Advertisement

ರಾಜ್ಯ ಹೆದ್ಧಾರಿ ನಿರ್ವಹಣೆಗೆ ವಿಫಲ

01:19 PM Nov 15, 2019 | Naveen |

ದೇವದುರ್ಗ: ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ನಿರ್ವಹಣೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿವೆ. ರಸ್ತೆ ವಿಭಜಕಗಳಿಗೆ ಹಾಕಿದ್ದ ಕಬ್ಬಿಣದ ರಕ್ಷಣಾ ಗೋಡೆ ಅಲ್ಲಲ್ಲಿ ಕಿತ್ತೋಗಿವೆ.

Advertisement

ಪಟ್ಟಣದ ಗೌರಂಪೇಟೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವರೆಗೆ ರಾಜ್ಯ ಹೆದ್ದಾರಿ ಮಧ್ಯದ ರಸ್ತೆ ವಿಭಜಕಕ್ಕೆ ಅಳವಡಿಸಿದ್ದ ಕಬ್ಬಿಣದ ರಕ್ಷಣಾ ಗೋಡೆ ಎಲ್ಲೆಂದರಲ್ಲಿ ಕಿತ್ತಿ ಹೋಗಿದೆ. ಇದರಿಂದಾಗಿ ವೇಗವಾಗಿ ಬರುವ ವಾಹನಗಳು ಆಕಸ್ಮಿಕವಾಗಿ ರಸ್ತೆ ಮಧ್ಯದ ವಿಭಜಕ ಹತ್ತಿ ಇನ್ನೊಂದು ಬದಿಯ ರಸ್ತೆಗೆ ಇಳಿಯುವ ಅಪಾಯ ಎದುರಾಗಿದೆ. ಇನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದರಿಂದ ಬೈಕ್‌, ಕಾರ್‌ ಸೇರಿ ಭಾರೀ ವಾಹನಗಳ ಚಾಲಕರು ಸರ್ಕಸ್‌ ಮಾಡುತ್ತ ವಾಹನ ಚಲಾಯಿಸಬೇಕಿದೆ.

ಇಲ್ಲಿನ ಸಮಸ್ಯೆ ಕುರಿತು ಸಂಘ-ಸಂಸ್ಥೆಯವರು ಮೌಖೀಕವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಇಲಾಖೆಯ ಎಇಇ ಬಿ.ಬಿ. ಪಾಟೀಲ ಮತ್ತು ಜೆಇಗಳು ಕಚೇರಿಗೆ ಬರುವುದೇ ಅಪರೂಪವಾಗಿದೆ. ಕೆಲಸ ಕಾರ್ಯ ನಿಮಿತ್ತ ಲೋಕೋಪಯೋಗಿ ಇಲಾಖೆ ಕಚೇರಿಗೆ ಹೋದರೆ ಇರುವ ಸಿಬ್ಬಂದಿ ಸಾಹೇಬರು ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿದ್ದಾರೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ರಸ್ತೆ ತುಂಬ ಗುಂಡಿ: ಪಟ್ಟಣದ ಜಹಿರುದ್ದೀನ್‌ ವೃತ್ತದ ಪಕ್ಕದಲ್ಲೇ ಸುಮಾರು 10 ಮೀಟರ್‌ ಅಗಲದಷ್ಟು ಗುಂಡಿ ಬಿದ್ದು ನಾಲ್ಕೈದು ತಿಂಗಳಾದರೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಡಾಂಬರ್‌ ಹಾಕಿ ದುರಸ್ತಿ ಮಾಡಲು ಮುಂದಾಗಿಲ್ಲ. ಹೀಗಾಗಿ ಬೈಕ್‌ ಇತರೆ ವಾಹನ ಸವಾರರು ಎದ್ದು ಬಿದ್ದು ಸಂಚಾರ ಮಾಡಬೇಕಾಗಿದೆ.

ಬೆಳಗದ ವಿದ್ಯುತ್‌ ದೀಪ: ಇನ್ನು ಹೆದ್ದಾರಿಯುದ್ದಕ್ಕೂ ರಸ್ತೆ ವಿಭಜಕ ಮಧ್ಯದಲ್ಲಿ ಅಳವಡಿಸಿದ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ರಾತ್ರಿ ಸಂಚರಿಸುವ ಪಾದಚಾರಿಗಳಿಗೆ ವಾಹನಗಳ ಲೈಟಿನ್‌ ಬೆಳಕೇ ಆಧಾರವಾಗಿದೆ. ಕಂಬಗಳಲ್ಲಿನ ವಿದ್ಯುತ್‌ ದೀಪ ಬೆಳಗದ್ದರಿಂದ ಹಲವು ಬಾರಿ ಅಪಘಾತಗಳು ಕೂಡ ಜರುಗಿವೆ ಎನ್ನುತ್ತಾರೆ ಸಾರ್ವಜನಿಕರು.

Advertisement

ಕೇಬಲ್‌ ಹಾಕಲು ರಸ್ತೆ ಅಗೆತ: ಬಿಎಸ್‌ಎನ್‌ಎಲ್‌ ಕೇಬಲ್‌ ಅಳವಡಿಸಲು ಗುಣಮಟ್ಟದ ರಸ್ತೆ ಅಗೆದು ಕೇಬಲ್‌ ಹಾಕಲಾಗಿದೆ. ಕೇಬಲ್‌ ಹಾಕಿದ ನಂತರ ರಸ್ತೆಯಲ್ಲಿ ತೋಡಿದ ಗುಂಡಿಗಳನ್ನು ಅರೆಬರೆಯಾಗಿ ಮುಚ್ಚಲಾಗಿದೆ. ಹೀಗಾಗಿ ಬೈಕ್‌ ಸವಾರರು ಆಗಾಗ ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ. ಇನ್ನು ಮಸರಕಲ್‌, ಸುಂಕೇಶ್ವರಹಾಳ, ಕರಡಿಗುಡ್ಡ, ಗಬ್ಬೂರ, ಜಾಲಹಳ್ಳಿ ಸೇರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ರಸ್ತೆ ಬಿರುಕು ಬಿಟ್ಟಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ದುರಸ್ತಿಗೆ ಆಗ್ರಹ: ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಕಿತ್ತಿಹೋದ ರಸ್ತೆ ವಿಭಜಕಕ್ಕೆ ಕಬ್ಬಿಣದ ರಕ್ಷಣಾ ಗೋಡೆಯನ್ನು ಮತ್ತೇ ಅಳವಡಿಸಬೇಕು. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು ಮತ್ತು ಹೆದ್ದಾರಿಯುದ್ದಕ್ಕೂ ರಸ್ತೆ ವಿಭಜಕ ಮಧ್ಯದಲ್ಲಿರುವ ಕಂಬಗಳಿಗೆ ಬಲ್ಬ್ಗಳನ್ನು ಹಾಕಿ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಕರವೇ ಮುಖಂಡ ಶಿವುಕುಮಾರ ಛಲುವಾದಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next