರಸಗೊಬ್ಬರವನ್ನು ಬ್ಯಾನ್ ಮಾಡಲಾಗಿದೆ. ಇಲ್ಲಿನ ಕೆಲ ಅಂಗಡಿಗಳ ಮಾಲೀಕರು ಅನುಮತಿ ಇಲ್ಲದೇ ಗೊಬ್ಬರ ಮಾರಾಟ ದಂಧೆ ನಡೆಸಿದ್ದು, ಅಕ್ರಮ ನಡೆಸುವವರ ವಿರುದ್ಧ ಕೃಷಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಮಿಶ್ರಿತ ಗೊಬ್ಬರ ಮಾರಾಟ ಮಾಡಿರುವ ಎರಡು ಅಂಗಡಿಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಲ್ಲವಾದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ.
ಮಲ್ಲಯ್ಯ ಕಟ್ಟಿಮನಿ
ಕೆಆರ್‌ಎಸ್ ತಾಲೂಕಾಧ್ಯಕ್ಷರು.
ಮರಳು ಮಿಶ್ರಿತ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳ ಲೈಸನ್ಸ್ ರದ್ದುಗೊಳಿಸಲು ಸೂಚಿಸಲಾಗಿದೆ. ನಕಲಿ ಬೀಜ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ಎಲ್ಲಾ ಅಂಗಡಿಗಳ ಮಾಲೀಕರಿಗೆ ಮಾರಾಟದ ದರದ ಪಟ್ಟಿಯನ್ನು ಅಳವಡಿಸುವಂತೆ ಆದೇಶಿಸಲಾಗಿದೆ.
ಡಾ.ಎಸ್.ಪ್ರಿಯಾಂಕ್
ಸಹಾಯಕ ಕೃಷಿ ನಿರ್ದೇಶಕರು
ನಾಗರಾಜ ತೇಲ್ಕರ್