Advertisement

ಸ್ಲಂ ಬೋರ್ಡ್‌ ಮನೆ ನಿರ್ಮಾಣ ನನೆಗುದಿಗೆ

01:39 PM Dec 09, 2019 | Naveen |

„ನಾಗರಾಜ ತೇಲ್ಕರ್‌
ದೇವದುರ್ಗ:
ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ 250 ಮನೆಗಳಿಗೆ ಮರಳಿನ ಕೊರತೆ, ಜಾಗದ ಸಮಸ್ಯೆ, ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಂತಹ ಹಲವು ವಿಘ್ನ ಎದುರಾಗಿದೆ. ಹೀಗಾಗಿ ಎರಡು ತಿಂಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.

Advertisement

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಟ್ಟಣಕ್ಕೆ 250 ಮನೆಗಳು ಮಂಜೂರಾಗಿವೆ. 150 ಮನೆಗಳು ನಿರ್ಮಾಣ ಹಂತದಲ್ಲಿದ್ದು, ಉಳಿದ 100 ಮನೆಗಳಿಗೆ ಜಾಗದ ಕೊರತೆ ಎದುರಾಗಿದೆ. ಫಲಾನುಭವಿಗಳಾಗಿ ಆಯ್ಕೆಯಾದ ಎಸ್‌ಸಿ, ಎಸ್‌ಟಿ ಸಮುದಾಯದವರು 49,800 ರೂ. ಹಾಗೂ ಸಾಮಾನ್ಯ ವರ್ಗದವರು 74,700 ರೂ.ಗಳನ್ನು ಸ್ಲಂ ಬೋರ್ಡ್ ಗೆ ಡಿಡಿ ಮೂಲಕ ಕಟ್ಟಿದ್ದಾರೆ. ಆದರೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ 250ರಲ್ಲಿ ಸುಮಾರು 150 ಮನೆಗಳು ಛತ್ತು ಹಂತಕ್ಕೆ ಬಂದಿದ್ದು, ಕಾಮಗಾರಿ ಸ್ಥಗಿತಗೊಂಡಿದೆ.

ಮರಳು ಕೊರತೆ: ಮನೆಗಳ ನಿರ್ಮಾಣ ಆರಂಭವಾದಾಗ ಒಂದು ಟ್ರ್ಯಾಕ್ಟರ್‌ ಮರಳಿಗೆ 1,000 ರೂ.ದಿಂದ 1,500 ರೂ. ಇತ್ತು. ಇದೀಗ ಆ ದರ ಮರಳಿಗೆ 2 ಸಾವಿರದಿಂದ 2,500 ರೂ.ವರೆಗೆ ಹೆಚ್ಚಿದೆ. ಮರಳಿನ ದರ ದುಪ್ಪಟ್ಟು ಆಗಿದ್ದರಿಂದ ಗುತ್ತಿಗೆದಾರರು ತಮಗೆ ಹಾನಿ ಆಗುತ್ತದೆ ಎಂಬ ಲೆಕ್ಕಾಚಾರದಿಂದ ಮರಳು ಖರೀದಿಸಿ ಮನೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಆರೇಳು ಕಿ.ಮೀ. ಅಂತರದಲ್ಲಿ ಕೃಷ್ಣಾ ನದಿ ಹರಿಯುತ್ತಿರುವುದರಿಂದ ಮರಳಿಗೆ ಭಾರೀ ಬೇಡಿಕೆ ಹೆಚ್ಚಿದ್ದು ದರ ಹೆಚ್ಚುತ್ತಿದೆ. ಮರಳಿನ ದರ ಸ್ವಲ್ಪ ಕಡಿಮೆಯಾದ ನಂತರ ಮರಳು ಖರೀದಿಸುವ ಇರಾದೆ ಎನ್ನುತ್ತಾರೆ ಗುತ್ತಿಗೆದಾರರು.

