Advertisement

ಉಪ ನೋಂದಣಿ ಕಚೇರಿಗೆ ಹೋಗಲು ವೃದ್ಧರ ಪರದಾಟ

01:16 PM Oct 30, 2019 | Naveen |

ದೇವದುರ್ಗ: ಪಟ್ಟಣದ ಮಿನಿ ವಿಧಾನಸೌಧ ಎರಡನೇ ಮಹಡಿಯಲ್ಲಿರುವ ಉಪ ನೋಂದಣಿ ಕಚೇರಿಗೆ ಮೆಟ್ಟಿಲು ಹತ್ತಿ ಹೋಗಬೇಕಿರುವುದರಿಂದ ವೃದ್ಧರು, ವಿಕಲಚೇತನರಿಗೆ ಸಮಸ್ಯೆ ಆಗುತ್ತಿದೆ.

Advertisement

ಆಸ್ತಿ ಖರೀದಿ, ಮಾರಾಟ, ನೋಂದಣಿ, ಮಕ್ಕಳು, ಮೊಮ್ಮಕ್ಕಳ ಹೆಸರಿಗೆ ಆಸ್ತಿ ವರ್ಗಾವಣೆ ಮುಂತಾದ ಕಾರ್ಯಗಳಿಗಾಗಿ ಗ್ರಾಮೀಣ ಮತ್ತು ಪಟ್ಟಣದ ವೃದ್ಧರು, ವಿಕಲಚೇತನರು ಸೇರಿ ನಿತ್ಯ ನೂರಾರು ಜನ ಉಪ ನೋಂದಣಿ ಕಚೇರಿಗೆ ಆಗಮಿಸುತ್ತಾರೆ. ಎರಡನೇ ಮಹಡಿಯಲ್ಲಿನ ಉಪ ನೋಂದಣಿ ಕಚೇರಿಗೆ ಮೆಟ್ಟಿಲು ಹತ್ತಿ ಹೋಗಬೇಕಿದ್ದು, ವೃದ್ಧರು, ವಿಕಲಚೇತನರು ಸಮಸ್ಯೆ ಎದುರಿಸುವಂತಾಗಿದೆ.

ಮೆಟ್ಟಿಲು ಹತ್ತಲಾಗದ ವಿಕಲಚೇತನರು, ವೃದ್ಧರನ್ನು ಸಂಬಂಧಿಕರೇ ಎತ್ತಿಕೊಂಡು ಹೋಗಬೇಕಿದೆ. ವೃದ್ಧರು, ವಿಕಲಚೇತನರಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಮಿನಿ ವಿಧಾನಸೌಧ ಉದ್ಘಾಟನೆ ನಂತರ ಕಚೇರಿಗಳನ್ನು ಆರಂಭಿಸುವ ಹಂತದಲ್ಲೇ ಎರಡನೇ ಮಹಡಿಯಲ್ಲಿ ಉಪ ನೋಂದಣಿ ಕಚೇರಿ ಬೇಡ ಕೂಗು ಸಾರ್ವಜನಿಕರಿಂದ ಕೇಳಿಬಂದಿತ್ತು. ಆದರೆ ಇದಕ್ಕೆ ಅಧಿಕಾರಿಗಳು ಕಿವಿಗೊಡದ್ದರಿಂದ ಈಗ ನಿತ್ಯ ವಯೋವೃದ್ಧರು, ವಿಕಲಚೇತನರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೇ ಕಚೇರಿ ಹೊರಗಡೆ ಜನರಿಗೆ ನಿಲ್ಲಲು ಕೂಡ ಜಾಗ ಇಲ್ಲದಂತಾಗಿದೆ.

ಗುಟ್ಕಾ ಕಲೆ: ಮಿನಿ ವಿಧಾನಸೌಧದಲ್ಲಿ ಗುಟ್ಕಾ, ಎಲೆಅಡಿಕೆ ತಿಂದು ಗೋಡೆಗೆ ಉಗಿದರೆ 200 ರೂ. ದಂಡ ವಿಧಿಸಲಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಆದರೂ ಸಾರ್ವಜನಿಕರು ಗುಟ್ಕಾ, ಎಲೆಅಡಿಕೆ ತಿಂದು ಕಚೇರಿ ಗೋಡೆ, ಮೆಟ್ಟಿಲುಗಳ ಮೇಲೆ ಉಗುಳಿದ್ದಾರೆ. ಕಟ್ಟಡ ಉದ್ಘಾಟನೆ ಆಗಿ ಸುಮಾರು ವರ್ಷಗಳೇ ಆದರೂ ಸುಣ್ಣಬಣ್ಣ ಕಂಡಿಲ್ಲ. ಸ್ವಚ್ಛತೆ ಮಾಯವಾಗಿದೆ.

ಎಲ್ಲೆಂದರಲ್ಲಿ ಕಸ, ಜೇಡರ ಬಲೆ ಕಾಣುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ. ನೆಟ್‌ವರ್ಕ್‌ ಸಮಸ್ಯೆ: ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಆಗಾಗ ನೆಟ್‌ವರ್ಕ್‌ ಸಮಸ್ಯೆಯಿಂದ ಬಹುತೇಕರು ಬೇಸತ್ತು ಹೋಗಿದ್ದಾರೆ. ಗ್ರಾಮೀಣ ಪ್ರದೇಶದ ಜನ ಇಲ್ಲಿನ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ನೆಟ್‌ವರ್ಕ್‌ ಇದೆಯೋ ಇಲ್ಲವೋ ಎಂದು ಕೇಳಿ ಕೆಲಸ ಕಾರ್ಯಕ್ಕೆ ಬರಬೇಕಿದೆ.

Advertisement

ಕಳೆದ ಮೂರು ದಿನಗಳಿಂದ ನೆಟ್‌ವರ್ಕ್‌ ಸಮಸ್ಯೆಯಿಂದ ಕಚೇರಿಯಲ್ಲಿ ಕೆಲಸಗಳು ಸ್ಥಗಿತಗೊಂಡಿವೆ. ಆದರೆ ಅಧಿಕಾರಿ ಕಚೇರಿಗೆ ಬಾರದೇ ಹಿಂದೇಟು ಹಾಕಿದ್ದಾರೆ. ಜನ ಬಂದು ವಾಪಸ್‌ ಹೋಗುವ ಸಮಸ್ಯೆ ಮಾತ್ರ ತಪ್ಪಿಲ್ಲ.

ಕಚೇರಿ ಸ್ಥಳಾಂತರಕ್ಕೆ ಆಗ್ರಹ: ಹಲವು ಸಂಘ-ಸಂಸ್ಥೆಗಳು ಈ ಸಮಸ್ಯೆಗೆ ಮುಕ್ತಿ ಒದಗಿಸಲು ಕೆಳಗಡೆ ಇರುವ ತಹಶೀಲ್ದಾರ್‌ ಕಚೇರಿಯಲ್ಲಿ ಒಂದೆರಡು ಕೊಠಡಿಗಳನ್ನು ಉಪ ನೋಂದಣಿ ಕಚೇರಿಗೆ ನೀಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಸ್ಪಂದಿಸಿಲ್ಲ. ಕೂಡಲೇ ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಉಪ ನೋಂದಣಿ ಕಚೇರಿಯನ್ನು ಎರಡನೇ ಮಹಡಿಯಿಂದ ಕೆಳಗೆ ಸ್ಥಳಾಂತರಿಸಬೇಕೆಂದು ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next