ದೇವದುರ್ಗ: ಬೇಸಿಗೆ ಬಿಸಿಲಿನಿಂದ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದ್ದು, ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ತಾಲೂಕಿನ ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಹೇಮನಾಳ ಗ್ರಾಮದಲ್ಲಿ ಕುಡಿವ ನೀರಿಗಾಗಿ ಅಲೆದಾಡುವಂತ ಪರಿಸ್ಥಿತಿ ಬಂದೊದಗಿದ್ದು, ಕೈಪಂಪ್ ಬೋರ್‌ವೆಲ್ ನೀರೇ ಗತಿ ಎನ್ನುವಂತಾಗಿದೆ.
ಕಳೆದೆರಡು ವರ್ಷಗಳ ಹಿಂದೆ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ. ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಮೀನಮೇಷ ಎಣಿಸಿದ್ದರಿಂದ ನಿರುಪಯುಕ್ತವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಹೇಮನಾಳ ಗ್ರಾಪಂ ಚುನಾವಣೆ ಜರುಗಿಲ್ಲ. ಗ್ರಾಮದಲ್ಲಿ ಸುಮಾರು 900 ಜನಸಂಖ್ಯೆ ಇದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ಮರೀಚಿಕೆ ಎಂಬ ಮಾತುಗಳು ಕೇಳಿಬರುತ್ತಿದೆ.
ಅಧಿಕಾರಿಗಳ ಹುಸಿ ಭರವಸೆ: ಕೊಳ್ಳೂರು, ಗಬ್ಬೂರ, ಮದರಕಲ್ ಸೇರಿ ಇತರೆ ಗ್ರಾಮಗಳಿಂದ ಬೈಕ್ ಮೇಲೆ ಶುದ್ಧ ನೀರು ತರುವ ಪರಿಸ್ಥಿತಿ ಬಂದಿದೆ. ಶುದ್ಧ ನೀರು ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಗ್ರಾಮಸ್ಥರಿಗೆ ನೀರಿನ ಭಾಗ್ಯ ಕಲ್ಪಿಸುವಂತೆ ಹಲವು ಬಾರಿ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳ ಹುಸಿ ಭರವಸೆಯಲ್ಲಿ ನೂರಾರು ಜನ ಕುಡಿವ ನೀರಿಗಾಗಿ ಎಲ್ಲೆಂದರಲ್ಲಿ ಅಲೆಯಬೇಕಾಗಿದೆ.
ವಿದ್ಯುತ್ ಇದ್ದಾಗ ಮಾತ್ರ ನೀರು: ಕಳೆದ ನಾಲ್ಕು ವರ್ಷಗಳಿಂದ ಬರದ ಛಾಯೆ ಆವರಿಸಿದ್ದು, ಮಳೆ ವೈಫಲ್ಯದಿಂದ ಕೆರೆಗಳು ಬತ್ತಿ ಹೋಗಿವೆ. ಅಂರ್ತಜಲ ಮಟ್ಟ ಕುಸಿದಿದ್ದು, ನೀರಿನ ಬವಣೆ ಹೇಳತೀರದಾಗಿದೆ. ಚಿಕ್ಕಬೂದೂರು, ಸಲಿಕ್ಯಾಪುರು, ಕಾಟಮಳ್ಳಿ, ಅಮರಾಪುರು, ಕರಡಿಗುಡ್ಡ ಸೇರಿ ತಾಂಡಾ, ದೊಡ್ಡಿಗಳಲ್ಲಿ ಕುಡಿವ ನೀರಿನ ಬವಣೆ ಶುರುವಾಗಿದೆ. ವಿದ್ಯುತ್ ಸಂಪರ್ಕವಿದ್ದಾಗ ಮಾತ್ರ ನೀರು ಇಲ್ಲವಾದಲ್ಲಿ ಜನರ ಪರದಾಟ, ಗೋಳಾಟ ತಪ್ಪಿದ್ದಲ್ಲ.
ಜಾನುವಾರುಗಳಿಗೆ ಕುಡಿವ ನೀರಿನ ಜತೆಗೆ ಮೇವಿನ ಕೊರತೆಯೂ ಕಾಡುತ್ತಿದೆ. ಜಾನುವಾರುಗಳು ಎಲ್ಲೆಂದರಲ್ಲಿ ಅಲೆದರೂ ಮೇವು ಸಿಗುತ್ತಿಲ್ಲ. ಹೊಲ-ಗದ್ದೆಗಳು ಬರಡು ಭೂಮಿಯಂತಾಗಿವೆ. ತಾಲೂಕು ಆಡಳಿತ ಮೇವಿನ ಬ್ಯಾಂಕ್ ಸ್ಥಾಪಿಸುವಲ್ಲಿ ಹಿಂದೆ ಬಿದ್ದಿದೆ. ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳು ಬ್ಯೂಜಿಯಾದ್ದರಿಂದ ಜನ-ಜಾನುವಾರುಗಳು ಕುಡಿವ ನೀರಿಗಾಗಿ ಪೇಚಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಬತ್ತಿದ ಕೃಷ್ಣೆ: ಕೃಷ್ಣಾ ನದಿ ಬತ್ತಿದೆ. ನದಿ ತೀರದ ಬಹುತೇಕ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ನೀರಿನ ಬವಣೆ ಸರಿದೂಗಿಸಲು ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವನೆ ತಾಳಿದ್ದರಿಂದ ನೀರಿಗಾಗಿ ಜನರು ಅಲೆಯಬೇಕಾಗಿದೆ. ಬೇಸಿಗೆ ಆರಂಭದ ಮುನ್ನವೇ ಇಂಥ ಸಮಸ್ಯೆ ಬಗ್ಗೆ ತಾಲೂಕು ಆಡಳಿತ, ಗ್ರಾಪಂ ಆಡಳಿತ ಮಂಡಳಿ ನಿಗಾವಹಿಸದೇ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನೀರಿನ ಹಾಹಾಕಾರ ಶುರುವಾಗಲು ಮೂಲ ಕಾರಣ ಎನ್ನಲಾಗುತ್ತಿದೆ.
ಹೇಮನಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಸಾಕಷ್ಟಿರುವುದರಿಂದ ವಿದ್ಯುತ್ ಸಂಪರ್ಕವಿಲ್ಲದೇ ನಿರುಪಯುಕ್ತವಾದ ಶುದ್ಧ ಕುಡಿವ ನೀರಿನ ಘಟಕ ಕೂಡಲೇ ಪ್ರಾರಂಭಿಸಬೇಕು ಎಂದು ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಆಗ್ರಹಿಸಿದ್ದಾರೆ.
ಶುದ್ಧ ಕುಡಿವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ. ತೀರ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು.
•
ಹಾಲಸಿದ್ದಪ್ಪ ಪೂಜೇರಿ,
ತಾಪಂ ಇಒ