ಜಾಗದ ಸಮಸ್ಯೆ: ಕೊಳಚೆ ನಿರ್ಮೂಲನಾ ಮಂಡಳಿಗೆ ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳು ಡಿಡಿ ಮೂಲಕ ಹಣ ಕಟ್ಟಿರುವ ನೂರಾರು ಫಲಾನುಭವಿಗಳಿಗೆ ಜಾಗದ ಸಮಸ್ಯೆ ಉಂಟಾಗಿದೆ. ನಿಗಮದ ನಿಯಮದಂತೆ ಒಂದು ಮನೆಗೆ ಕನಿಷ್ಠ 25×30 ಅಳತೆಯ ನಿವೇಶನ ಇರಬೇಕು. ಆದರೆ ಬಹುತೇಕ ಫಲಾನುಭವಿಗಳ ಮನೆ ನಿರ್ಮಾಣಕ್ಕೆ ಜಾಗೆ ಕಡಿಮೆ ಇರುವ ಕಾರಣ ಮನೆ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ. ಜಾಗದ ಸಮಸ್ಯೆ ಬಗೆಹರಿದ ನಂತರವೇ ಮನೆಗಳನ್ನು ನಿರ್ಮಿಸಲಾಗುತ್ತದೆ ಎನ್ನುತ್ತಾರೆ ಗುತ್ತಿಗೆದಾರರು.

ಫಲಾನುಭವಿಗಳಿಗೆ ಚಿಂತೆ: ಎರಡು ತಿಂಗಳಿಂದ ಮನೆಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದರಿಂದ ಫಲಾನುಭವಿಗಳು ತಮ್ಮ ಮನೆ ಯಾವಾಗ ಪೂರ್ಣಗೊಳ್ಳುವುದೋ ಎಂಬ ಚಿಂತೆಯಲ್ಲಿದ್ದಾರೆ.

Advertisement

ಮನೆಗಳ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಗುತ್ತಿಗೆದಾರರು ಅನುದಾನ ಬಂದ ನಂತರ ಕಾಮಗಾರಿ ಪುನಾರಂಭಿಸುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಹಣ ಕಟ್ಟಲು ಹಿಂಜರಿಕೆ: ಕೊಳಚೆ ನಿರ್ಮೂಲನಾ ಮಂಡಳಿಗೆ ಈಗಾಗಲೇ 250 ಜನ ಫಲಾನುಭವಿಗಳು ಡಿಡಿ ಮೂಲಕ ಹಣ ಕಟ್ಟಿದ್ದಾರೆ. ಈ ಫಲಾನುಭವಿಗಳ ಮನೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಹೀಗಾಗಿ ಸ್ಲಂ ಬೋರ್ಡ್‌ಗೆ ಹಣ ಕಟ್ಟಿ ಮನೆ ಪಡೆಯಬೇಕೆನ್ನುವ ಇತರರು ಕೂಡಾ ಡಿಡಿ ಮೂಲಕ ಹಣ ಕಟ್ಟಿ ಫಲಾನುಭವಿಗಳಾಗಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

ಇದಲ್ಲದೇ ತಾಲೂಕಿನಲ್ಲಿ ರಾಜೀವಗಾಂಧಿ, ಬಸವ, ಅಂಬೇಡ್ಕರ್‌ ಸೇರಿ ವಿವಿಧ ವಸತಿ ಯೋಜನೆಗಳ ಮನೆಗಳು ಪೂರ್ಣಗೊಂಡಿಲ್ಲ. ಹೀಗಾಗಿ ಬಹುತೇಕ ಸೂರು ರಹಿತರು ಸ್ಲಂಬೋಡ್‌ರ ಮನೆಗಳ ಸೌಲಭ್ಯ ಪಡೆಯಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಎರಡು ತಿಂಗಳು ಕಳೆದರೂ ಆರಂಭವಾಗಿಲ್ಲ.
ಚನ್ನಬಸವ, ಫಲಾನುಭವಿ

ಕೆಲ ಮನೆಗಳಿಗೆ ಜಾಗದ ಸಮಸ್ಯೆ ಉಂಟಾಗಿದೆ. ನಿಗಮದಿಂದ ಅನುದಾನ ವಿಳಂಬವಾಗಿದ್ದರಿಂದ ಗುತ್ತೆದಾರರು ಕೆಲಸ ನಿಲ್ಲಿಸಿದ್ದಾರೆ. ವಾರದಲ್ಲಿ ಪ್ರಾರಂಭಿಸಲಾಗುತ್ತದೆ.
ರಂಗವಲ್ಲ,
ಕೊಳಚೆ ನಿರ್ಮೂಲನಾ ಮಂಡಳಿ, ಎಇಇ

Advertisement

Udayavani is now on Telegram. Click here to join our channel and stay updated with the latest news.

Next